ಬೈಕ್ ಸವಾರನ ಮೊಬೈಲ್ ಕಿತ್ತೆಸೆದು ಆಟೋ ಚಾಲಕನ ದರ್ಪ – ಕಾರಣ ಏನು ಗೊತ್ತಾ?

ಬೈಕ್ ಸವಾರನ ಮೊಬೈಲ್ ಕಿತ್ತೆಸೆದು ಆಟೋ ಚಾಲಕನ ದರ್ಪ – ಕಾರಣ ಏನು ಗೊತ್ತಾ?

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೆಲ ಆಟೋ ಚಾಲಕರ ದರ್ಪ ಜೋರಾಗೆ ನಡೆಯುತ್ತಿದೆ. ಕೆಲ ಚಾಲಕರು ಮೀಟರ್ ಹಾಕದೆ ಡಬಲ್ ಚಾರ್ಜ್ ಮಾಡಿ ಹಗಲು ಸುಲಿಗೆ ಮಾಡುತ್ತಿದ್ದಾರೆ. ಇದೀಗ ರ‍್ಯಾಪಿಡೋ ಬೈಕ್ ಸವಾರನಿಗೆ ಆಟೋ ಚಾಲಕನೊಬ್ಬ  ಕಿರುಕುಳ ನೀಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಆಟೋ ಚಾಲಕನೊಬ್ಬ ರ‍್ಯಾಪಿಡೋ ಬೈಕ್ ಸವಾರನನ್ನು ನಿಲ್ಲಿಸಿ ಮನಬಂದಂತೆ ನಿಂದಿಸಿದ್ದಾನೆ. ಅಲ್ಲದೇ ಕೋಪದಲ್ಲಿ ಬೈಕ್ ಸವಾರನ ಫೋನ್ ಕಸಿದುಕೊಂಡು ನೆಲಕ್ಕೆ ಎಸೆದಿದ್ದಾನೆ. ಈ ಘಟನೆ ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: ವಿಮಾನದಲ್ಲಿ ಸಿಗರೇಟ್ ಹಚ್ಚಿದ ಯುವತಿ – ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ಪೊಲೀಸರು

ಆಟೋ ಚಾಲಕ ಬೈಕ್ ಸವಾರನಿಗೆ ಕಿರುಕುಳ ನೀಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ‘ಸ್ನೇಹಿತರೇ, ಅಕ್ರಮ ರ‍್ಯಾಪಿಡೋ ದಂಧೆ ಹೇಗೆ ನಡೆಯುತ್ತಿದೆ ಎಂಬುದನ್ನು ನೋಡಿ. ಬೇರೆ ದೇಶದಿಂದ ಬಂದು ರಾಜನಂತೆ ರ‍್ಯಾಪಿಡೋ ಬೈಕ್ ಓಡಿಸುತ್ತಾನೆ. ಆಟೋ ಇಲಾಖೆ ಎಷ್ಟು ಹಾಳಾಗಿದೆ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಇಲಾಖೆಯು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಬೇರೆ ದೇಶದಿಂದ ಬಂದವನು  ವೈಟ್ ಬೋರ್ಡ್ ಹೊಂದಿದ್ದರೂ ಹುಡುಗಿಯನ್ನು ಕರೆದುಕೊಂಡು ಹೋಗಲು ಬಂದಿದ್ದಾನೆ’ ಅಂತಾ ಆಟೋ ಚಾಲಕ ರ್ಯಾಪಿಡೋ ಬೈಕ್ ಸವಾರನನ್ನು ನಿಂದಿಸಿದ್ದಾನೆ. ಅಲ್ಲದೇ ಬೈಕ್ ಸವಾರನ ಮೊಬೈಲ್ ಕಿತ್ತು ರಸ್ತೆಗೆ ಎಸೆದಿದ್ದಾನೆ. ಬಳಿಕ ಆತನ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾನೆ.

ಈ ಘಟನೆ ಬಗ್ಗೆ ಬೈಕ್ ಸವಾರ ಇನ್ನೂ ಯಾವುದೇ ದೂರು ದಾಖಲಿಸಿಲ್ಲ. ಆದರೆ ವೈರಲ್ ವಿಡಿಯೋವನ್ನು  ಆಧರಿಸಿ ಘಟನೆಯ ಕುರಿತು ತನಿಖೆ ನಡೆಸಲಾಗುವುದು. ಕಟ್ಟುನಿಟ್ಟಿನ ಮತ್ತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಅಲ್ಲದೇ ಆಟೋ ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಲ್ಲಿ ಬುಕ್ಕಿಂಗ್‌ ಮಾಡಿ ತಲುಪಬೇಕಾದ ಸ್ಥಳಕ್ಕೆ ಸುಲಭವಾಗಿ ಹೋಗಬಹುದು. ಇದಕ್ಕಾಗಿ ರ‍್ಯಾಪಿಡೋ ಬೈಕ್ ಸೇವೆಯನ್ನು ಒದಗಿಸುತ್ತಿದೆ. ರ‍್ಯಾಪಿಡೋ ಬೈಕ್ ಬುಕ್ ಮಾಡಿ ಏಕಾಂಗಿಯಾಗಿ ತಾವು ತಲುಪಬೇಕಾದ ಸ್ಥಳಕ್ಕೆ ತಲುಪಬಹುದು. ಅಲ್ಲದೇ ಈ ರ‍್ಯಾಪಿಡೋ ಸೇವೆ ಅತಿ ಕಡಿಮೆ ದರದಲ್ಲಿ ಲಭ್ಯವಿದೆ. ಜನರು ಓಡಾಡಲು ಹೆಚ್ಚು ಇದನ್ನೇ ಬಳಸುತ್ತಾರೆ ಅಂತಾ ಆರಂಭದಿಂದಲೂ ಆಟೋ ಚಾಲಕರು ಇದನ್ನು ವಿರೋಧಿಸುತ್ತಾ ಬಂದಿದ್ದಾರೆ. ರ‍್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧಿಸಬೇಕೆಂದು  ಆಟೋ ಚಾಲಕರ ಸಂಘದಿಂದ ಪ್ರತಿಭಟನೆ ಮಾಡಲಾಗಿತ್ತು.

suddiyaana