ಮಕ್ಕಳ ಪಾಲಿಗೆ ಯಮನಾದ ಸ್ಕೂಲ್ ಬಸ್! – ತಂದೆ ಎದುರೇ ಕಂದಮ್ಮಗಳ ದುರಂತ ಅಂತ್ಯ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಸ್ಕೂಲ್ ಬಸ್ ಹರಿದು ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ನಗರದ ಥಣಿಸಂದ್ರದ ಪೊಲೀಸ್ ಕ್ವಾರ್ಟರ್ಸ್ ಬಳಿ ನಡೆದಿದೆ.
ಇದನ್ನೂ ಓದಿ: ಹೈಕಮಾಂಡ್ ಹೇಳಿದಂತೆ ನಾನು, ಡಿಕೆಶಿ ನಡೆದುಕೊಳ್ಳಬೇಕು! – ಸಿಎಂ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಖಡಕ್ ಮಾತು!
ಖಾಸಗಿ ಶಾಲೆಗೆ ಸೇರಿದ ಬಸ್ಸೊಂದು ಬೈಕ್ಗೆ ಡಿಕ್ಕಿ ಹೊಡೆದಿದ್ದು, ಮಕ್ಕಳು ಸಾವನ್ನಪ್ಪಿದ್ದಾರೆ. ವರ್ಷಾ(2) ಹಾಗೂ ಭಾನು(4) ಮೃತ ಮಕ್ಕಳು. ಸದ್ಯ ಸ್ಥಳಕ್ಕೆ ಉತ್ತರ ವಿಭಾಗದ ಸಂಚಾರ ಡಿಸಿಪಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹೆಣ್ಣೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ
ಯಾದಗಿರಿ ಮೂಲದ ನಾಗನಗೌಡ ಅವರು ಸಿಎಆರ್ನಲ್ಲಿ ಕಾನ್ಸ್ಟೇಬಲ್ ಆಗಿದ್ದಾರೆ. ತಮ್ಮ ಮಗಳು ವರ್ಷ ಮತ್ತು ಅಣ್ಣನ ಮಗಳಾದ ಭಾನು ಅನ್ನು ಬೈಕ್ನಲ್ಲಿ ಕೂರಿಸಿಕೊಂಡು ಹಾಲು ತರಲು ಹೋಗುತ್ತಿದ್ದರು. ಇದೇ ವೇಳೆ ಸ್ಕೂಲ್ ಟೈಮ್ ಆಗಿದ್ದರಿಂದ ಬಸ್ ಮಕ್ಕಳ ಪಿಕಪ್ಗೆ ತೆರಳುತ್ತಿತ್ತು. ಬಸ್ ಬರುವುದನ್ನು ಕಂಡು ನಾಗನಗೌಡ ಅವರು ಬೈಕ್ ನಿಲ್ಲಿಸಿದ್ದರು. ಆದ್ರೆ ಬಸ್ ಚಾಲಕ ಬಸ್ ನಿಲ್ಲಿಸದೆ ಮುಂದೆ ಬಂದಿದ್ದಾನೆ. ಈ ವೇಳೆ ಬಸ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ನಿಂದ ಇಬ್ಬರು ಮಕ್ಕಳು ಕೆಳಗೆ ಬಿದ್ದಿದ್ದಾರೆ. ಆಗ ಮಕ್ಕಳ ಮೇಲೆ ಬಸ್ ಹಿಂಬದಿ ಚಕ್ರ ಹರಿದಿದೆ. ಕೂಡಲೇ ಮಕ್ಕಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಕಾನ್ಸ್ಟೇಬಲ್ ನಾಗನಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇನ್ನು ಇಬ್ಬರು ಮಕ್ಕಳ ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆ ಬಳಿ ಕುಟುಂಬಸ್ಥರು ಜಮಾಯಿಸಿದ್ದು, ಮಕ್ಕಳನ್ನ ಕಳೆದುಕೊಂಡ ಹಿನ್ನಲೆ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಹೆಣ್ಣೂರು ಸಂಚಾರ ಪೊಲೀಸರು ಶಾಲಾ ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ನೋಡಿರಿ

