ಮೆಟ್ರೋ ಪ್ರಯಾಣಿಕರಿಗೆ ಇಂದಿನಿಂದ ಮೊಬಿಲಿಟಿ ಕಾರ್ಡ್ ಲಭ್ಯ – ಏನಿದರ ವಿಶೇಷತೆ?
ಬೆಂಗಳೂರು: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಬೇಕು ಅನ್ನೋ ಕಾರಣಕ್ಕೆ ನಮ್ಮ ಮೆಟ್ರೋ ಆರಂಭಿಸಲಾಗಿದೆ. ನಗರದ ಬಹುಪಾಲು ಜನರು ಕೂಡ ಮೆಟ್ರೋವನ್ನೇ ಅವಲಂಭಿಸಿದ್ದಾರೆ. ಹೀಗಾಗಿ ಬಿಎಂಆರ್ಸಿಎಲ್ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಹಾಯವಾಗುವಂತಹ ಹತ್ತು ಹಲವು ವಿನೂತನ ಯೋಜನೆಗಳನ್ನು ಜಾರಿ ಮಾಡುತ್ತಾ ಬಂದಿದೆ. ಇದೀಗ ಮತ್ತೊಂದು ಹೊಸ ಯೋಜನೆ ಜಾರಿ ಮಾಡಿದ್ದು, ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಇಂದಿನಿಂದ (ಮಾರ್ಚ್ 30) ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಪ್ರಯಾಣಿಕರಿಗೆ ಲಭ್ಯವಾಗಲಿದೆ.
ಇದನ್ನೂ ಓದಿ:2030ಕ್ಕೆ ಭಾರತದಲ್ಲಿ ವಿಶ್ವದ ಅತಿದೊಡ್ಡ “ಹಸಿರು ರೈಲ್ವೆ”
ಬೆಂಗಳೂರು ಮೆಟ್ರೋ ರೈಲು ನಿಗಮ ಆರ್‌ಬಿಎಲ್ ಬ್ಯಾಂಕ್ ಸಹಯೋಗದಲ್ಲಿ ರುಪೇ ಎನ್‌ಸಿಎಂಸಿ ಕಾರ್ಡ್ ಪೂರೈಕೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಅನ್ನು ಒಂದು ದೇಶ, ಒಂದು ಕಾರ್ಡ್ ಘೋಷಣೆ ಅಡಿ ಜಾರಿ ಮಾಡಲಾಗಿದೆ.
ಈ ಕಾರ್ಡನ್ನು ಡೆಬಿಟ್, ಕ್ರೆಡಿಟ್ ಕಾರ್ಡ್‌ನಂತೆ ರಿಚಾರ್ಜ್ ಮಾಡಿಸಿಕೊಂಡು ಮೆಟ್ರೋ ಪ್ರಯಾಣ ಮಾಡಬಹುದು. ಕೇವಲ ಮೆಟ್ರೋ ಅಷ್ಟೇ ಅಲ್ಲದೇ ಮೆಟ್ರೋದಿಂದಾಚೆಗೂ ಕಾರ್ಡ್ ಬಳಕೆ ಮಾಡಬಹುದು. ಕಾರ್ಡ್ ಬಳಸಿ ಶಾಪಿಂಗ್, ಇಂಧನ ಖರೀದಿ, ಟೋಲ್ ಶುಲ್ಕ ಪಾವತಿ ಸೇರಿದಂತೆ ಇತರೆ ಪಾವತಿಗಳನ್ನು ಮಾಡಬಹುದಾಗಿದೆ.
ಕಾರ್ಡ್ ಬಳಕೆಗಾಗಿ ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಆರ್‌ಬಿಎಲ್ ಬ್ಯಾಂಕ್ ನಿಂದ ಪಿಓಎಸ್ ಮೆಷಿನ್ ಗಳ ವ್ಯವಸ್ಥೆ ಮಾಡಲಾಗಿದೆ. ನಗರದ 6 ಲಕ್ಷಕ್ಕೂ ಹೆಚ್ಚಿನ ಮೆಟ್ರೋ ಪ್ರಯಾಣಿಕರಿಗೆ ಈ ಕಾರ್ಡ್ ಬಳಕೆಗೆ ಲಭ್ಯವಾಗಲಿದೆ. ನಿಲ್ದಾಣಗಳಲ್ಲಿ ಹಾಗೂ ಆರ್‌ಬಿಎಲ್ ಬ್ಯಾಂಕ್‌ನ MoBank ಆ್ಯಪ್ ಮೂಲಕವೂ ಎನ್‌ಸಿಎಂಸಿ ಕಾರ್ಡನ್ನು ರಿಚಾರ್ಜ್ ಮಾಡಿಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.