ಯೋಗೇಶ್ ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ಪ್ರಕಟ – ವಿನಯ್ ಕುಲಕರ್ಣಿ ಸೇರಿ 21ರ ಪೈಕಿ 19 ಮಂದಿ ಆರೋಪಿಗಳು ದೋಷಿ

ಧಾರವಾಡ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಅಂತಿಮ ತೀರ್ಪು ಪ್ರಕಟವಾಗಿದೆ. ಮಾಜಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿ 21ರ ಪೈಕಿ 19 ಮಂದಿ ಆರೋಪಿಗಳು ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು (ಏಪ್ರಿಲ್ 15) ತೀರ್ಪು ನೀಡಿ ಆದೇಶ ಹೊರಡಿಸಿದೆ.
21 ಆರೋಪಿಗಳ ಪೈಕಿ ಇಬ್ಬರು ಮಾಫಿಸಾಕ್ಷಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೈಕಿ ಕೋರ್ಟ್, 19 ಆರೋಪಿಗಳನ್ನ ದೋಷಿ ಎಂದು ತೀರ್ಪು ನೀಡಿದೆ. ಎ1 ಬಸವರಾಜ ಮುತ್ತಗಿ ಮಾಫಿಸಾಕ್ಷಿಯಾಗಿ ಹೇಳಿಕೆ ನೀಡಿದ್ದರೆ, ಎ17 ಶಿವಾನಂದ ಮಾಫಿ ಸಾಕ್ಷಿಯಾದ ಬಳಿಕವೂ ಪ್ರತಿಕೂಲ ಹೇಳಿಕೆ ನೀಡಿದ್ದಾರೆ. ಹೀಗಾಗಿ ಮತ್ತೆ ಎ17 ಆರೋಪಿಯನ್ನಾಗಿಸುವಂತೆ ಸಿಬಿಐ ಅರ್ಜಿ ಸಲ್ಲಿಸಿದೆ. ಇದರಿಂದ ಇವರಿಬ್ಬರನ್ನು ಹೊರತುಪಡಿಸಿ ಉಳಿದವರ ತೀರ್ಪು ಪ್ರಕಟಿಸಿದೆ.
ಎ2 ವಿಕ್ರಮ್, ಎ3 ಕೀರ್ತಿ ಕುಮಾರ್, ಎ 4 ಸಂದೀಪ್, ಎ5 ವಿನಾಯಕ್, ಎ6 ಮಹಾಬಲೇಶ್ವರ್ ಅಲಿಯಾಸ್ ಮುದಕ, ಎ 7 ಸಂತೋಷ್, ಎ 8 ದಿನೇಶ್, ಎ 9 ಅಶ್ವಥ್, ಎ10 ಸುನಿಲ್, ಎ 11 ನಜೀರ್ ಅಹಮದ್, ಎ 12 ಷಾನವಾಜ್, ಎ 13 ನೂತನ್ , ಎ14 ಹರ್ಷಿತ್, ಎ15 ವಿನಯ್ ಕುಲಕರ್ಣಿ, ಎ 16 ಚಂದ್ರು ಮಾಮ, ಎ18 ವಿಕಾಸ್ ಕಲಬುರ್ಗಿ, ಎ 19 ಚನ್ನಕೇಶವ ಟಿಂಗರಿಕರ್, ಎ20 ವಾಸುದೇವ ನಿಲೇಕಣಿ, ಎ21 ಸೋಮಶೇಖರ್ ನ್ಯಾಮಗೌಡ.
ಇದನ್ನೂ ಓದಿ: 180 ಅಪ್ರಾಪ್ತೆಯರ ಜೊತೆ 19 ವರ್ಷದ ಯುವಕನ ಕಾಮಪುರಾಣ – ಅಶ್ಲೀಲ ವಿಡಿಯೋ ರೆಕಾರ್ಡ್ , ಬ್ಲಾಕ್ಮೇಲ್!
ಧಾರವಾಡದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಯೋಗೇಶ್ ಗೌಡ ಅವರನ್ನು 2016ರ ಜೂನ್ 15ರಂದು ಸಪ್ತಾಪುರ ಬಡಾವಣೆಯ ಜಿಮ್ನಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಈ ಸಂಬಂಧ ಧಾರವಾಡದ ಉಪನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಆರು ಜನರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆದ್ರೆ, ಕೊಲೆಯಾದ ಯೋಗೇಶ್ ಗೌಡ ಕುಟುಂಬದ ಸದಸ್ಯರ ಒತ್ತಾಯದ ಮೇರೆಗೆ 2019ರಲ್ಲಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಬಳಿಕ ಸಿಬಿಐ ತನಿಖೆಯಲ್ಲಿ ಇದು ರಾಜಕೀಯ ಪ್ರೇರಿತ ಕೊಲೆ ಎಂಬುದು ತಿಳಿದು ಬಂದಿತ್ತು. ಅಲ್ಲದೇ ಈ ಕೊಲೆಯಲ್ಲಿ ವಿನಯ್ ಕುಲಕರ್ಣಿ ಕೈವಾಡವಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ 2020ರ ನವೆಂಬರ್ 5ರಂದು ಸಿಬಿಐ ಅಧಿಕಾರಿಗಳು, ವಿನಯ್ ಕುಲಕರ್ಣಿ ಅವರನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ವಿನಯ್ ಸೇರಿ ಒಟ್ಟು 21 ಮಂದಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಟ್ಟಿ ಸಲ್ಲಿಸಿದ್ದರು. ಇತ್ತೀಚೆಗಷ್ಟೇ ವಿನಯ್ ಕುಲಕರ್ಣಿ ಸುಪ್ರೀಂ ಕೋರ್ಟ್ನಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದರು.

ನೋಡಿರಿ

