ಬೆಂಗಳೂರಿಗೆ ಬಂದ್ ಬಿಸಿ – ಆಟೋ-ಕ್ಯಾಬ್ ಸಿಗದೆ ಜನರ ಪರದಾಟ!
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿರುವ ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು ಮಧ್ಯರಾತ್ರಿಯಿಂದಲೇ ಬಂದ್ ಬಿಸಿ ಶುರುವಾಗಿದೆ. ಆಟೋ, ಟ್ಯಾಕ್ಸಿ, ಗೂಡ್ಸ್, ಖಾಸಗಿ ಬಸ್ ಸೇರಿ ವಿವಿಧ ಮಾದರಿಯ ಖಾಸಗಿ ಸಾರಿಗೆಯ ವಾಹನಗಳು ರಸ್ತೆಗೆ ಇಳಿಯುತ್ತಿಲ್ಲ. ಸೋಮವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಒಕ್ಕೂಟ ಆಯೋಜಿಸಿದೆ.
ಬಂದ್ ಯಶಸ್ಸಿಗಾಗಿ ಖಾಸಗಿ ಸಾರಿಗೆ ಒಕ್ಕೂಟ ಪಣತೊಟ್ಟಿದೆ. ಬೆಂಗಳೂರಿನ ಕಲಾಸಿಪಾಳ್ಯ ಖಾಸಗಿ ಬಸ್ ನಿಲ್ದಾಣದ ಒಂದರಲ್ಲೇ 250ಕ್ಕೂ ಹೆಚ್ಚು ಬಸ್ ಸ್ತಬ್ದವಾಗಿದೆ. ಕೇವಲ ಬೆಂಗಳೂರು ಮಾತ್ರವಲ್ಲದೇ ನೆರೆಯ ಜಿಲ್ಲೆಗಳ ಖಾಸಗಿ ಬಸ್ ಮಾಲೀಕರು ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಾಯ್ತು ಡೆಂಘೀ ಜ್ವರದ ಪ್ರಕರಣಗಳು – ಲಕ್ಷಣಗಳೇನು ಹಾಗೂ ತಡೆಗಟ್ಟುವ ಕ್ರಮದ ಬಗ್ಗೆ ಇಲ್ಲಿದೆ ಮಾಹಿತಿ
ಸಚಿವರ ಪ್ರತಿಕ್ರಿಯೆ ಪ್ರತಿಭಟನೆ ಹಾಗೂ ಖಾಸಗಿ ಸಾರಿಗೆಯವರ ಬೇಡಿಕೆ ಕುರಿತಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ,ಖಾಸಗಿ ಬಸ್ ಚಾಲಕರ ಬೇಡಿಕೆ ಈಡೇರಿಸಲು 5,005 ಕೋಟಿ ರೂ ಮೀಸಲು ಇಡಬೇಕಾಗುತ್ತದೆ. ಆಟೋ ಡ್ರೈವರ್ಸ್ ಯೂನಿಯನ್ ತಲಾ 10 ಸಾವಿರ ರುಪಾಯಿ ತಿಂಗಳಿಗೆ ಕೊಡಬೇಕೆಂದು ಬೇಡಿಕೆ ಇಡುತ್ತಿದೆ. ಇವೆಲ್ಲದಕ್ಕೂ 4,400 ಕೋಟಿ ಖರ್ಚಾಗುತ್ತದೆ. ಇಷ್ಟು ಹಣ ಹೊಂದಿಸುವುದು ಎಲ್ಲಿಂದ ಎಂದು ಪ್ರಶ್ನಿಸಿದ್ದಾರೆ. ಖಾಸಗಿ ಸಾರಿಗೆಗೆ ಸಂಬಂಧಿಸಿದಂತೆ 4 ಪ್ರಕರಣ ಕೋರ್ಟ್ ನಲ್ಲಿದೆ. ಇನ್ನು ಪ್ರತಿಭಟನೆಗೆ ಬೆಂಬಲಿಸುತ್ತಿರುವ, ಸಿಂಪತಿ ತೋರಿಸುತ್ತಿರುವ ಬಿಜೆಪಿಗೆ ಯಾವ ನೈತಿಕತೆ ಇದೆ? ಅವರು ಆಡಳಿತದಲ್ಲಿ ಏನು ಮಾಡಿದ್ದಾರೆ, ಈಗ ಸಿಂಪತಿ ತೋರಿಸುತ್ತಿರುವುದು ನಾಚಿಕೆಗೇಡು ಎಂದರು.
