ಬೆಂಗಳೂರು ರಸ್ತೆ ಗುಂಡಿ ಮುಚ್ಚುವ ಡೆಡ್‌ಲೈನ್ ಮತ್ತೆ ಮುಂದೂಡಿಕೆ! – ಸಿಎಂ ಮಾತಿಗೂ ಬೆಲೆ ಇಲ್ವಾ?

ಬೆಂಗಳೂರು ರಸ್ತೆ ಗುಂಡಿ ಮುಚ್ಚುವ ಡೆಡ್‌ಲೈನ್ ಮತ್ತೆ ಮುಂದೂಡಿಕೆ! – ಸಿಎಂ ಮಾತಿಗೂ ಬೆಲೆ ಇಲ್ವಾ?

ಸಿಲಿಕಾನ್‌ ಸಿಟಿ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು. ಈಗಾಗಲೇ ರಸ್ತೆ ಗುಂಡಿ ನೋಡಿಯೂ ಕಣ್ಣುಮುಚ್ಚಿ ಕುಳಿತ ರಾಜ್ಯ ಸರ್ಕಾರದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ರಸ್ತೆ ಗುಂಡಿಮುಚ್ಚಲು ನೀಡಿದ್ದ ಡೆಡ್‌ಲೈನ್‌ ಮತ್ತೆ ಮುಂದಕ್ಕೆ ಹೋಗಿದೆ. ನವೆಂಬರ್ 10 ರೊಳಗೆ ನಗರದಲ್ಲಿರುವ ಎಲ್ಲಾ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ತಿಳಿಸಿದೆ.

ಇದನ್ನೂ ಓದಿ: IND Vs AUS ಕ್ಲೈಮ್ಯಾಕ್ಸ್ ಫೈಟ್ – 5ನೇ ಮ್ಯಾಚ್ ಗೆದ್ದೇ ಗೆಲ್ಲುತ್ತಾ ಭಾರತ?

ನಗರದ ರಸ್ತೆಗಳ ಗುಂಡಿ ಮುಚ್ಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಟೋಬರ್ 31 ರ ಗಡುವು ನೀಡಿದ್ದರು. ಬಳಿಕ ನವೆಂಬರ್‌ ಮೂರಕ್ಕೆ ಮುಂದೂಡಲಾಯ್ತು. ಈಗಾಗಲೇ ನಗರದಲ್ಲಿ ಸುಮಾರು 18 ಸಾವಿರ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, ಜಂಕ್ಷನ್‌ಗಳ ಅಭಿವೃದ್ಧಿಗೆ 100 ಕೋಟಿ ವೆಚ್ಚ ಮಾಡಲಾಗುತ್ತಿದೆ. 1,700 ಕೋಟಿ ವೆಚ್ಚದಲ್ಲಿ 220.68 ಕಿಮೀ ಉದ್ದದ 140 ರಸ್ತೆಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, 79.08 ಕಿ.ಮೀ (39 ರಸ್ತೆ) ವೈಟ್ ಟಾಪಿಂಗ್ ಕೆಲಸ ಪೂರ್ಣಗೊಂಡಿದೆ. ಉಳಿದ 101 ರಸ್ತೆಗಳ ಕಾಮಗಾರಿ ಪ್ರಗತಿಯಲ್ಲಿದೆ. ಬ್ರ್ಯಾಂಡ್‌ ಬೆಂಗಳೂರು ಯೋಜನೆಯಡಿ ₹694 ಕೋಟಿ ವೆಚ್ಚದಲ್ಲಿ 386.5 ಕಿಮೀ ರಸ್ತೆಗಳ ಡಾಂಬರೀಕರಣ ನಡೆಯುತ್ತಿದ್ದು, ಶೇ 44ರಷ್ಟು ಕೆಲಸ ಪೂರ್ಣಗೊಂಡಿದೆ. ಉಳಿದ ಕೆಲಸವನ್ನು ಎರಡು ತಿಂಗಳಲ್ಲಿ ಪೂರ್ಣಗೊಳಿಸಲಾಗುತ್ತದೆ ಎಂದು ಹೇಳುತ್ತಿದ್ದಾರೆ ಅಧಿಕಾರಿಗಳು.

100 ಕೋಟಿ ವೆಚ್ಚದಲ್ಲಿ ‘ಸುರಕ್ಷಾ 75’ ಜಂಕ್ಷನ್ ಸುಧಾರಣಾ ಯೋಜನೆಯ ಶೇ 40ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಈಜೀಪುರ ಮೇಲ್ಸೇತುವೆ ಕಾಮಗಾರಿ 2026ರ ಜುಲೈ ಅಂತ್ಯಕ್ಕೆ ಮುಗಿಯಲಿದೆ. ಐದು ನಗರ ಪಾಲಿಕೆಗಳ ಕರಡು ವಾರ್ಡ್ ಪುನರ್ ವಿಂಗಡಣೆ ಅಧಿಸೂಚನೆಯನ್ನು ಸೆ.30ರಂದು ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳ ಅವಧಿ ಮುಗಿದಿದೆ. ಪರಿಶೀಲನೆಯ ನಂತರ ಅಂತಿಮ ಅಧಿಸೂಚನೆಯನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ಹೇಳಿದ್ದಾರೆ ಅಧಿಕಾರಿಗಳು.

  • ಬೆಂಗಳೂರು ಮಧ್ಯ: 2,319
  • ಬೆಂಗಳೂರು ಉತ್ತರ: 3,375
  • ಬೆಂಗಳೂರು ಪೂರ್ವ: 3,325
  • ಬೆಂಗಳೂರು ಪಶ್ಚಿಮ: 5,530
  • ಬೆಂಗಳೂರು ದಕ್ಷಿಣ: 3,136
  • ಬಿ.ಸ್ಮೈಲ್: 239

ಒಟ್ಟು: 17,924 ಗುಂಡಿಗಳನ್ನು ಮುಚ್ಚಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Shwetha M