ಚಿಕನ್ ಪೀಸ್ ಇಲ್ಲದ ಬಿರಿಯಾನಿ ಕೊಟ್ಟ ಹೋಟೆಲ್ ಸಿಬ್ಬಂದಿ – ತಿಳಿದೋ, ತಿಳಿಯದೆಯೋ ಮಾಡಿದ ತಪ್ಪಿಗೆ ಕಟ್ಟಿದ ದಂಡ ಎಷ್ಟು ಗೊತ್ತಾ?
ನಾನ್‌ವೆಜ್ ಪ್ರಿಯರು ಹೋಟೆಲ್‌ಗೆ ಹೋದಾಗ ಮೊದಲು ಆರ್ಡರ್ ಮಾಡುವುದೇ ಬಿರಿಯಾನಿ. ಬಿರಿಯಾನಿಯೇ ಅನೇಕರ ಹಾಟ್‌ಫೇವರೆಟ್ ಆಗಿದೆ. ಹೀಗಾಗಿ ಚಿಕನ್ ಬಿರಿಯಾನಿ ಅಥವಾ ಮಟನ್ ಬಿರಿಯಾನಿ ಆಯ್ಕೆ ಮಾಡುತ್ತಾರೆ. ಇಲ್ಲೊಂದು ದಂಪತಿ ಚಿಕನ್ ಬಿರಿಯಾನಿ ತಿನ್ನಲು ಹೋಟೆಲ್‌ಗೆ ಹೋಗಿದ್ದಾರೆ. ಆದರೆ ಅವರಿಗೆ ನೀಡಿದ ಬಿರಿಯಾನಿಯಲ್ಲಿ ಚಿಕನ್ ಪೀಸ್ ಇರಲಿಲ್ಲ ಎಂಬ ಕಾರಣಕ್ಕೆ ಕಾನೂನು ಮೊರೆ ಹೋಗಿದ್ದರು. ಇದೀಗ ನ್ಯಾಯಾಲಯ ದಂಪತಿ ಪರವಾಗಿ ತೀರ್ಪು ನೀಡಿದೆ.
ಹೌದು, ಅಚ್ಚರಿಯಾದ್ರೂ ಸತ್ಯ. ಈ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಚಿಕನ್ ಇಲ್ಲದ ಬಿರಿಯಾನಿ ನೀಡಿದ ತಪ್ಪಿಗಾಗಿ 1000 ರೂ. ಪರಿಹಾರ ಮತ್ತು 150 ರೂ. ಬಿರಿಯಾನಿ ಹಣವನ್ನು ಗ್ರಾಹಕನಿಗೆ ನೀಡುವಂತೆ ಹೋಟೆಲ್ ಮಾಲಿಕನಿಗೆ ಗ್ರಾಹಕರ ನ್ಯಾಯಾಲಯ ಆದೇಶ ನೀಡಿದೆ.
ಇದನ್ನೂ ಓದಿ: ಕಾರು ನಿಲ್ಲಿಸಲು 100*100 ಸೈಟು! – ಅಬ್ಬಬ್ಬಾ.. ಸರ್ಕಾರಿ ಕಾಲೇಜು ಉಪನ್ಯಾಸಕನ ಹೆಸರಲ್ಲಿ ಕೋಟಿ-ಕೋಟಿ ಆಸ್ತಿ!
ಅಷ್ಟಕ್ಕೂ ಆಗಿದ್ದೇನು?
ಏಪ್ರಿಲ್ 2, 2023 ರಂದು ನಾಗರಭಾವಿ ನಿವಾಸಿ ಕೃಷ್ಣಪ್ಪ ಎಂಬುವರ ಮನೆಯಲ್ಲಿ ಅಡುಗೆ ಅನಿಲ ಖಾಲಿಯಾಯಿತು. ಹೀಗಾಗಿ ದಂಪತಿಗಳು ಐಟಿಐ ಲೇಔಟ್‌ನಲ್ಲಿರುವ ಹೋಟೆಲ್ ಪ್ರಶಾಂತ್‌ಗೆ ತೆರಳಿದರು. ಹೋಟೆಲ್ನಲ್ಲಿ 150 ರೂಪಾಯಿ ಕೊಟ್ಟು ಚಿಕನ್ ಬಿರಿಯಾನಿ ಖರೀದಿಸಿದರು. ದಂಪತಿ ಮನೆಗೆ ಬಂದು ಪಾರ್ಸೆಲ್ ತೆರೆದು ನೋಡಿದಾಗ ಬಿರಿಯಾನಿಯಲ್ಲಿ ಒಂದು ಚೂರು ಮಾಂಸ ಇರಲಿಲ್ಲ.
