ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಆರೆಂಜ್‌ ಲೈನ್‌ನ ಭೂಸ್ವಾಧೀನ ಶುರು!

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್!‌ – ಆರೆಂಜ್‌ ಲೈನ್‌ನ ಭೂಸ್ವಾಧೀನ ಶುರು!

ವರ್ಷದಿಂದ ವರ್ಷಕ್ಕೆ ನಮ್ಮ ಮೆಟ್ರೋ ವಿಸ್ತರಣೆಯಾಗುತ್ತಿದೆ. ಇದೀಗ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ಇದೆ. ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಯ ಕಿತ್ತಳೆ ಮಾರ್ಗಕ್ಕಾಗಿ ರಾಜ್ಯ ಸರಕಾರ ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿದೆ. ಇದಕ್ಕೆ ಪೂರ್ವಭಾವಿಯಾಗಿ ಹೊಸಹಳ್ಳಿ – ಕೆಎಚ್‌ಬಿ ಕಾಲೊನಿ ನಿಲ್ದಾಣದವರೆಗೆ ಸ್ವಾಧೀನ ಮಾಡಿಕೊಳ್ಳಬೇಕಾದ ಸ್ವತ್ತುಗಳನ್ನು ಗುರುತಿಸಿದೆ.

ಇದನ್ನೂ ಓದಿ: ಚುರುಮುರಿ ಅಂಗಡಿ ಮಾಲೀಕನಿಗೆ ಖುಲಾಯಿಸಿದ ಅದೃಷ್ಟ ಲಕ್ಷ್ಮೀ! – ಮೋದಿ ಕೊಟ್ಟ 10ರೂ. ನೋಟಿಗೆ ಫುಲ್ ಡಿಮ್ಯಾಂಡ್!

ನಮ್ಮ ಮೆಟ್ರೋ ಆರೆಂಜ್‌ ಮಾರ್ಗದ ಭೂ ಸ್ವಾದೀನ ಪ್ರಕ್ರಿಯೆ ಶುರುವಾಗಿದೆ. ಆರೆಂಜ್‌ ಲೈನ್‌ಗಾಗಿ BMRCL 6 ಪ್ಯಾಕೇಜ್‌ ಹಾಗೂ 3 ಎ ಹಂತಕ್ಕಾಗಿ 2 ಪ್ಯಾಕೇಜ್‌ನಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದೆ. ಮಾರ್ಚ್‌ನಲ್ಲಿ ಕೆಎಚ್‌ಬಿ ಕಾಲೊನಿಯಿಂದ ಕಾಮಾಕ್ಷಿಪಾಳ್ಯದವರೆಗೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಕಳೆದ ಏ.18ರಂದು ಅಧಿಸೂಚನೆ ಹೊರಡಿಸಿ ಹೊಸಹಳ್ಳಿ – ಕೆಎಚ್‌ಬಿ ಕಾಲೊನಿ ನಿಲ್ದಾಣದವರೆಗೆ ವಯಾಡಕ್ಟ್ ಮತ್ತು ನಿಲ್ದಾಣಗಳ ನಿರ್ಮಾಣಕ್ಕಾಗಿ ಸ್ವತ್ತುಗಳ ಪ್ರದೇಶವನ್ನು ಕೈಗಾರಿಕಾ ಪ್ರದೇಶವೆಂದು ಘೋಷಣೆ ಮಾಡಿದೆ. ಕಾಮಾಕ್ಷಿಪಾಳ್ಯದಿಂದ ಕಡಬಗೆರೆ ಹಾಗೂ ಮುತ್ಯಾಲನಗರದಿಂದ ಕೆಂಪಾಪುರದವರೆಗಿನ ಭೂಸ್ವಾಧೀನ ಅಧಿಸೂಚನೆಗಳು ಬಾಕಿ ಉಳಿದಿವೆ ಎನ್ನಲಾಗ್ತಿದೆ.