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಮುಂದೆ ಕ್ಯೂ
ಖಾಸಗಿ ಆಟೋ-ಕ್ಯಾಬ್ ಬಂದ್ ಮೆಜೆಸ್ಟಿಕ್‌ನಲ್ಲಿ ಕಟ್ಟುನಿಟ್ಟಾಗಿ ಪಾಲನೆ ಆಗಿದ್ದು, ಆಟೋ ಸಿಗದೆ, ಬೇರೆ ಬೇರೆ ಊರುಗಳಿಂದ ಬಂದ ಜನರು ಮೆಟ್ರೋ ಮೊರೆ ಹೋದರು. ಮೆಜೆಸ್ಟಿಕ್ ಮೆಟ್ರೋ ರೈಲು ನಿಲ್ದಾಣದ ಮುಂದೆ ಬ್ಯಾಗ್ ಚೆಕಪ್ ಗಾಗಿ ಕ್ಯೂನಿಂತಿರುವ ದೃಶ್ಯ ಕಂಡುಬರುತ್ತಿದೆ. ಇನ್ನು ಕೆಲವೆಡೆ ಆಟೋಗಾಗಿ ಕಾದು ನಿಂತವರಿಗೆ ಟ್ರಾಫಿಕ್ ಪೊಲೀಸರೇ ಬಿಎಂಟಿಸಿ, ಮೆಟ್ರೋ ಕಡೆಗೆ ಹೋಗಲು ಮಾರ್ಗದರ್ಶನ ಮಾಡಿದರು.
ಕಲಾಸಿಪಾಳ್ಯದಲ್ಲಿ ನಿಂತಲ್ಲೇ ನಿಂತ ಖಾಸಗಿ ಬಸ್ ಗಳು
ನೂರಾರು ಖಾಸಗಿ ಬಸ್‌ಗಳು ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಬಂದ್ ಹಿನ್ನೆಲೆ ಸ್ಥಗಿತಗೊಂಡಿದೆ. ಬಸ್‌ಗೆ ಕಲ್ಲು ತೂರಾಟ ನಡೆಯುವ ಭೀತಿಯಲ್ಲಿ, ಜೊತೆಗೆ ಸಂಘಟನೆಗಳ ಬೇಡಿಕೆ ಈಡೆರಿಕೆಗೆ ಒತ್ತಾಯಿಸಿ ಬಸ್ ಚಲಾಯಿಸದಿರಲು ಚಾಲಕರು ನಿರ್ಧರಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಬೆಂಗಳೂರಲ್ಲಿ ಖಾಸಗಿ ಸಾರಿಗೆ ಸಂಘಟನೆಗಳು ಕರೆ ನೀಡಿರುವ ಬಂದ್ ಪರಿಣಾಮ ಆಗಿದೆ.
ಶಾಲೆಗಳ ಮುಂದೆ ಪೋಷಕರ ಗೊಂದಲ
ಕೆಲ ಖಾಸಗಿ ಶಾಲೆಗಳು ಏಕಾಏಕಿ ಶಾಲೆಗೆ ರಜೆ ಘೋಷಣೆ ಮಾಡಿರುವ ಹಿನ್ನಲೆ, ಮಾಹಿತಿ ತಿಳಿಯದ ಪೋಷಕರು, ತಮ್ಮ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಂದಾಗ ಗೇಟ್ ಹಾಕಿರುವುದನ್ನು ಕಂಡು ಗೊಂದಲಕ್ಕೆ ಒಳಗಾದರು. ಯಾವುದೇ ಮೆಸೇಜ್ ಇಲ್ಲದ ಹಿನ್ನಲೆ ಬಂದಿದ್ದೇವೆ. ಈಗ ಶಾಲೆ ರಜೆ ಇದ್ದು, ವಾಪಾಸ್ ಕರೆದುಕೊಂಡು ಹೋಗಬೇಕಾಗಿದೆ ಎಂದು ಪೋಷಕರು ಹೇಳಿದ್ದಾರೆ.