ಖಾಸಗಿ ಶಾಲೆಗಳಿಗೆ ಬಾಂಬ್‌ ಬೆದರಿಕೆ – ಶನಿವಾರ ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ ರಜೆ ಇದ್ಯಾ?  

ಖಾಸಗಿ ಶಾಲೆಗಳಿಗೆ ಬಾಂಬ್‌ ಬೆದರಿಕೆ – ಶನಿವಾರ ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ ರಜೆ ಇದ್ಯಾ?  

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ 60 ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಆಗಂತುಕರು ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಹಾಕಿದ್ದರು. ಹೀಗಾಗಿ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಾಂಬ್‌ ಬೆದರಿಕೆ ಬಂದ ಬೆನ್ನಲ್ಲೇ ಪೋಷಕರು ಮಕ್ಕಳನ್ನು ಕರೆದುಕೊಂಡು ಹೋಗಲು ಶಾಲೆಗೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಖಾಸಗಿ ಶಾಲೆಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿತ್ತು. ಆದರೆ ಶನಿವಾರ ಕೂಡ ಶಾಲೆಗೆ ರಜೆ ನೀಡಲಾಗಿದೆ ಎಂದು ವದಂತಿ ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ. ದಯಾನಂದ್ ಸ್ಪಷ್ಟನೆ ನೀಡಿದ್ದಾರೆ. ಶನಿವಾರ ಎಂದಿನಂತೆ ಬೆಂಗಳೂರಿನ ಶಾಲಾ-ಕಾಲೇಜು ನಡೆಯುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಫ್ಲ್ಯಾಟ್‌ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ಲಕ್ಷಾಂತರ ರೂಪಾಯಿ ದೋಖಾ!

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಬಿ. ದಯಾನಂದ್,  ಯಾವುದೇ ಗಂಭೀರತೆ ಇಲ್ಲ, ಹೀಗಾಗಿ ಶನಿವಾರ ಶಾಲೆಗಳಿಗೆ ರಜೆ ಇಲ್ಲ. ಪೋಷಕರು ಯಾವುದೇ ಆತಂಕ ಪಡುವುದು ಬೇಡ. 60ಕ್ಕೂ ಹೆಚ್ಚು ಶಾಲೆಗಳಿಗೆ ಮೇಲ್ ಬಂದಿವೆ. ಯಾವ ರೀತಿಯ ಆತಂಕ ಪಡುವಂತಿಲ್ಲ. ನಾವು ಶಾಲೆಗೆ ರಜೆ ನೀಡಿಲ್ಲ. ಯಾವುದೇ ತುರ್ತು ಅನಿವಾರ್ಯತೆ ಇದ್ದರೆ ಶಾಲಾ ಶಿಕ್ಷಣ ಇಲಾಖೆ ಸೂಚನೆ ನೀಡುತ್ತೆ. ಪೋಷಕರು ಯಾವುದೇ ಆತಂಕ ಪಡುವುದು ಬೇಡ. ದುರದ್ದೇಶಪೂರ್ವಕವಾದ ಮೇಲ್ ಬಂದಿರಬಹುದು. ಸರ್ಕಾರ ಈ ಬಗ್ಗೆ ತನಿಖೆಗೆ ಮುಂದಾಗಿದೆ. ನಾಳೆ ಶಾಲೆ ಹಾಗೂ ಕಾಲೇಜ್​ಗಳು ಸಹಜವಾಗಿ ನಡೆಯುತ್ತೆ. ಶನಿವಾರ ಯಾವುದೇ ರಜೆ ಇರುವುದಿಲ್ಲ. ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಹೀಗಾಗಿ ಶನಿವಾರ ಸಹಜ ಶಾಲೆಗಳು ಇರುತ್ತೆ ಎಂದು ಹೇಳಿದ್ದಾರೆ.

ಶುಕ್ರವಾರ ಬೆಳಗ್ಗೆ 9 ಗಂಟೆ ಬೆಂಗಳೂರಿನ 60ಕ್ಕೂ ಹೆಚ್ಚು ಖಾಸಗಿ ಶಾಲೆಗಳಲ್ಲಿ ಬಾಂಬ್ ಬೆದರಿಕೆ ಬಂದ ವಿಷಯ ಕಾಡ್ಗಿಚ್ಚಿನಂತೆ ಹರಡಿಕೊಂಡಿತ್ತು. ಸದಾಶಿವನಗರ, ಬಸವೇಶ್ವರನಗರ, ನಾಗದೇವನಹಳ್ಳಿ, ಚಾಮರಾಜಪೇಟೆ, ಯಲಹಂಕ, ಆನೇಕಲ್, ಬನ್ನೇರುಘಟ್ಟ, ಸರ್ಜಾಪುರ.ಸಿಂಗೇನ ಅಗ್ರಹಾರ, ದೊಮ್ಮಸಂದ್ರದ ಹಲವು ಶಾಲೆಗಳಲ್ಲಿ ಬಾಂಬ್ ಸ್ಫೋಟಿಸೋದಾಗಿ ಬೆದರಿಕೆ ಬಂದಿತ್ತು. ಬಾಂಬ್ ಬೆದರಿಕೆ ಬಂದ ವಿಚಾರವನ್ನೂ ಖುದ್ದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಖಚಿತ ಪಡಿಸಿದ್ದರು. ಬೆಂಗಳೂರಿನ ಬಹುತೇಕ ಶಾಲೆಗಳಲ್ಲಿ ಬಾಂಬ್ ಬೆದರಿಕೆ ಬಂದಿದ್ದು ತೀವ್ರ ಭಯ ಸೃಷ್ಟಿಯಾಗಿತ್ತು.

Shwetha M