ಟೊಮ್ಯಾಟೋ ಬೆಲೆ ಏರಿಕೆ ಬೆನ್ನಲ್ಲೇ ಹೋಟೆಲ್‌ ನಲ್ಲಿ ದರ ಹೆಚ್ಚಳ!

ಟೊಮ್ಯಾಟೋ ಬೆಲೆ ಏರಿಕೆ ಬೆನ್ನಲ್ಲೇ ಹೋಟೆಲ್‌ ನಲ್ಲಿ ದರ ಹೆಚ್ಚಳ!

ಬೆಂಗಳೂರು: ತರಕಾರಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಟೊಮ್ಯಾಟೋ ಬೆಲೆಯಂತೂ ಸೇಬು ಹಣ್ಣಿಗಿಂತಲೂ ದುಬಾರಿಯಾಗಿದೆ. ದರ ಏರಿಕೆಯಿಂದಾಗಿ ಗ್ರಾಹಕರು ಕಂಗಾಲಾಗಿದ್ದಾರೆ. ಈ ಬೆನ್ನಲ್ಲೇ ಜನರಿಗೆ ಹೋಟೆಲ್‌ ತಿನುಸುಗಳ ಬೆಲೆ ಏರಿಕೆಯ ಶಾಕ್‌ ತಟ್ಟಿದೆ.

ಟೊಮ್ಯಾಟೋ ದರ ಏರಿಕೆಯ ಹಿನ್ನೆಲೆ ಬೆಂಗಳೂರಿನಲ್ಲಿ ಟೊಮ್ಯಾಟೋ ಬಳಸಿರುವ ಎಲ್ಲಾ ಊಟ – ತಿನಿಸುಗಳ ಬೆಲೆಯಲ್ಲಿ ಶೇ. 10ರಷ್ಟು ಏರಿಕೆಯಾಗಿದೆ. ಒಂದು ಕೆಜಿ ಟೊಮ್ಯಾಟೋ ಬೆಲೆ 100 ರೂ.ಗಳಿಂದ 120 ರೂ.ಗಳಾಗಿದೆ. ಈ ಹಿನ್ನೆಲೆಯಲ್ಲಿ ಟೊಮ್ಯಾಟೋ ಬಳಸುವ ತಿಂಡಿ ಹಾಗೂ ತಿನಿಸುಗಳ ಬೆಲೆಯನ್ನು ಏರಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಇನ್ನುಮುಂದೆ ಪಿಯುಸಿ ವಿದ್ಯಾರ್ಥಿಗಳಿಗೆ 80 ಅಂಕಗಳಿಗೆ ಎಕ್ಸಾಂ – ಪಾಸ್‌ ಮಾರ್ಕ್ಸ್ ಗೆ ಷರತ್ತು ಅನ್ವಯ!

