ನಮ್ಮ ಮೆಟ್ರೋದಲ್ಲಿ ಜೀವಂತ ಹೃದಯ ಸಾಗಾಟ! – ಸ್ಪರ್ಶ ಆಸ್ಪತ್ರೆಯ ತಂಡದಿಂದ ರೋಚಕ ಕಾರ್ಯಾಚರಣೆ!

ನಮ್ಮ ಮೆಟ್ರೋದಲ್ಲಿ ಜೀವಂತ ಹೃದಯ ಸಾಗಾಟ! – ಸ್ಪರ್ಶ ಆಸ್ಪತ್ರೆಯ ತಂಡದಿಂದ ರೋಚಕ ಕಾರ್ಯಾಚರಣೆ!
ನಮ್ಮ ಮೆಟ್ರೋ ಸಿಲಿಕಾನ್ ಸಿಟಿ ಜನರ ಸಂಚಾರ ಜೀವನಾಡಿ. ಇತ್ತೀಚಿಗೆ ಸಾಕಷ್ಟು ಅಪ್‌ ಗ್ರೇಡ್‌ ಕೂಡ ಆಗುತ್ತಿದೆ. ಮೆಟ್ರೋ ಮಾರ್ಗಗಳ ವಿಸ್ತರಣೆಯೂ ಆಗುತ್ತಿದೆ. ನಿತ್ಯ ಲಕ್ಷಾಂತರ ಮಂದಿ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಾರೆ. ಇದಿಷ್ಟೇ ಅಲ್ಲದೇ ನಮ್ಮ ಮೆಟ್ರೋ ಅನೇಕ ಮಾನವೀಯ ಸೇವೆಗಳಿಂದಲೂ ಜನರ ಹೃದಯ ಗೆದ್ದಿದೆ. ಇದೀಗ ಮೆಟ್ರೋದಲ್ಲಿ ಜೀವಂತ ಹೃದಯವನ್ನ ಸಾಗಿಸಲಾಗಿದೆ.

ಇದನ್ನೂ ಓದಿ: ನಾಡಹಬ್ಬದಲ್ಲಿ ಇಷ್ಟದ ರುಚಿ ಸವಿಯಲು ರೆಡಿಯಾಗಿ- ಈ ಬಾರಿ 15 ದಿನ ನಡೆಯಲಿದೆ ದಸರಾ ಆಹಾರ ಮೇಳ

ಯಶವಂತಪುರದಿಂದ ಮಂತ್ರಿ ಸ್ಕ್ವೇರ್​​​ ವರೆಗೆ ನಮ್ಮ ಮೆಟ್ರೋದಲ್ಲಿ ಜೀವಂತ ಹೃದಯ ಸಾಗಿಸಲಾಗಿದೆ.  ಸೆಪ್ಟೆಂಬರ್ 11 ರಾತ್ರಿ 11.01 ರಿಂದ 11.21 ನಡುವೆ ಈ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ. ಸ್ಪರ್ಶ್ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಮೂಲಕ ಯಶವಂತಪುರ ಇಂಡಸ್ಟ್ರಿ ವರೆಗೆ ಹೃದಯವನ್ನು ಕೊಂಡೊಯ್ಯಲಾಗಿದೆ. ಅಲ್ಲಿಂದ ಮೆಟ್ರೋ ರೈಲಿನ ಮೂಲಕ ಸಂಪಿಗೆ ರೋಡ್ ಮೆಟ್ರೋ ಸ್ಟೇಷನ್ ವರೆಗೆ ಒಯ್ಯಲಾಯಿತು. ಅಲ್ಲಿಂದ ಮತ್ತೆ ಆ್ಯಂಬುಲೆನ್ಸ್ ಮೂಲಕ ಶೇಷಾದ್ರಿಪುರ ಅಪೋಲೋ ಆಸ್ಪತ್ರೆಗೆ ಹೃದಯವನ್ನು ಶಿಫ್ಟ್ ಮಾಡಲಾಗಿದೆ. ಸ್ಪರ್ಶ ಆಸ್ಪತ್ರೆಯ ತಂಡಕ್ಕೆ BMRCL ಭದ್ರತಾ ಅಧಿಕಾರಿ ಸಾಥ್ ನೀಡಿದ್ದಾರೆ.

