2023 ಅಂತ್ಯಕ್ಕೆ ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವೆ ಹಳದಿ ಮಾರ್ಗದ ಮೆಟ್ರೋ ಸಂಚಾರ ಆರಂಭ

2023 ಅಂತ್ಯಕ್ಕೆ ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವೆ ಹಳದಿ ಮಾರ್ಗದ ಮೆಟ್ರೋ ಸಂಚಾರ ಆರಂಭ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಜನರಿಗೆ ಖುಷಿ ಸುದ್ದಿ ಇದೆ. ಬಹು ನಿರೀಕ್ಷಿತ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ಮೆಟ್ರೋ ಮಾರ್ಗವನ್ನು ಈ ವರ್ಷದ ಅಂತ್ಯಕ್ಕೆ ಆರಂಭಿಸಲು ಬಿಎಂಆರ್‌ಸಿಎಲ್ ಸಜ್ಜಾಗಿದೆ.

ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ ಮೆಟ್ರೋ ಮಾರ್ಗವನ್ನು 4,255 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಶೇ.50 ಕ್ಕೂ ಅಧಿಕ ಕಾಮಗಾರಿ ಮುಗಿದಿದ್ದು, ಉಳಿದಂತೆ ಬಾಕಿ ಇರುವ ಕಾಮಗಾರಿಯನ್ನು ಮುಂದಿನ 6 ತಿಂಗಳಲ್ಲಿ ಪೂರೈಸಿಕೊಳ್ಳಲು ಬಿಎಂಆರ್‌ಸಿಎಲ್ ಮುಂದಾಗಿದೆ.  ಪ್ರಸಕ್ತ ವರ್ಷಾಂತ್ಯಕ್ಕೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮವು ತಿಳಿಸಿದೆ.

ಇದನ್ನೂ ಓದಿ: ಈ ಮೆಟ್ರೋ ನಿಲ್ದಾಣದಲ್ಲಿ ಬೆಕ್ಕೇ ಸ್ಟೇಷನ್ ಮಾಸ್ಟರ್! – ಮಿಯಾಂವ್ ಮಿಕಾನ್ ಬಗ್ಗೆ ಗೊತ್ತಾ?

ಈ ಮೊದಲು ಎರಡು ಹಂತಗಳಲ್ಲಿ ಮೆಟ್ರೋ ರೈಲು ಕಾರ್ಯಾಚರಣೆ ಆರಂಭಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿತ್ತು. ಮೊದಲ ಹಂತದಲ್ಲಿ ಜೂನ್ ತಿಂಗಳಲ್ಲಿ ಬೊಮ್ಮಸಂದ್ರದಿಂದ ಸಿಲ್ಕ್‌ಬೋರ್ಡ್‌ವರೆಗೆ ಮತ್ತು ಎರಡನೇ ಹಂತದಲ್ಲಿ ಡಿಸೆಂಬರ್‌ನಲ್ಲಿ ಸೆಂಟ್ರಲ್ ಸಿಲ್ಕ್‌ಬೋರ್ಡ್‌ನಿಂದ ಆರ್‌ವಿ ರಸ್ತೆವರೆಗೆ ರೈಲುಗಳ ಸಂಚಾರಕ್ಕೆ ಉದ್ದೆಶಿಸಿತ್ತು. ಈ ಕ್ರಮದಿಂದ ಪ್ರಯಾಣಿಕರನ್ನು ಆಕರ್ಷಿಸುವುದು ಕಷ್ಟವೆಂದು ಅರಿತು ಒಂದೇ ಹಂತದಲ್ಲಿ ಪೂರ್ಣಗೊಳಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

ಐಟಿ-ಬಿಟಿ ಕಂಪನಿಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದ್ದು, ನಮ್ಮ ಮೆಟ್ರೋ ಉತ್ತಮ ಆದಾಯವನ್ನೂ ತಂದುಕೊಡಲಿದೆ. ಈ ಮಾರ್ಗದಲ್ಲಿ ಸುಮಾರು 3.70 ಲಕ್ಷ ಮಂದಿ ಪ್ರಯಾಣಿಸಬಹುದೆಂದು ಅಂದಾಜಿಸಲಾಗಿದೆ. ಹೀಗಾಗಿ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗೆ 16 ಕಡೆಗಳಲ್ಲಿ ಮೆಟ್ರೋ ನಿಲ್ದಾಣಗಳನ್ನು ಮಾಡಲಾಗಿದೆ.  ಅವುಗಳೆಂದರೆ ಆರ್‌ವಿ ರಸ್ತೆ, ರಾಗಿಗುಡ್ಡ, ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸೆಂಟ್ರಲ್ ಸಿಲ್ಕ್ ಬೋರ್ಡ್, ಬೊಮ್ಮನಹಳ್ಳಿ, ಹೊಂಗಸಂದ್ರ, ಕೂಡ್ಲುಗೇಟ್, ಸಿಂಗಸಂದ್ರ, ಬೆರಟೇನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಇನ್ಫೋಸಿಸ್ ಫೌಂಡೇಶನ್, ಕೋನಪ್ಪನ ಅಗ್ರಹಾರ, ಹೊಸೂರು ರಸ್ತೆ, ಹೆಬ್ಬಗೋಡಿ ಮತ್ತು ಬೊಮ್ಮಸಂದ್ರ.

ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವಿನ ಮಾರ್ಗವು ಅತ್ಯಧಿಕ ವಾಹನ ದಟ್ಟಣೆಯಿಂದ ಕೂಡಿದೆ. ಇದರಿಂದ ವಾಹನ ಸವಾರರು ಬಹುಪಾಲು ಸಮಯವನ್ನು ರಸ್ತೆಯಲ್ಲಿಯೇ ಕಳೆಯುವಂತಾಗಿದೆ. ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಶುರುವಾದರೆ ಸಾಕಷ್ಟು ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಕ್ಕೆ ಪ್ರಮುಖ ಸಂಪರ್ಕ ಸೇತುವೆಯಾಗಲಿದೆ.

suddiyaana