ಅತ್ತೆಯನ್ನ ಸಾಯಿಸ್ಬೇಕು.. ಮಾತ್ರೆ ಕೊಡಿ ಡಾಕ್ಟ್ರೇ..! – ಸೊಸೆ ಖತರ್ನಾಕ್ ಪ್ಲ್ಯಾನ್ ಗೆ ಡಾಕ್ಟರ್ ಸುಸ್ತು!

ಜಗತ್ತು ಎಷ್ಟು ಮುಂದುವರಿದ್ರು ಈ ಅತ್ತೆ ಸೊಸೆ ಜಗಳಕ್ಕೆ ಮಾತ್ರ ಬ್ರೇಕ್ ಬೀಳೋದಿಲ್ಲ. ಅತ್ತೆ ಸೊಸೆ ಅನ್ಯೂನ್ಯವಾಗಿರೋದು ತೀರಾ ಕಡಿಮೆ. ಸಣ್ಣ ವಿಷ್ಯ ಸಿಕ್ಕಿದ್ರೂ ಸಾಕು ಜಗಳ ಮಾಡೋವರೆಗೂ ನಿದ್ದೆ ಬರೋದಿಲ್ಲ ಅನ್ನೋತರ ಆಡ್ತಾರೆ. ಆದ್ರೀಗ ಇಲ್ಲೊಬ್ಬಳು ಮಹಿಳೆ ಅತ್ತೆಯನ್ನೇ ಮುಗಿಸೋಕೆ ಮುಂದಾಗಿದ್ಲು! ಸಣ್ಣ ಎಡವಟ್ಟಿನಿಂದ ಈಗ ಸಿಕ್ಕಿ ಬಿದ್ದಿದ್ದಾಳೆ.
ಇದನ್ನೂ ಓದಿ: ಮುಂಬೈ ಇಂಡಿಯನ್ಸ್ಗೆ ಭರ್ಜರಿ ಗೆಲುವು- ಗುಜರಾತ್ ಜೈಂಟ್ಸ್‌ಗೆ ಸೋಲು
ಈ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆಯೊಬ್ಬರಿಗೆ ಆಕೆಯ ಅತ್ತೆ ತುಂಬಾ ಹಿಂಸೆ ಕೊಡುತ್ತಿದ್ದಾರಂತೆ. ಅತ್ತೆ ಕಾಟದಿಂದ ಬಚಾವ್ ಆಗಲು ಆಕೆ ವೈದ್ಯರ ಮೊರೆ ಹೋಗಿದ್ದಾಳೆ. ವೈದ್ಯರೊಂದಿಗಿನ ಚಾಟಿಂಗ್ ಲಿಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಅಷ್ಟಕ್ಕೂ ಆಗಿದ್ದೇನು?
ಬೆಂಗಳೂರು ಮೂಲದ ವೈದ್ಯರಾದ ಡಾ. ಸುನಿಲ್ ಕುಮಾರ್ ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ ಓರ್ವ ಮಹಿಳೆ ಪರಿಚಯವಾಗಿದ್ದಾಳೆ. ಮಹಿಳೆ ಇನ್ಸ್ಟಾಗ್ರಾಮ್ ಮೂಲಕ ಡಾ. ಸುನಿಲ್ ಕುಮಾರ್ರ ದೂರವಾಣಿ ಸಂಖ್ಯೆ ಪಡೆದಿದ್ದಾಳೆ. ನಂತರ, ಸೋಮವಾರ (ಫೆಬ್ರವರಿ 17) ರಂದು ಮಹಿಳೆ, ಡಾ. ಸುನಿಲ್ ಕುಮಾರಿಗೆ ವಾಟ್ಸಾಪ್ನಲ್ಲಿ ಸಂದೇಶ ಕಳುಹಿಸಿದ್ದಾಳೆ. ಬಳಿಕ ವೈದ್ಯರ ಬಳಿ ಚಾಟ್ ಮಾಡಲು ಶುರುಮಾಡಿದ ಮಹಿಳೆ ವಿಚಾರ ಹೇಳಿದ್ರೆ ಬೈತೀರಾ ಅನಿಸುತ್ತೆ ಅಂತಾ ಹೇಳಿದ್ದಾಳೆ. ಏನು ಹೇಳಿ ಎಂದು ವೈದ್ಯರು ಕೇಳಿದ್ದಕ್ಕೆ, ಸಾಯಿಸುವ ವಿಚಾರ, ಹೇಗೆ ಸಾಯಿಸುವುದು ಅಂತ ಹೇಳಿದ್ದಾಳೆ. ಅದಕ್ಕೆ ವೈದ್ಯರು ಯಾರನ್ನ ಸಾಯಿಸ್ಬೇಕು? ಯಾಕ ಸಾಯಿಸ್ಬೇಕು ಅಂತಾ ಕೇಳಿದ್ದಾರೆ. ಅದಕ್ಕೆ ಮಹಿಳೆ, ತನ್ನ ಅತ್ತೆಯನ್ನ ಸಾಯಿಸ್ಬೇಕು.. ಆಕೆ ತುಂಬಾ ಹಿಂಸೆ ಕೊಡ್ತಾ ಇದ್ದಾರೆ, ಅದಕ್ಕೆ ನಿಮ್ಮನ್ನು ಕೇಳೋಣ ಅಂತ. ಏನಾದ್ರೂ ಹೇಳ್ತೀರಾ ಹೇಗೆ ಸಾಯಿಸೋದು ಅಂತ. ಪ್ಲೀಸ್ ಹೇಳಿ. ತುಂಬಾ ಏಜ್ ಆಗಿದೆ ಎಂದು ಹೇಳಿದ್ದಾಳೆ. ಅದಕ್ಕೆ ವೈದ್ಯ ನಾವು ಪ್ರಾಣ ಉಳಿಸೋ ಜನ, ಪ್ರಾಣ ತೆಗೆಯೋರು ಅಲ್ಲ ಅಂತಾ ಹೇಳಿದ್ದಾರೆ. ಬಳಿಕ ಆ ಬಳಿಕ ಮಹಿಳೆ ಕೂಡಲೇ ಸಂದೇಶಗಳನ್ನು ಡಿಲೀಟ್ ಮಾಡಿದ್ದು, ವೈದ್ಯರ ನಂಬರ್ ಬ್ಲಾಕ್ ಮಾಡಿದ್ದಾರೆ.
ಮಹಿಳೆಯ ಸಂದೇಶ ಓದಿ ಶಾಕ್ ಆದ ವೈದ್ಯ ಸುನಿಲ್ ಕುಮಾರ್ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ವೈದ್ಯ ಸುನಿಲ್ ಕುಮಾರ್ ಮಾತನಾಡಿದ್ದು, “ಸಹನಾ ಎಂಬುವರು ನನಗೆ 17ನೇ ತಾರೀಖು ಮೆಸೇಜ್ ಮಾಡಿದ್ದರು. ಕನ್ನಡದಲ್ಲಿ ಸಂದೇಶ ಕಳುಹಿಸಿ ಮಾತು ಆರಂಭಿಸಿದರು. ನೀವು ನನಗೆ ಬೈಯುವುದಿಲ್ಲ ಎಂದರೆ ನಿಮ್ಮನ್ನು ಒಂದು ಮಾತು ಕೇಳುತ್ತೇನೆ ಎಂದರು. ಬಳಿಕ ಅತ್ತೆ ತುಂಬ ಕಿರುಕುಳ ನೀಡುತಿದ್ದಾರೆ. ಅವರನ್ನು ಸಾಯಿಸಲು ಎರಡು ಮಾತ್ರೆ ಕೊಡಿ ಎಂದರು. ಅದಾದ ಬಳಿಕ ನಾನು ಪ್ರಶ್ನೆ ಮಾಡಿದೆ. ಬಳಿಕ ಎಲ್ಲ ಸಂದೇಶಗಳನ್ನು ಡಿಲೀಟ್ ಮಾಡಿದರು. ಡಿಲೀಟ್ ಆಗುವ ಮೊದಲೇ ನಾನು ಸ್ಕ್ರೀನ್ಶಾಟ್ ತೆಗೆದುಕೊಂಡಿದ್ದೆ. ಬಳಿಕ ನಾನು ಸಂಜಯನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದೇನೆ ಎಂದು ಹೇಳಿದರು.