ಹೋಟೆಲ್ ನಲ್ಲಿ ಸಾಂಬಾರ್, ಬಿಸಿಬೇಳೆ ಬಾತ್, ಪಲ್ಯಗಳು, ಉಪ್ಪಿಟ್ಟು ಇತ್ಯಾದಿಗಳಿಗೆ ಟೊಮ್ಯಾಟೋ ಬಳಸಲಾಗುತ್ತದೆ. ಆ ಎಲ್ಲಾ ಪದಾರ್ಥಗಳ ಮೇಲೆ ಶೇ. 10ರಷ್ಟು ಬೆಲೆ ಹೆಚ್ಚಳವಾಗಿದೆ. ಇನ್ನು, ಇಡ್ಲಿ, ಮಸಾಲೆ ದೋಸೆಯಂಥ ಕೆಲವು ತಿಂಡಿಗಳ ಜೊತೆಗೆ ಸಾಂಬಾರ್ ಕೊಡಲಾಗುತ್ತದೆ. ಅಂಥ ತಿಂಡಿಗಳ ಮೇಲಿನ ದರವನ್ನೂ ಸುಮಾರು 5 ರೂ.ಗಳಷ್ಟು ಏರಿಕೆ ಮಾಡಲಾಗಿದೆ. ಅಷ್ಟೇ ಅಲ್ಲ, ಟೊಮ್ಯಾಟೋ ಬಾತ್ ತಯಾರಿಕೆಯನ್ನು ನಿಲ್ಲಿಸಲಾಗಿದೆ. ಇನ್ನು, ಗೋಬಿ ಮಂಚೂರಿ, ಫ್ರೆಂಚ್ ಫ್ರೈಸ್ (ಫಿಂಗರ್ ಚಿಪ್ಸ್), ವೆಜ್ ಫ್ರೈಡ್ ರೈಸ್ ಗಳ ಜೊತೆಗೆ ನೀಡಲಾಗುವ ಟೊಮೆಟೋ ಕೆಚಪ್ ಅನ್ನೂ ರದ್ದುಗೊಳಿಸಲಾಗಿದೆ! ಟೊಮೆಟೋ ದುಬಾರಿಯಾಗಿರುವುದರಿಂದ ಟೊಮೆಟೋ ಕೆಚಪ್ ಗಳೂ ದುಬಾರಿಯಾಗಿದ್ದು ಅವುಗಳ ದರವನ್ನು ಈ ತಿನಿಸುಗಳ ಜೊತೆಗೆ ಸೇರಿಸಿದರೆ ಗ್ರಾಹಕರು ಬೇಸರಗೊಳ್ಳುತ್ತಾರೆ ಎಂಬ ಕಾರಣದಿಂದ ಕೆಚಪ್ ಅನ್ನು ನೀಡಲಾಗುತ್ತಿಲ್ಲ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.

ದರ ಏರಿಕೆ ಕುರಿತಂತೆ, ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಪಿ.ಸಿ. ರಾವ್ ಅಧ್ಯಕ್ಷ ಪ್ರತಿಕ್ರಿಯೆ ನೀಡಿದ್ದಾರೆ. ಹೋಟೆಲ್ ಮಾಲೀಕರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಟೊಮ್ಯಾಟೋ ಬೆಲೆ ಗಗನಕ್ಕೇರಿದೆ. ಕೆಜಿಗೆ 120 ರೂ.ಗಳಿಂದ 150 ರೂ. ದರದಲ್ಲಿ ಟೊಮ್ಯಾಟೋ ಮಾರಾಟವಾಗುತ್ತಿದೆ. ಇದರಿಂದಾಗಿ, ಟೊಮ್ಯಾಟೋಗಳನ್ನು ಯಾವ ಅಡುಗೆಗಳಲ್ಲಿ ಬಳಸಲಾಗುತ್ತದೋ ಆ ಅಡುಗೆಗಳ ಬೆಲೆಗಳನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

“ಅಷ್ಟೇ ಅಲ್ಲ, ಹಾಲಿನ ದರವನ್ನು ಸಹ ಸರ್ಕಾರ ಇನ್ನು ಕೆಲವೇ ದಿನಗಳಲ್ಲಿ ಲೀಟರ್ ಗೆ 5 ರೂ.ನಷ್ಟು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಿದೆ. ಅದಾದ ನಂತರ ಕಾಫಿ, ಟೀ, ಬಾದಾಮಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಬೆಲೆಗಳನ್ನೂ ಹೆಚ್ಚಿಸಬೇಕಾಗುತ್ತದೆ. ಆಹಾರ ತಯಾರಿಸುವ ಕಚ್ಚಾ ಪದಾರ್ಥಗಳ ಬೆಲೆಗಳು ಹೆಚ್ಚಳವಾದಾಗ, ತಿನಿಸುಗಳ ಬೆಲೆಗಳನ್ನೂ ಹೆಚ್ಚಿಸುವುದು ಹೋಟೆಲ್ ಉದ್ಯಮಕ್ಕೆ ಅನಿವಾರ್ಯವಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.

suddiyaana