ಮೆಟ್ರೋ ರೈಲಿನ ಒಂದು ಕೋಚ್ ಅನ್ನು ಹೃದಯ ಸಾಗಿಸಲು ಮೀಸಲಿಡಲಾಗಿತ್ತು. ಎಂದಿನಂತೆ ಸಂಚಾರ ಮಾಡುವ ಪ್ರಯಾಣಿಕರ ರೈಲಿನಲ್ಲೇ ಹೃದಯವನ್ನು ಸಾಗಿಸಲಾಗಿದೆ. ರಾತ್ರಿ 11.1 ಕ್ಕೆ ಯಶವಂತಪುರ ಇಂಡಸ್ಟ್ರಿಯಿಂದ ಹೊರಟ ರೈಲು 11.21 ಕ್ಕೆ ಸಂಪಿಗೆ ರೋಡ್ ಮೆಟ್ರೋ ಸ್ಟೇಷನ್ ತಲುಪಿದೆ. ಯಶವಂತಪುರ ಇಂಡಸ್ಟ್ರಿಯಿಂದ ಸಂಪಿಗೆ ಮೆಟ್ರೋ ಸ್ಟೇಷನ್ ನಡುವೆ ಏಳು ಮೆಟ್ರೋ ‌ಸ್ಟೇಷನ್​ಗಳಿವೆ ಕೇವಲ 20 ನಿಮಿಷದಲ್ಲಿ ಯಶವಂತಪುರ ಇಂಡಸ್ಟ್ರಿ ಯಿಂದ ಸಂಪಿಗೆ ರೋಡ್ ಮೆಟ್ರೋ ಸ್ಟೇಷನ್ ತಲುಪಿದೆ. ಈ ವೇಳೆ ಮೆಟ್ರೋ ಭದ್ರತಾ ಅಧಿಕಾರಿಗಳು ಮತ್ತು ವೈದ್ಯರು ಹಾಜರಿದ್ದರು.

ನಮ್ಮ ಮೆಟ್ರೋ ಮೂಲಕ ಇಂತಹ ಮಾನವೀಯ ಸೇವೆಗಳು ನಡೆಯುತ್ತಿರೋದು ಇದೇ ಮೊದಲಲ್ಲ. ಕಳೆದ ಆಗಸ್ಟ್ 1, 2025ರ ರಾತ್ರಿ 8:38ಕ್ಕೆ, ಯಕೃತ್ತನ್ನು ವೈದ್ಯರೊಬ್ಬರು ಮತ್ತು ಏಳು ಮಂದಿ ವೈದ್ಯಕೀಯ ಸಿಬ್ಬಂದಿಯೊಂದಿಗೆ ವೈದೇಹಿ ಆಸ್ಪತ್ರೆಯಿಂದ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣಕ್ಕೆ ಆಂಬ್ಯುಲೆನ್ಸ್ ಮೂಲಕ ತರಲಾಗಿತ್ತು. ಆ ಯಕೃತ್ತನ್ನು ಹೊತ್ತ ಮೆಟ್ರೋ ರೈಲು ರಾತ್ರಿ 8:42ಕ್ಕೆ ವೈಟ್ ಫೀಲ್ಡ್ ನಿಲ್ದಾಣದಿಂದ ಹೊರಟು, ರಾತ್ರಿ 9:48ಕ್ಕೆ ರಾಜರಾಜೇಶ್ವರಿ ನಗರ ಮೆಟ್ರೋ ನಿಲ್ದಾಣ ತಲುಪಿತ್ತು. ಅಲ್ಲಿಂದ ನೇರವಾಗಿ ಆಂಬ್ಯುಲೆನ್ಸ್‌ಗೆ ವರ್ಗಾವಣೆ ಮಾಡಿ ಅಂಗಾಂಗ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಸಮಯಕ್ಕೆ ಅಂಗವನ್ನು ಸ್ಪರ್ಶ ಆಸ್ಪತ್ರೆಗೆ ಸುರಕ್ಷಿತವಾಗಿ ತಲುಪಿಸಲಾಗಿತ್ತು.

Shwetha M