ಟೆಕ್ ಕಾರಿಡಾರ್‌ನಲ್ಲಿ ಮೆಟ್ರೋ ಸವಾರಿ – ಮೊದಲ ದಿನವೇ 16 ಸಾವಿರಕ್ಕೂ ಹೆಚ್ಚು ಮಂದಿ ಪ್ರಯಾಣ
ಬೆಂಗಳೂರು: ವೈಟ್‌ಫೀಲ್ಡ್- ಕೆ.ಆರ್.ಪುರ ಮಧ್ಯೆ ‘ನಮ್ಮ ಮೆಟ್ರೋ’ ರೈಲಿನ ವಾಣಿಜ್ಯ ಸಂಚಾರವು ಭಾನುವಾರ ಆರಂಭವಾಗಿದೆ. ಮೊದಲ ದಿನವೇ ಸುಮಾರು 16 ಸಾವಿರಕ್ಕೂ ಅಧಿಕ ಮಂದಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ.
ಭಾನುವಾರ ಬೆಳಗ್ಗೆ 7 ರಿಂದ ರಾತ್ರಿ 11 ಗಂಟೆಯವರೆಗೆ ಮೆಟ್ರೋ ಸೇವೆ ಪ್ರಯಾಣಿಕರಿಗೆ ಲಭ್ಯವಾಗಿದೆ. ವೈಟ್‌ಫೀಲ್ಡ್- ಕೆ.ಆರ್.ಪುರ ಮಾರ್ಗದಲ್ಲಿಒಟ್ಟು 12 ನಿಲ್ದಾಣಗಳಿದ್ದು, 35 ರೂಪಾಯಿ ಪ್ರಯಾಣ ದರ ನಿಗದಿಪಡಿಸಲಾಗಿದೆ. ಮೊದಲ ದಿನ ಸಂಜೆ 6 ಗಂಟೆಯವರೆಗೆ ಈ ಮಾರ್ಗದಲ್ಲಿ 16,319 ಜನರು ಪ್ರಯಾಣ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿದ್ದೀರಾ – ಮಾರ್ಚ್ 31ರೊಳಗೆ ಮಾಡಿದ್ರೆ ನೀವು ಸೇಫ್..!
ಪ್ರಧಾನಿ ನರೇಂದ್ರ ಮೋದಿ ಶನಿವಾರ ವೈಟ್‌ಫೀಲ್ಡ್- ಕೆ.ಆರ್.ಪುರ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದ್ದರು. ಭಾನುವಾರದಿಂದ ಪ್ರಯಾಣಿಕರಿಗೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇಂದಿನಿಂದ ಮುಂಜಾನೆ 5 ಗಂಟೆಯಿಂದ ರಾತ್ರಿ 11 ರವೆರೆಗೂ ಮೆಟ್ರೊ ರೈಲು ಸೇವೆ ದೊರೆಯುತ್ತಿದೆ. ಪ್ರಯಾಣಿಕರು ಟೋಕನ್, ಮೊಬೈಲ್ ಕ್ಯೂ ಆರ್ ಟಿಕೆಟ್, ಸ್ಮಾರ್ಟ್ ಕಾರ್ಡ್ ಬಳಸಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ವೈಟ್‌ಫೀಲ್ಡ್ ಮೆಟ್ರೋದಿಂದ ಕೆಆರ್ ಪುರವರೆಗಿನ ಬೆಂಗಳೂರು ಮೆಟ್ರೋದ 2 ನೇ ಹಂತದ ವಿಸ್ತರಣೆ ಯೋಜನೆಯಲ್ಲಿ,13. 71 ಕಿಮೀ ಉದ್ದದ ಮಾರ್ಗವನ್ನು ನಿರ್ಮಿಸಲಾಗಿದೆ. ಈ ರಸ್ತೆಯಲ್ಲಿ ಪ್ರಯಾಣಿಸಲು ಕೇವಲ 25 ನಿಮಿಷ ಸಮಯ ತೆಗೆದುಕೊಳ್ಳುತ್ತದೆ. ಈ ಮಾರ್ಗದಲ್ಲಿ ನಿತ್ಯ 1. 50 ಲಕ್ಷ ಮಂದಿ ಪ್ರಯಾಣಿಸುವ ನೀರಿಕ್ಷೆ ಇದೆ. ಪ್ರತಿ 12 ನಿಮಿಷಕ್ಕೊಂದು ರೈಲು ಕಾರ್ಯಾಚರಣೆಗೊಳಿಸಲು ಬಿಎಂಆರ್ ಸಿ ಎಲ್ ಸಜ್ಜಾಗಿದೆ.
ಇನ್ನು ಹೊಸದಾಗಿ ಉದ್ಘಾಟನೆಗೊಂಡ ನೇರಳೆ ಮೆಟ್ರೋ ಮಾರ್ಗ ವಿಸ್ತರಣೆಯಾಗಿದ್ದು, ಕೆಆರ್ ಪುರ – ಬೈಯಪ್ಪನಹಳ್ಳಿ ವರೆಗೆ ಸಂಪರ್ಕ ಕಲ್ಪಿಸಲಿದೆ. ಈ ಮಾರ್ಗದ ಕಾಮಗಾರಿಗಳು ನಡೆಯುತ್ತಿದ್ದು, ಈ ವರ್ಷದ ಕೊನೆಯಲ್ಲಿ ಸೇವೆಗೆ ಲಭ್ಯವಾಗಲಿದೆ ಅಂತಾ ಅಧಿಕಾರಿಗಳು ತಿಳಿಸಿದ್ದಾರೆ.