ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ತೆರಳಿದ ಸಾಫ್ಟ್‌ವೇರ್ ಉದ್ಯೋಗಿಯ ದುರಂತ ಅಂತ್ಯ!

ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ತೆರಳಿದ ಸಾಫ್ಟ್‌ವೇರ್ ಉದ್ಯೋಗಿಯ ದುರಂತ ಅಂತ್ಯ!

ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬರು ರಜೆಯ ದಿನವನ್ನು ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ಮಾಡಿ ಕಳೆಯಲು ತೆರಳಿದ್ದಾಗ ದುರಂತ ಅಂತ್ಯ ಕಂಡಿರುವ ಘಟನೆ ಜಿಗಣಿ ಸಮೀಪದ ಯಲ್ಲಮ್ಮನ ದೊಡ್ಡಿ ಬಳಿ ನಡೆದಿದೆ.

ಮೃತರನ್ನು ಆಂಧ್ರಪ್ರದೇಶದ ವಿಜಯವಾಡ ಮೂಲದ, ಬೆಂಗಳೂರಿನ ಹಲಸೂರಿನಲ್ಲಿ ವಾಸವಾಗಿದ್ದ 30 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಗಣೇಶ್ ಆಂಜನೇಯ ವಿನಯ್ ಎಂದು ಗುರುತಿಸಲಾಗಿದೆ.

ಐಐಟಿ ದೆಹಲಿಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದ ವಿನಯ್, ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಯುಎಕ್ಸ್ (UX) ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅಕ್ಟೋಬರ್ 2ರ ಗಾಂಧಿ ಜಯಂತಿ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಇನ್‌ಸ್ಟಾಗ್ರಾಮ್ ಗ್ರೂಪ್ ಮೂಲಕ ಪರಿಚಯವಾದ 8 ಜನರ ತಂಡದೊಂದಿಗೆ ಇವರು ಟ್ರೆಕ್ಕಿಂಗ್‌ಗೆ ತೆರಳಿದ್ದರು. ಈ ತಂಡದಲ್ಲಿ ವಿನಯ್ ಅವರ ಭಾವಿ ಪತ್ನಿ (ಪಶುವೈದ್ಯೆ) ಕೂಡ ಸೇರಿದ್ದರು. ಟ್ರೆಕ್ಕಿಂಗ್ ಮುಗಿಸಿ ವಾಪಸಾಗುವಾಗ ಯಲ್ಲಮ್ಮನ ದೊಡ್ಡಿ ಬಳಿ ಇರುವ ಕೈಬಿಟ್ಟ ಕಲ್ಲು ಕ್ವಾರಿಯ ನೀರಿನಲ್ಲಿ ಈಜಲು ಇಡೀ ತಂಡ ಧುಮುಕಿತ್ತು.

ಇದನ್ನೂ ಓದಿ: ಸಾವಿಗೆ ಹೆದರಲಿಲ್ಲ, ವಿಮಾನವನ್ನೇ ಪತನಗೊಳಿಸಲು ಬಯಸಿದ್ದೆ – ಸತ್ಯ ಬಾಯಿಬಿಟ್ಟ ಫ್ಲೈದುಬೈ ಕೋ- ಪೈಲಟ್

ಸುಮಾರು ಒಂದೂವರೆ ಗಂಟೆಗಳ ಕಾಲ ಈಜಾಡಿದ ಬಳಿಕ, ಸಂಜೆ 5:30 ರ ಸುಮಾರಿಗೆ ವಿನಯ್ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದರು. ಸ್ನೇಹಿತರು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗದಿದ್ದಾಗ ಜಿಗಣಿ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಎಸ್‌ಡಿಆರ್‌ಎಫ್ (SDRF), ಎನ್‌ಡಿಆರ್‌ಎಫ್ (NDRF) ಪಡೆಗಳು, ಸ್ಥಳೀಯ ಈಜುಗಾರರು ಹಾಗೂ ಮಲ್ಪೆಯ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಮತ್ತು ಅವರ ತಂಡ ಸುದೀರ್ಘ ಕಾರ್ಯಾಚರಣೆ ನಡೆಸಿತು. ನಂತ್ರ ವಿನಯ್ ಶವವಾಗಿ ಪತ್ತೆಯಾಗಿದ್ದಾನೆ.

ಈ ಘಟನೆ ಗಣೇಶ್ ಅವರ ಕುಟುಂಬ ಮತ್ತು ಸ್ನೇಹಿತರಲ್ಲಿ ತೀವ್ರ ಆಘಾತ ಮೂಡಿಸಿದೆ. ಉದ್ಯೋಗದ ಒತ್ತಡದಿಂದ ದೂರವಾಗಿ ರಜೆಯ ದಿನವನ್ನು ಸಂತೋಷದಿಂದ ಕಳೆಯಲು ಹೊರಟಿದ್ದ ಯುವಕನ ಬದುಕು ಹೀಗೆ ದುರಂತದಲ್ಲಿ ಅಂತ್ಯವಾಗಿರುವುದು ನೋವಿನ ಸಂಗತಿಯಾಗಿದೆ. ಟ್ರೆಕ್ಕಿಂಗ್, ಪ್ರವಾಸ ಅಥವಾ ಸಾಹಸ ಚಟುವಟಿಕೆಗಳಿಗೆ ತೆರಳುವವರು ಸ್ಥಳದ ಅಪಾಯಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಸುರಕ್ಷತಾ ನಿಯಮಗಳನ್ನು ಪಾಲಿಸುವುದು, ಅಪಾಯಕಾರಿ ಪ್ರದೇಶಗಳಿಗೆ ತೆರಳದಿರುವುದು ಹಾಗೂ ಸ್ಥಳೀಯ ಮಾರ್ಗದರ್ಶಕರ ಸಲಹೆ ಪಡೆಯುವುದು ಅತ್ಯಂತ ಮುಖ್ಯ

Kishor KV

Leave a Reply

Your email address will not be published. Required fields are marked *