ನಮ್ಮ ಮೆಟ್ರೋ ಎಲ್ಲೋ ಲೈನ್‌ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಇನ್ಮುಂದೆ 15 ನಿಮಿಷಕ್ಕೊಂದು ರೈಲು ಸಂಚಾರ!

ನಮ್ಮ ಮೆಟ್ರೋ ಎಲ್ಲೋ ಲೈನ್‌ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಇನ್ಮುಂದೆ 15 ನಿಮಿಷಕ್ಕೊಂದು ರೈಲು ಸಂಚಾರ!

ಬೆಂಗಳೂರಿನ ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ಟ್ರಾಫಿಕ್‌ ಜಂಜಾಟದಿಂದ ತಪ್ಪಿಸಿಕೊಳ್ಳಲು ನಗರದ ಬಹುತೇಕ ಮಂದಿ ಮೆಟ್ರೋವನ್ನೇ ಅವಲಂಬಿಸಿದ್ದಾರೆ. ಇತ್ತೀಚೆಗೆ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲೂ ನಮ್ಮ ಮೆಟ್ರೋ ಸಂಚಾರ ಆರಂಭವಾಗಿತ್ತು. ಯೆಲ್ಲೋ ಮಾರ್ಗದ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ಗುಡ್‌ನ್ಯೂಸ್‌ ಕೊಟ್ಟಿದೆ. ಇದೀಗ ಹಳದಿ ಮಾರ್ಗದಲ್ಲಿ ಮತ್ತೊಂದು ರೈಲು ಸಂಚಾರ ನಡೆಸಲಿದೆ.

ಇದನ್ನೂ ಓದಿ:  ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ಕಾಂತಾರ ಚಾಪ್ಟರ್ -1- ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ರಿಷಭ್ ಶೆಟ್ಟಿ

ಆರ್.ವಿ ರೋಡಿಂದ  ಬೊಮ್ಮಸಂದ್ರ ಮಾರ್ಗದ ನಮ್ಮ ಮೆಟ್ರೋಗೆ  ಆಗಸ್ಟ್- 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. BMRCL ಬಳಿ ಯೆಲ್ಲೋ ಲೈನ್ ನಲ್ಲಿ ಸಂಚಾರ ಮಾಡಲು ನಾಲ್ಕು ರೈಲುಗಳಿದ್ದ ಕಾರಣ 19 ನಿಮಿಷಕ್ಕೊಂದರಂತೆ ಮೆಟ್ರೋ ರೈಲುಗಳು ಸಂಚಾರ ಮಾಡುತ್ತಿತ್ತು. ಇದೀಗ ಹಳದಿ ಮಾರ್ಗದಲ್ಲಿ ಮತ್ತೊಂದು ರೈಲು ಸಂಚರಿಸಲಿದೆ. ಯೆಲ್ಲೋ ಲೈನ್ ಮೆಟ್ರೋ ಮಾರ್ಗದಲ್ಲಿ ಸಂಚಾರ ಮಾಡಲು ಕಲ್ಕತ್ತಾದ ಟಿಟಾಗರ್​ನಿಂದ ಐದನೇ ಮೆಟ್ರೋ ರೈಲು ಬಂದಿದ್ದು, ಇಂದಿನಿಂದ ಐದನೇ ರೈಲಿನ ಟೆಸ್ಟಿಂಗ್ ಕಾರ್ಯ ಆರಂಭವಾಗಲಿದೆ. ಸದ್ಯದಲ್ಲೇ ಈ ಐದನೇ ರೈಲು ಯೆಲ್ಲೋ ಲೈನ್ ನಲ್ಲಿ ಸಂಚಾರ ಮಾಡಲಿದೆ ಎಂದು BMRCL ತಿಳಿಸಿದೆ. ಐದನೇ ರೈಲು ಟ್ರ್ಯಾಕ್ ಗಿಳಿಯುತ್ತಿದ್ದಂತೆ ಹದಿನೈದು ನಿಮಿಷಕ್ಕೊಂದರಂತೆ ಮೆಟ್ರೋ ರೈಲು ಸಂಚಾರ ಮಾಡಲಿದೆ. ‌

ಕೋಲ್ಕತ್ತಾದ ಟೀಟಾಘರ್ ರೈಲ್ವೇ ಸಿಸ್ಟಮ್ ಲಿಮಿಟೆಡ್​ನಿಂದ ಹೊಸ ಬೋಗಿಗಳು ಹೊರಟು ಸೆಪ್ಟೆಂಬರ್ 19 ರಂದು ಬೆಂಗಳುರು ತಲುಪಿತ್ತು. ಬೆಂಗಳೂರಿನಲ್ಲಿ ಎಲ್ಲಾ ಬೋಗಿಗಳ ಜೋಡಣೆಯಾದ ಬಳಿಕ 20 ದಿನಗಳ ಪರೀಕ್ಷೆ ನಡೆಯಲಿದೆ ಎಂದು BMRCL ತಿಳಿಸಿತ್ತು. ಇಂದಿನಿಂದ ಸಿಗ್ನಲ್, ಟೆಲಿಕಮ್ಯೂನಿಕೇಷನ್ ಮತ್ತು ಪವರ್ ಸಪ್ಲೈಗಳ ಪರೀಕ್ಷೆಗೆ ರೈಲು ಒಳಪಡಲಿದೆ.

ನವೆಂಬರ್​ನಲ್ಲಿ ಬರಲಿವೆ ಮತ್ತಷ್ಟು ರೈಲುಗಳು

ಆರ್.ವಿ ರೋಡ್ ಟು ಬೊಮ್ಮಸಂದ್ರ ಮಾರ್ಗದಲ್ಲಿ ಸಂಚಾರ ಮಾಡಲು ಒಟ್ಟು ಹದಿನೈದು ರೈಲುಗಳನ್ನು ಆರ್ಡರ್ ಮಾಡಿದ್ದು, ಅದರಲ್ಲಿ ಸದ್ಯ ಐದು ರೈಲುಗಳು ಮಾತ್ರ ಬಂದಿವೆ. ಇನ್ನು ಉಳಿದ ಹತ್ತು ರೈಲುಗಳ ಪೈಕಿ ಈ ತಿಂಗಳು ಒಂದು ರೈಲು ಬಂದರೆ,  ನವೆಂಬರ್​ನಲ್ಲಿ ಎರಡು ಟ್ರೈನ್ ಬರಲಿದೆ. ಹೀಗೆ ಪ್ರತಿ ತಿಂಗಳು ಒಂದು ಎರಡು ರೈಲುಗಳು ಬರಲಿವೆ ಎಂದು BMRCL ತಿಳಿಸಿದೆ. ಈ ಎಲ್ಲಾ ರೈಲುಗಳು ಬಂದರೆ ಗ್ರೀನ್ ಮತ್ತು ಪರ್ಪಲ್ ಮಾರ್ಗದಂತೆ  ಯೆಲ್ಲೋ ಲೈನ್​ನಲ್ಲೂ ಸಹ ಐದು ನಿಮಿಷಕ್ಕೊಂದರಂತೆ ಮೆಟ್ರೋ ರೈಲುಗಳು ಸಂಚಾರ ಮಾಡಲಿದೆ.

Shwetha M