ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ನ್ಯೂಸ್! – ವಿಶೇಷ ಟೂರ್ ಪ್ಯಾಕೇಜ್ ಘೋಷಿಸಿದ KSTDC

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ನ್ಯೂಸ್ ಇದೆ. ಇನ್ಮುಂದೆ ಬೆಂಗಳೂರಿನಿಂದ ತಿರುಪತಿಗೆ ಒಂದೇ ದಿನದಲ್ಲಿ ಹೋಗಿ ಬರಬಹುದು. ಇದೀಗ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ದರ 5% ಏರಿಕೆ – ಸಿಎಂ, ಡಿಸಿಎಂಗೆ ಪತ್ರ ಬರೆದ ಸಂಸದ ತೇಜಸ್ವಿ ಸೂರ್ಯ
ತಿರುಪತಿ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಇದೀಗ ತಿಮ್ಮಪ್ಪನ ಭಕ್ತರಿಗೆ ಅನುಕೂಲವಾಗಲೆಂದು ಸುಲಭ ದರ್ಶನದ ವಿಶೇಷ ಪ್ಯಾಕೇಜ್ ನನ್ನು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಘೋಷಣೆ ಮಾಡಿದೆ. ಬೆಂಗಳೂರಿನಿಂದ ತಿರುಪತಿಗೆ ಒಂದು ದಿನದ ವಿಶೇಷ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದೆ. ಬೆಂಗಳೂರಿನಿಂದ ನೇರವಾಗಿ ಹೊರಡುವ ಈ ಎಸಿ ಬಸ್ ಭಕ್ತರಿಗೆ ತಿರುಪತಿ ತಿಮ್ಮಪ್ಪನ ಸನ್ನಿಧಾನದ ಸರ್ವ ದರ್ಶನ ಹಾಗೂ ಪದ್ಮಾವತಿ ದೇಗುಲ ದರ್ಶನ ಕೂಡ ಮಾಡಿಸಲಿದೆ.
ಈ ಬಸ್ ಬೆಂಗಳೂರಿನ ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದ ಕೆಎಸ್ಟಿಡಿಸಿ ಬುಕಿಂಗ್ ಕೌಂಟರ್ ನಿಂದ ರಾತ್ರಿ 8 ಗಂಟೆಗೆ ಹೊರಡಲಿದೆ. ಬಳಿಕ ಮರುದಿನ ಬೆಳಗಿನ ಜಾವ 2 ಗಂಟೆಗೆ ತಿರುಪತಿ ತಲುಪಲಿದೆ. ನಂತರ ಪ್ರಯಾಣಿಕರು ರೆಡಿಯಾಗಲು ರೂಮ್ ವ್ಯವಸ್ಥೆ ಜೊತೆಗೆ 2.30 ಗಂಟೆ ಸಮಯ ನೀಡ್ತಾರೆ. ಉಪಹಾರದ ನಂತರ, ಭಕ್ತರನ್ನ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದ ದರ್ಶನಕ್ಕೆ ಕರೆದೊಯ್ಯಲಾಗುವುದು. ಕ್ಯೂನ ಜಂಜಾಟವಿಲ್ಲದೇ ಭಕ್ತರು ವೆಂಕಟೇಶ್ವರನ ಕಣ್ತುಂಬಿಕೊಳ್ಳಬಹುದು. ತಿಮ್ಮಪ್ಪನ ದರ್ಶನದ ಬಳಿಕ ಪ್ರಯಾಣಿಕರನ್ನ ಶ್ರೀ ಪದ್ಮಾವತಿ ದೇವಾಲಯಕ್ಕೂ ಕರೆದೊಯ್ದು ದರ್ಶನ ಮಾಡಿಸಲಿದ್ದಾರೆ. ಎರಡು ದೇವಾಲಯಗಳ ದರ್ಶನ ಪಡೆದ ನಂತ ಪ್ರಯಾಣಿಕರನ್ನ ಬೆಂಗಳೂರಿಗೆ ಕರೆತರಲಾಗುತ್ತೆ. ಈ ಮೂಲಕ ಒಂದು ದಿನದ ಯಾತ್ರೆ ಮುಕ್ತಾಯವಾಗುತ್ತದೆ.
ಈ ಪ್ಯಾಕೆಜ್ ದರ ಎಷ್ಟು?
KSTDC ಈ ವಿಶೇಷ ಪ್ಯಾಕೇಜ್ನಲ್ಲಿ ಡಿಲಕ್ಸ್ ಎಸಿ ಬಸ್ಗೆ ಪ್ರತಿ ವ್ಯಕ್ತಿಗೆ ₹2,270 ಮತ್ತು ವೋಲ್ವೋ ಎಸಿ ಬಸ್ಗೆ ಪ್ರತಿ ವ್ಯಕ್ತಿಗೆ ₹2,300 ವೆಚ್ಚ ನಿಗದಿಪಡಿಸಲಾಗಿದೆ. KSTDC ಅಧಿಕೃತ ವೆಬ್ಸೈಟ್ ಮೂಲಕ ಟಿಕೆಟ್ ಬುಕ್ ಮಾಡಬಹುದು. ಇನ್ನು ಈ ಪ್ಯಾಕೇಜ್ನಲ್ಲಿ ತಿರುಪತಿ ದರ್ಶನ, ಟಿಕೆಟ್ ಬ್ರೇಕ್ ಫಾಸ್ಟ್ ಹಾಗೂ ಊಟದ ಜೊತೆಗೆ ಲಡ್ಡು ಪ್ರಸಾದ ಸೇರಿರುತ್ತದೆ. ಒಂದು ದಿನದಲ್ಲಿ ಜನಜಂಜಾಟವಿಲ್ಲ ವೆಂಕಟೇಶ್ವರನ ದರ್ಶನ ಪಡೆಯಲು ಇಚ್ಚಿಸುವವರಿಗೆ ಕೆಎಸ್ಟಿಡಿಸಿ ಈ ವಿಶೇಷ ಪ್ಯಾಕೇಜ್ ಉತ್ತಮವಾಗಿದೆ.

ನೋಡಿರಿ

