ಬಿಸಿಲಿನ ಝಳಕ್ಕೆ ತತ್ತರಿಸಿದ ರಾಜ್ಯ ರಾಜಧಾನಿ – ಫೆಬ್ರವರಿಯಲ್ಲೇ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ  

ಬಿಸಿಲಿನ ಝಳಕ್ಕೆ ತತ್ತರಿಸಿದ ರಾಜ್ಯ ರಾಜಧಾನಿ – ಫೆಬ್ರವರಿಯಲ್ಲೇ ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ  

ಸದಾ ಕೂಲ್‌ ಕೂಲ್‌ ಆಗಿರ್ತಿದ್ದ ಸಿಲಿಕಾನ್‌ ಸಿಟಿ ಬೆಂಗಳೂರು, ಈಗ ಚಳಿಗಾಲದಲ್ಲೇ ಬಿಸಿಲಿನ ತಾಪಕ್ಕೆ ತತ್ತರಿಸಿದೆ. ಕಳೆದ ಎರಡು ಮೂರು ದಿನಗಳಿಂದ ಬೆಂಗಳೂರಿನಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದು, ಜನರು ತತ್ತರಿಸಿಹೋಗಿದ್ದಾರೆ.

ಸಾಮಾನ್ಯವಾಗಿ ಮಾರ್ಚ್‌ನಲ್ಲಿ‌ ಆರಂಭವಾಗುವ ಬಿಸಿಲಿನ ಝಳ ಈ ಬಾರಿ ಫೆಬ್ರವರಿಯಲ್ಲೇ ಶುರುವಾಗಿದೆ. ಪ್ರಮುಖವಾಗಿ ಬೆಂಗಳೂರಿನಲ್ಲಿ ಸುಡುಬಿಸಿಲಿನಿಂದ ಜನರು ರೋಸಿಹೋಗಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ 32-33 ಡಿಗ್ರಿ ಸೆಲ್ಸಿಯಸ್​ ವರೆಗೂ ಉಷ್ಣಾಂಶ ದಾಖಲಾಗುತ್ತಿದೆ. ಕೇವಲ ಬೆಂಗಳೂರು ಅಷ್ಟೇ ಅಲ್ಲದೇ ಕಲಬುರಗಿಯಲ್ಲಿ 36 ಡಿಗ್ರಿ ಹಾಗೂ ಬಾಗಲಕೋಟೆ, ಧಾರವಾಡ, ಗದಗ, ಕಾರವಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ 34.4 ಡಿಗ್ರಿ ಉಷ್ಣಾಂಶ ದಾಖಲಾಗಿದೆ.

ಇದನ್ನೂ ಓದಿ: ದೆಹಲಿಯಲ್ಲಿ ನಡುಗಿದ ಭೂಮಿ – 4.0 ತೀವ್ರತೆಯ ಭೂಕಂಪನ, ಬೆಚ್ಚಿ ಬಿದ್ದ ಜನ

ಮುಂದಿನ ಏಳು ದಿನಗಳವರೆಗೆ ರಾಜ್ಯದಲ್ಲಿ ಒಣಹವೆ ಮುಂದುವರೆಯಲಿದೆ. ಜೊತೆಗೆ ಮುಂದಿನ 48 ಗಂಟೆಯೊಳಗೆ ಒಂದೆರಡು ಡಿಗ್ರಿ ಗರಿಷ್ಠ ಹಾಗೂ ಕನಿಷ್ಠ ಉಷ್ಣಾಂಶದಲ್ಲಿಯೂ ಏರಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್. ಪಾಟೀಲ್ ಮುನ್ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಹಗಲಿನ ಹೊತ್ತಿನಲ್ಲಿ ತಾಪಮಾನವು ದೆಹಲಿಗಿಂತಲೂ ಹೆಚ್ಚಾಗಿರುವುದು ಕಂಡುಬಂದಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ರಾಷ್ಟ್ರ ರಾಜಧಾನಿಯಲ್ಲಿ ಇದು 29 ಡಿಗ್ರಿ ಸೆಲ್ಸಿಯಸ್ ಆಗಿದೆ. ಆದಾಗ್ಯೂ, ರಾತ್ರಿ ವೇಳೆ ಬೆಂಗಳೂರಿನಲ್ಲಿ ತಂಪಾದ ವಾತಾವರಣ ಇದೆ. ಸಾಮಾನ್ಯವಾಗಿ ರಾತ್ರಿ ಸುಮಾರು 17 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದೆ. ಇದು ಸಾಮಾನ್ಯಕ್ಕಿಂತ 0.1 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ದೆಹಲಿಯು ರಾತ್ರಿಯಲ್ಲಿ 15 ಡಿಗ್ರಿ ಸೆಲ್ಸಿಯಸ್​​ಗಿಂತ ಕಡಿಮೆ ತಾಪಮಾನದೊಂದಿಗೆ ಹೆಚ್ಚು ತಂಪಾಗಿರುತ್ತದೆ.

ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಬಿಸಿಲಿನ ಝಳ ಜೋರಾಗಿದ್ದು, ಜನರು ತತ್ತರಿಸಿ ಹೋಗಿದ್ದಾರೆ.‌ ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Shwetha M

Leave a Reply

Your email address will not be published. Required fields are marked *