ಕೂಡಲೇ ಕೃಷ್ಣಪ್ಪ ಅಂಗಡಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಚಿಕನ್ ಬಿರಿಯಾನಿಗೆ ಹಣ ಕೊಟ್ಟರೂ ಸಾದಾ ಬಿರಿಯಾನಿ ಕೊಡಲಾಗಿದೆ ಎಂದು ತಿಳಿಸಿದರು. ಆಗ ಹೊಟೇಲ್ ಮಾಲಿಕ, ಚಿಕನ್ ಬಿರಿಯಾನಿಯ ಪಾರ್ಸೆಲ್ ಸಿದ್ಧವಾಗಿದೆ 30 ನಿಮಿಷಗಳಲ್ಲಿ ನಿಮ್ಮ ನಿವಾಸದ ವಿಳಾಸಕ್ಕೆ ಕಳುಹಿಸಲಾಗುವುದು ಎಂದು ಹೇಳಿದನು. ಎರಡು ಗಂಟೆಗಳ ಕಾಯ್ದರೂ, ಚಿಕನ್ ಬಿರಿಯಾನಿ ಬರಲಿಲ್ಲ. ದಂಪತಿಗಳು ವಿಧಿ ಇಲ್ಲದೆ ರಾತ್ರಿ ಸಾದಾ ಬಿರಿಯಾನಿಯನ್ನೇ ತಿಂದು ಮಲಗಿದರು.
ಬಳಿಕ ಕೃಷ್ಣಪ್ಪ ಅವರು ಏಪ್ರಿಲ್ 28, 2023 ರಂದು ಹೋಟೆಲ್ ಮಾಲಿಕನಿಗೆ ತಾನು (ಕೃಷ್ಣಪ್ಪ) ಕಾನೂನು ಮೊರೆ ಹೋಗುವುದಾಗಿ ಸೂಚನೆ ನೀಡಿದರು. ಇದಕ್ಕೆ ಹೋಟೆಲ್ ಮಾಲಿಕ ಅದು ಪ್ರತಿಕ್ರಿಯೆಯನ್ನು ನೀಡಲಿಲ್ಲ. ನಂತರ ಕೃಷ್ಣಪ್ಪ ಅವರು ಮೇ ತಿಂಗಳಿನಲ್ಲಿ ಶಾಂತಿನಗರದಲ್ಲಿರುವ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಹೋಟೆಲ್ ಮಾಲಿಕರ ವಿರುದ್ಧ ದೂರು ದಾಖಲಿಸಿದರು. 30,000 ರೂಪಾಯಿ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಈ ಪ್ರಕರಣವನ್ನು ಕೃಷ್ಣಪ್ಪ ಅವರು ತಾವೇ ನ್ಯಾಯಾಲಯದಲ್ಲಿ ವಾದಿಸಿದರು. ಆದರೆ ಹೋಟೆಲ್ ಮಾಲಿಕರು ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ನ್ಯಾಯಾಲಯವು ಕೃಷ್ಣಪ್ಪ ವಾದವನ್ನು ಆಲಿಸಿ ಮತ್ತು ನೀಡಿದ ಸಾಕ್ಷಾಧಾರವನ್ನು ಪರಿಶೀಲಿಸಿ ಅಕ್ಟೋಬರ್ 5, 2023 ರಂದು ತೀರ್ಪು ನೀಡಿತು. ಹೋಟೆಲ್ ತಿಳಿದೋ ತಿಳಿಯದೆಯೋ ತಪ್ಪು ಮಾಡಿರುವುದು ಸ್ಪಷ್ಟವಾಗಿದೆ. ಹೋಟೆಲ್ ಗ್ರಾಹಕರಿಂದ ಚಿಕನ್ ಬಿರಿಯಾನಿಗೆ 150 ರೂ. ಪಡೆದು ತಪ್ಪಾದ ಪಾರ್ಸೆಲ್ ಅನ್ನು ನೀಡಿದೆ. ಇದು ಅನ್ಯಾಯ. ಅಲ್ಲದೆ ತಮ್ಮ ತಪ್ಪಿನ ಬಗ್ಗೆ ಹೋಟೆಲ್‌ಗೆ ಎಚ್ಚರಿಕೆ ನೀಡಿದರೂ ಬದಲಿ ಪಾರ್ಸಲ್ ಅನ್ನು ನೀಡದೆ ಗ್ರಾಹಕರಿಗೆ ಸೇವೆ ಸಲ್ಲಿಸುವಲ್ಲಿ ಹೋಟೆಲ್ ವಿಫಲವಾಗಿದೆ. ಹೀಗಾಗಿ ಹೋಟೆಲ್ ಮಾಲೀಕ ಗ್ರಾಹಕನಿಗೆ 1000 ರೂಪಾಯಿ ಪರಿಹಾರ ನೀಡಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ.