ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ – ತೀರ್ಥಹಳ್ಳಿ ಬಿಜೆಪಿ ಕಾರ್ಯದರ್ಶಿ ಎನ್​ಐಎ ವಶಕ್ಕೆ

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ – ತೀರ್ಥಹಳ್ಳಿ ಬಿಜೆಪಿ ಕಾರ್ಯದರ್ಶಿ ಎನ್​ಐಎ ವಶಕ್ಕೆ

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಹೊಸ ಹೊಸ  ತಿರುವು ಪಡೆದುಕೊಳ್ಳುತ್ತಲೇ ಇದೆ. ಈ ಪ್ರಕರಣದ  ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್​ಐಎ) ನಡೆಸುತ್ತಿದ್ದು, ತನಿಖೆ ಚುರುಕುಗೊಂಡಿದೆ.  ಇದೀಗ ಮತ್ತೋರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದೆ.

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಸಾಯಿಪ್ರಸಾದ್ ಎನ್ನುವಾತನನ್ನು ಶುಕ್ರವಾರ ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಮೊಬೈಲ್ ಮಾರಾಟ ಮಳಿಗೆ ಮೇಲೆ ದಾಳಿ ಮಾಡಿದ್ದ NIA ಅಧಿಕಾರಿಗಳು, ಇದೀಗ ತೀರ್ಥಹಳ್ಳಿ ಬಿಜೆಪಿ ಘಟಕದ ಕಾರ್ಯದರ್ಶಿಯಾಗಿರುವ ಸಾಯಿಪ್ರಸಾದ್ ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

ಇದನ್ನೂ ಓದಿ: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ದುರಂತ – ಮಿರಾಕಲ್ ಡ್ರಿಂಕ್ಸ್ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ

ಮಾರ್ಚ್ 27ರಂದು ಇಂಬ್ರೇಜ್ ಮಾಲೀಕತ್ವದ ಡಿಜಿಟಲ್ ಜೋನ್ ಮೊಬೈಲ್ ಮಳಿಗೆ ಮೇಲೆ ಎನ್​ಐಎ ದಾಳಿ ಮಾಡಿತ್ತು. ದಾಳಿ ವೇಳೆ ಸಾಯಿಪ್ರಸಾದ್ ಸಂಬಂಧದ ಬಗ್ಗೆ ಎನ್​ಐಎಗೆ ಮಾಹಿತಿ ಸಿಕ್ಕಿದೆ. ಹಾಗೇ ಮೊಬೈಲ್ ಅಂಗಡಿ ಮಾಲೀಕನಿಗೆ ಸಾಯಿಪ್ರಸಾದ್ ಸ್ನೇಹಿತ. ಇದೇ ಆಧಾರದ ಮೇಲೆ ಎನ್​ಐಎ ಅಧಿಕಾರಿಗಳು ಸಾಯಿಪ್ರಸಾದ್ ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.

2024, ಮಾ.1ರಂದು ಬೆಂಗಳೂರಿನ ವೈಟ್‌ಫೀಲ್ಡ್‌ ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಒಂಬತ್ತು ಜನರು ಗಾಯಗೊಂಡಿದ್ದರು. ಘಟನೆ ಬೆಂಗಳೂರು ನಗರವನ್ನು ಬೆಚ್ಚಿ ಬೀಳಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಐಎ ಅಧಿಕಾರಿಗಳು ಹಲವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದು, ಮಾಹಿತಿಯನ್ನು ಕಲೆಹಾಕಿದೆ. ಅಲ್ಲದೇ ಓರ್ವನನ್ನು ಬಂಧಿಸಿದೆ. ಆದ್ರೆ, ಘಟನೆ ನಡೆದು ತಿಂಗಳು ಕಳೆದರೂ ಸಹ ಬಾಂಬರ್​ನ ಸುಳಿವು ಮಾತ್ರ ಇನ್ನೂ ಸಿಕ್ಕಿಲ್ಲ.

Shwetha M