ಸತ್ತ ಎರಡು ವರ್ಷಗಳ ಬಳಿಕ ಸೈಕೋ ಕಿಲ್ಲರ್ ಅರೆಸ್ಟ್! – 2 ಕೊಲೆಯ ಆರೋಪಿ ಸಿಕ್ಕಿ ಬಿದ್ದಿದ್ದು ಹೇಗೆ?
ಕೆಲ ಪ್ರಕರಣದ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಒಂದೊಂದು ಮಾರ್ಗ ಆರಿಸಿಕೊಳ್ಳುತ್ತಾರೆ. ಕೆಲವರು ಊರು ಬಿಟ್ಟು ಬೇರೇ ಊರಿಗೆ ಹೋಗಿ ನೆಲೆಸುತ್ತಾರೆ. ಇನ್ನೂ ಕೆಲ ಆರೋಪಿಗಳು ಬಂಧನದಿಂದ ತಪ್ಪಿಸಿಕೊಳ್ಳಲು ತಮ್ಮ ಗುರುತುಗಳನ್ನು ಮರೆಮಾಚಿಕೊಳ್ಳಲು ಹೊಸ ವೇಷ ತೊಟ್ಟುಕೊಂಡು ಓಡಾಡುತ್ತಾರೆ. ಆದ್ರೆ ಇಲ್ಲೊಬ್ಬ ರೌಡಿ, ಕೊಲೆ ಆರೋಪಿ ಬಂಧನದಿಂದ ತಪ್ಪಿಸಿಕೊಳ್ಳಲು ಎರಡು ವರ್ಷಗಳಿಂದ ತಾನೇ ಸತ್ತಿರುವುದಾಗಿ ನಂಬಿಸಿ ತಲೆಮರೆಸಿಕೊಂಡಿದ್ದ. ಇದೀಗ ಈ ಪಾಪಿ ಕೊನೆಗೂ ಅರೆಸ್ಟ್ ಆಗಿದ್ದಾನೆ.
ಬೆಂಗಳೂರಿನ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಎಂಬಾತ ರೌಡಿ ಶೀಟರ್ ಪಟ್ಟಿಗೆ ಸೇರ್ಪಡಿಸಲಾಗಿತ್ತು. ಆರೋಪಿ ಮಲ್ಲಿ ಎರಡು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಆದ್ರೆ, ಪೊಲೀಸರಿಂದ ತಪ್ಪಿಸಿಕೊಳ್ಳಲು ಕಳೆದ ಎರಡು ವರ್ಷಗಳ ಹಿಂದೆ ತಾನು ಸತ್ತಿರುವುದಾಗಿ ನಂಬಿಸಿ ತಲೆಮರೆಸಿಕೊಂಡಿದ್ದ. ಅಲ್ಲದೇ ಕುಟುಂಬಸ್ಥರು ಸಹ ಮಲ್ಲಿ ಸತ್ತಿದ್ದಾನೆ ಎಂದು ದಾಖಲೆಗಳನ್ನು ಸಹ ತಯಾರಿಸಿದ್ದರು. ಇದೀಗ ಕೊಲೆ ಆರೋಪಿ ಕೊನೆಗೂ ಅಂದರ್ ಆಗಿದ್ದಾನೆ. ಸಿಸಿಬಿ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ ಮಾಡಿ ಜೈಲಿಗೆ ಹೋಗಿದ್ದ ಕಟುಕ – ಹೊರ ಬಂದ ಮೇಲೆ ಸಂತ್ರಸ್ತೆಯನ್ನು ಕೊಚ್ಚಿ ಕೊಚ್ಚಿ ಕೊಂದ ಪರಮಪಾಪಿ
ಈ ಮಲ್ಲಿ ಕಾಡುಬೀಸನಹಳ್ಳಿ ಸೋಮನ ಡ್ರೈವರ್ ಕೊಲೆ ಪ್ರಕರಣದ ಆರೋಪಿಯಾಗಿದ್ದ. ಬಳಿಕ ರಾಜಾನುಕುಂಟೆಯಲ್ಲಿ ಇನ್ನೊಂದು ಕೊಲೆ ಕೇಸಿನಲ್ಲಿಯೂ ಆರೋಪಿಯಾಗಿದ್ದ. ಬಳಿಕ ಎರಡು ವರ್ಷಗಳಿಂದ ಈತ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ. ಮನೆ ಬಳಿ ಪೊಲೀಸರು ವಿಚಾರಿಸಿದಾಗ ಅವನು ಸತ್ತು ಹೋಗಿದ್ದಾನೆ ಎಂದು ಕುಟುಂಬದವರು ಹೇಳಿದ್ದರು.
ಇನ್ನು ಸಿಸಿಬಿ ಪೊಲಿಸರು ಮಲ್ಲಿಯ ಗೆಳೆಯರು, ಪರಿಚಿತರನ್ನು ವಿಚಾರಿಸಿದರೂ ಸತ್ತಿದ್ದಾನೆ ಎಂದು ಹೇಳುತ್ತಿದ್ದರು. ಅಷ್ಟೇ ಅಲ್ಲದೇ ಆತ ಸತ್ತಿದ್ದಾನೆ ಅನ್ನುವುದಕ್ಕೆ ಬೇಕಾದ ದಾಖಲೆಗಳನ್ನು ಸಹ ಕುಟುಂಬ ರೆಡಿ ಮಾಡಿತ್ತು. ಅದರೂ ಸಹ ಅನುಮಾನ ಬಂದು ಸಿಸಿಬಿ ಪೊಲೀಸರು ತಲಾಶ್ ಮಾಡಿದ್ದರು. ಮಲ್ಲಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದರು. ಕೊನೆಗೆ ಊರೂರು ಸುತ್ತುತ್ತಾ ತಲೆಮರೆಸಿಕೊಂಡಿದ್ದ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಸಿಕ್ಕಿಬಿದ್ದಿದ್ದಾನೆ.