10 ಸೆಕೆಂಡ್‌ಗಳಲ್ಲಿ ಎರಡು ಬಾರಿ ಸ್ಪೋಟ – ರಾಮೇಶ್ವರಂ ಕೆಫೆಯಲ್ಲಿ ನಿಜಕ್ಕೂ ಆಗಿದ್ದೇನು?

10 ಸೆಕೆಂಡ್‌ಗಳಲ್ಲಿ ಎರಡು ಬಾರಿ ಸ್ಪೋಟ – ರಾಮೇಶ್ವರಂ ಕೆಫೆಯಲ್ಲಿ ನಿಜಕ್ಕೂ ಆಗಿದ್ದೇನು?

ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಈಗ ಬಿಗ್‌ ಟ್ವಿಸ್ಟ್ ಸಿಕ್ಕಿದೆ. ಹೋಟೆಲ್​ನಲ್ಲಿದ್ದ ಯಾವುದೇ ವಸ್ತು ಸ್ಫೋಟವಾಗಿಲ್ಲ. ಆದ್ರೆ, ಹೊರಗಡೆಯಿಂದ ತಂದಿರುವ ವಸ್ತು ಸ್ಫೋಟವಾಗಿರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ.

ಶುಕ್ರವಾರ ಮಧ್ಯಾಹ್ನದ ವೇಳೆ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ಸಂಭಿಸಿದ್ದು, ಕೆಫೆ ಸಿಬ್ಬಂಧಿ ಸೇರಿ ಏಳು ಮಂದಿ ಗಾಯಗೊಂಡಿದ್ದಾರೆ. ಈ ಸ್ಫೋಟ  ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ.  ಈ ಘಟನೆ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಹೊರಗಡೆಯಿಂದ ತಂದಿಟ್ಟಿದ್ದ ಬ್ಯಾಗ್​ನಲ್ಲಿನ ವಸ್ತು ಸ್ಫೋಟವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಮೇಲ್ನೋಟಕ್ಕೆ ಇದು ದ್ವೇಷದ ಸ್ಪೋಟ ಎನ್ನಲಾಗುತ್ತಿದೆ.

ಇದನ್ನೂ ಓದಿ: ಐದನೇ ಟೆಸ್ಟ್‌ನಲ್ಲಿ ದೇವದತ್ ಪಡಿಕ್ಕಲ್ ಡೆಬ್ಯೂ ಸಾಧ್ಯತೆ – ಕನ್ನಡಿಗನಿಗೆ ಟೀಮ್ ಇಂಡಿಯಾ ಡೋರ್ ಓಪನ್..!

ಇನ್ನು ಕೆಫೆಯಲ್ಲಿ ಸ್ಪೋಟ ವಿಚಾರವಾಗಿ ರಾಮೇಶ್ವರಂ ಕೆಫೆ ವ್ಯವಸ್ಥಾಪಕ ನಿರ್ದೇಶಕಿ(ಎಂಡಿ) ದಿವ್ಯಾ ಪ್ರತಿಕ್ರಿಯಿಸಿದ್ದಾರೆ.  ರಾಮೇಶ್ವರಂ ಕೆಫೆಯ ಕೈತೊಳೆಯುವ ಸ್ಥಳದಲ್ಲಿ ಸ್ಫೋಟವಾಗಿದೆ. ಕಿಚನ್ ಹೊರಗಡೆ ಪ್ಲೇಟ್​ಗಳನ್ನು ಇಡುವ ಸ್ಥಳದಲ್ಲಿ ಸ್ಫೋಟವಾಗಿದೆ. ಕೆಫೆಯಲ್ಲಿ ವಿದ್ಯುತ್ ಅವಘಡ ಅಥವಾ ಸಿಲಿಂಡರ್ ಸ್ಫೋಟವಾಗಿಲ್ಲ. ಹೊರಗಿನಿಂದ ತಂದಿಟ್ಟ ಬ್ಯಾಗ್ ಸ್ಫೋಟವಾಗಿದೆ. 10 ಸೆಕೆಂಡ್ ಅಂತರದಲ್ಲಿ 2 ಬಾರಿ ಸ್ಫೋಟವಾಗಿದೆ. ಒಂದು ಬ್ಯಾಂಗ್ ತಂದಿಟ್ಟ ನಂತರ ಭಾರಿ ಪ್ರಮಾಣದಲ್ಲಿ ಸ್ಫೋಟವಾಗಿದ್ದು, ನಾಲ್ವರು ಗ್ರಾಹಕರು, ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಈ ಹಿಂದೆ 2 ಬಾರಿ ಅನುಮಾನಾಸ್ಪದ ಬ್ಯಾಗ್ ತಂದಿಟ್ಟು ಹೋಗಿದ್ದರು. ಒಂದು ಬ್ಯಾಗ್ ತೆಗೆದು ನೋಡಿದಾಗ ಮಡಕೆ ಕುಡಿಕೆ ಪತ್ತೆಯಾಗಿತ್ತು. ಮತ್ತೊಂದು ಬ್ಯಾಗನ್ನು ನಿರ್ಜನ ಪ್ರದೇಶದಲ್ಲಿರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಬ್ಯಾಗನ್ನು ಪೊಲೀಸರಿಗೆ ಒಪ್ಪಿಸಿದ್ದೆವು, ಅದರಲ್ಲಿ ಏನಿತ್ತು ಗೊತ್ತಿಲ್ಲ. ಘಟನೆ ಬಗ್ಗೆ ಪೊಲೀಸರಿಗೆ ದೂರನ್ನು ನೀಡಿದ್ದೆವು. ಇಂದು ಕೂಡ ವಾಸ್ ಬೇಸಿನ್ ಬಳಿ ಬ್ಯಾಗ್ ತಂದಿಟ್ಟು ಹೋಗಿದ್ದರು. ಆ ಬ್ಯಾಗ್ ಇರಿಸಿದ್ದ ಸ್ಥಳದಲ್ಲೇ ಇಂದು ಸ್ಫೋಟವಾಗಿದೆ ಎಂದು ಹೇಳಿದರು.

ಇನ್ನು ಸ್ಫೋಟದ ಹಿಂದೆ ಹಲವು ಅನುಮಾನಗಳು ವ್ಯಕ್ತವಾದ ಬೆನ್ನಲ್ಲೇ ಸ್ಥಳಕ್ಕೆ ಸುತ್ತಮುತ್ತಲಿನ ಠಾಣೆಯ ಪೊಲೀಸರು, ಹಿರಿಯ ಅಧಿಕಾರಿಗಳು ಘಟನಾ ಸ್ಥಕ್ಕೆ ದೌಡಾಯಿಸಿದ್ದಾರೆ. ಎಸಿಪಿ ರೀನಾ ಸುವರ್ಣ ಮತ್ತು ಮಾರತ್ತಹಳ್ಳಿ ಪೊಲೀಸರು ಸಹ ಸ್ಳಳದಲ್ಲಿ ಮೊಕ್ಕಂ ಹೂಡಿದ್ದಾರೆ. ಇನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸಹ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಈ ಘಟನೆ ಬಗ್ಗೆ ಗೃಹ ಸಚಿವ ಪರಮೇಶ್ವರ್​ ಅವರು ಅಧಿಕಾರಿಗಳ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನು ರಾಷ್ಟ್ರೀಯ ತನಿಖಾ ದಳ (ಎನ್​ಐಎ)  ತಂಡ ಸಹ ರಾಮೇಶ್ವರಂ ಕೆಫೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದೆ. ಮತ್ತೊಂದು ತಂಡ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳುಗಳ ಬಳಿ ಮಾಹಿತಿ ಸಂಗ್ರಹಿಸುತ್ತಿದೆ.

Shwetha M