24/7 ಹೋಟೆಲ್ ತೆರೆಯಲು ಅವಕಾಶ ನೀಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ ಬಿಬಿಹೆಚ್ಎ
ಬೆಂಗಳೂರು: ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ (ಬಿಬಿಹೆಚ್ಎ) ರೆಸ್ಟೋರೆಂಟ್‌ಗಳು 24/7 ತೆರೆದಿರಲು ಅವಕಾಶ ನೀಡುವಂತೆ ನಗರ ಪೊಲೀಸರಿಗೆ ನಿರ್ದೇಶನ ನೀಡುವಂತೆ ರಾಜ್ಯ ಸರ್ಕಾರವನ್ನು ವಿನಂತಿಸಿದೆ. ವ್ಯಾಪಾರವನ್ನು ಹೆಚ್ಚಿಸಲು ಮತ್ತು ಗ್ರಾಹಕರಿಗೆ ಹೆಚ್ಚಿನ ಸೇವೆ ಒದಗಿಸುವ ಉದ್ದೇಶದಿಂದ ಹೋಟೆಲ್ ಮಾಲೀಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಕುಸಿಯಿತು ನಿರ್ಮಾಣಗೊಳ್ಳುತ್ತಿರುವ ಸೇತುವೆ – 1,700 ಕೋಟಿ ರೂ. ನೀರಿನಲ್ಲಿ ಹೋಮ
ದಿನದ 24 ಗಂಟೆಯೂ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳನ್ನು ತೆರೆದಿಡಲು ಅವಕಾಶ ನೀಡಬೇಕೆಂದು ಕಳೆದ ಒಂದು ವರ್ಷದಿಂದ ಬಿಬಿಹೆಚ್‌ಎ ಸರ್ಕಾರ ಹಾಗೂ ಪೊಲೀಸರಲ್ಲಿ ಮನವಿ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ತಡರಾತ್ರಿ 1 ಗಂಟೆವರೆಗೆ ಹೋಟೆಲ್‌ಗಳನ್ನು ತೆರೆಯಲು ಹಿಂದೆಯೇ ಅನುಮತಿ ನೀಡಿದೆ. ಆದರೆ, ಪೊಲೀಸ್ ಇಲಾಖೆ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ.
ಬೆಂಗಳೂರಿನಂತಹ ಮಹಾನಗರದಲ್ಲಿ ವಸತಿ ಪ್ರದೇಶಗಳಿಗೆ ತೊಂದರೆಯಾಗದಂತೆ ಮಲ್ಲೇಶ್ವರಂ, ಇಂದಿರಾನಗರ ಮತ್ತು ಹೆಬ್ಬಾಳದಂತಹ ವಾಣಿಜ್ಯ ಪ್ರದೇಶಗಳಲ್ಲಿ ಕನಿಷ್ಠ 24/7 ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳನ್ನು ತೆರೆಯುವ ಅಗತ್ಯವಿದೆ ಎಂದು ಎಂದು ಬಿಬಿಎಚ್‌ಎ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.
ಸರ್ಕಾರ ತಡರಾತ್ರಿ 1 ಗಂಟೆವರೆಗೆ ಹೋಟೆಲ್‌ಗಳನ್ನು ತೆರೆಯಲು ಹಿಂದೆಯೇ ಅನುಮತಿ ನೀಡಿದೆ. ಆದರೆ, ಪೊಲೀಸ್ ಇಲಾಖೆ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಹೋಟೆಲ್, ಬೇಕರಿ, ಸ್ವೀಟ್ ಸ್ಟಾಲ್, ಐಸ್‌ಕ್ರೀಂ ಪಾರ್ಲರ್‌ಗಳಿಗೆ ಇದರಿಂದ ತೊಂದರೆಯಾಗುತ್ತಿದ್ದು, ನಿರೀಕ್ಷಿತ ವ್ಯಾಪಾರ ಮಾರ್ಗಸೂಚಿ ಹೊರಡಿಸಿದ್ದರೂ ಇದರ ಪ್ರಯೋಜನವಾಗಿಲ್ಲ. ಇನ್ನಾದರೂ ಸರ್ಕಾರ ಹೊಟೆಲ್ ಉದ್ಯಮಿಗಳಿಗೆ ನೆರವಾಗಬೇಕು ಎಂದು ಮನವಿ ಮಾಡಿದ್ದಾರೆ.
ನಾವು ಈಗ ಮತ್ತೊಮ್ಮೆ ಹೊಸ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಸರ್ಕಾರ ಮತ್ತು ಪೊಲೀಸರು ನಮ್ಮ ಮನವಿಯನ್ನು ಸ್ವೀಕರಿಸುತ್ತಾರೆ ಎಂಬ ಭರವಸೆ ಇದೆ. 30 ದಿನಗಳಲ್ಲಿ ನಮಗೆ ಅನುಮತಿ ನೀಡದಿದ್ದರೇ ಕಾನೂನುಬದ್ಧವಾಗಿ ಹೋರಾಟ ನಡೆಸಲು ಸಿದ್ದರಾಗಿದ್ದೇವೆ ಎಂದು ಹೇಳಿದರು.
ಇದರಿಂದ ವ್ಯಾಪಾರ ಉತ್ತೇಜನವಾಗುತ್ತದೆ, ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಗ್ರಾಹಕರ ಅಗತ್ಯಗಳನ್ನು ಪೂರೈಸುವ ಜೊತೆಗೆ ಹೋಟೆಲ್ಗಳಿಗೆ ಹೆಚ್ಚುವರಿ ಆದಾಯವನ್ನು ತರುತ್ತದೆ. ವಿಶೇಷವಾಗಿ ರಾತ್ರಿಯಲ್ಲಿ ಕೆಲಸ ಮಾಡುವ ಅಥವಾ ಪ್ರಯಾಣಿಸುವವರಿಗೆ ಸಾಕಷ್ಟು ಅನುಕೂಲಕವಾಗುತ್ತದೆ. ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳನ್ನು ರಾತ್ರಿಯಿಡೀ ತೆರೆಯಲು ಅನುಮತಿಸಿದರೇ, ಅದು ನಗರದಲ್ಲಿನ ಗೂಂಡಾಗಿರಿಯನ್ನು ಕಡಿಮೆ ಮಾಡಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.