ನಮ್ಮ ಮೆಟ್ರೋ 3 ನೇ ಹಂತವು ಹೆಬ್ಬಾಳದ ಕೆಂಪಾಪುರ – ಜೆ.ಪಿ.ನಗರ 4ನೇ ಹಂತ (32.41 ಕಿ.ಮೀ.) ಹಾಗೂ 3 ಎ ಹೊಸಹಳ್ಳಿ- ಕಡಬಗೆರೆ ಮಾರ್ಗ (12.5 ಕಿ.ಮೀ.) ಸೇರಿ 44.6 ಕಿ.ಮೀ. ಹೊಂದಿದೆ. ಸಿವಿಲ್‌ ಕಾಮಗಾರಿ ಆರಂಭ ವಿಳಂಬವಾದ ಕಾರಣ ಗಡುವು ವಿಸ್ತರಿಸಲಾಗಿದೆ.

ಇನ್ನು ಭೂ ಮಾಲೀಕರಿಗೆ ನೀಡಬೇಕಾದ ಪರಿಹಾರ ಮೊತ್ತವನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಯಲ್ಲಿ ಠೇವಣಿ ಇಡಲಾಗುವುದು. ಬಳಿಕ ಮಂಡಳಿಯು ಮಾಲೀಕರಿಗೆ ಪಾವತಿಸಲಿದೆ. ಭೂಸ್ವಾಧೀನವಾಗಿ ಟೆಂಡರ್‌ ಕರೆದಲ್ಲಿ ಕೆಲಸ ಆರಂಭಿಸುವುದಾಗಿ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಆರಂಭಿಕ ವಿಸ್ತೃತ ಯೋಜನಾ ವರದಿ ಪ್ರಕಾರ, ಯೋಜನೆಗೆ 5,98,828 ಚ.ಮೀಟರ್‌ ಜಮೀನು ಬೇಕಾಗಿತ್ತು. ಅದರೆ, ಕೇಂದ್ರದ ಒಪ್ಪಿಗೆ ಬಳಿಕ ರಾಜ್ಯ ಸರಕಾರವು ಈ ಮಾರ್ಗದಲ್ಲಿ ಡಬಲ್‌ ಡೆಕ್ಕರ್‌ ನಿರ್ಮಿಸಲು ಯೋಜಿಸಿದೆ. ಹೀಗಾಗಿ, ಈಗ 6,72,117 ಜಮೀನು ಬೇಕಾಗಲಿದೆ ಎಂದು ಬಿಎಂಆರ್‌ಸಿಎಲ್‌ ಅಂದಾಜಿಸಿದೆ.

ಡಬಲ್‌ ಡೆಕ್ಕರ್‌ಗೆ ಇನ್ನೂ ಒಪ್ಪಿಗೆ ನೀಡದ ಕೇಂದ್ರವು ಈ ಸಂಬಂಧ ರಾಜ್ಯ ಸರಕಾರ/ಬಿಎಂಆರ್‌ಸಿಎಲ್‌ನಿಂದ ಸ್ಪಷ್ಟಧಿನೆ ಕೋರಿದೆ. ಈ ನಡುವೆ, ಕೆಂಪಾಪುರ-ಜೆ.ಪಿ.ನಗರ 4ನೇ ಹಂತ, 3ನೇ ಹಂತದ ಡಬಲ್‌ ಡೆಕ್ಕರ್‌ ಸಿವಿಲ್‌ ಕಾಮಗಾರಿಗಳಿಗಾಗಿ ಬಿಎಂಆರ್‌ಸಿಎಲ್‌ 3 ಹಂತದಲ್ಲಿಸುಮಾರು 4,187 ಕೋಟಿ ರೂ. ಅಂದಾಜು ವೆಚ್ಚದ ಟೆಂಡರ್‌ ಕರೆದಿದೆ.

15,611 ಕೋಟಿ ಮೊತ್ತದ ಯೋಜನೆ ಇದಾಗಿದ್ದು, ಕಳೆದ ತಿಂಗಳಷ್ಟೆ ಜಪಾನ್‌ ಇಂಟರ್‌ ನ್ಯಾಷನಲ್‌ ಕೋ – ಆಪರೇಷನ್‌ ಏಜೆನ್ಸಿಯ (ಜೈಕಾ) ಅಧಿಕೃತ ಅಭಿವೃದ್ಧಿ ನೆರವು ಯೋಜನೆಯಡಿ ಒಟ್ಟು 6100 ಕೋಟಿ ರೂ. ಸಾಲ ಒದಗಿಸಲು ಕೇಂದ್ರ ಸರಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಒಟ್ಟಾರೆ 3ನೇ ಹಂತದ ಕಾಮಗಾರಿಯು 2032ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

Shwetha M