ಇರಾನ್‌, ಇಸ್ರೇಲ್‌ ವಾರ್‌ ಎಫೆಕ್ಟ್! – 600ಕ್ಕೂ ಹೆಚ್ಚು ಅಗತ್ಯ ಔಷಧಗಳ ಬೆಲೆ ಏರಿಕೆ!

ಇರಾನ್‌, ಇಸ್ರೇಲ್‌ ವಾರ್‌ ಎಫೆಕ್ಟ್! – 600ಕ್ಕೂ ಹೆಚ್ಚು ಅಗತ್ಯ ಔಷಧಗಳ ಬೆಲೆ ಏರಿಕೆ!

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷವು ಸಾಮಾನ್ಯ ಜನರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಯುದ್ಧದಿಂದಾಗಿ ಭಾರತದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಈಗಾಗಲೇ ಗ್ಯಾಸ್, ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆಯಾಗಿದೆ. ಇದೀಗ ಕೆಲ ಔಷಧಿಗಳ ಬೆಲೆಯಲ್ಲೂ ಏರಿಕೆಯಾಗಲಿದೆ

ಇದನ್ನೂ ಓದಿ: ವಾಹನ ಸವಾರರಿಗೆ ಗುಡ್‌ನ್ಯೂಸ್!‌ – ಅವಧಿ ಮುಗಿದ ಬಳಿಕವೂ 30 ದಿನ ಡಿಎಲ್ ಮಾನ್ಯ!

ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮ ಜಾಗತಿಕ ಪೂರೈಕೆ ಸರಪಳಿಯ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಸಂಕಷ್ಟದ ನಡುವೆಯೇ ಈಗ ಔಷಧಗಳ ಬೆಲೆಯೂ ಏರಿಕೆಯಾಗುವ ಲಕ್ಷಣಗಳು ಕಾಣಿಸುತ್ತಿದ್ದು, ಸಾಮಾನ್ಯ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಚ್ಚಾ ತೈಲ ಮತ್ತು ಪೆಟ್ರೋಕೆಮಿಕಲ್ಸ್‌ ಬೆಲೆ ಏರಿಕೆಯಾಗಿರುವುದರಿಂದ ಮಾತ್ರೆಗಳ ಪ್ಯಾಕೇಜಿಂಗ್‌ಗೆ ಬಳಸುವ ಫಾಯಿಲ್ಸ್ ತಯಾರಿಕೆ ವೆಚ್ಚ ಹೆಚ್ಚಾಗಿದೆ. ಈ ಕಾರಣದಿಂದಾಗಿ ಏಪ್ರಿಲ್ ಮೊದಲ ವಾರದಿಂದ ಔಷಧಗಳ ದರ ಶೇ 15 ರಿಂದ 20 ರಷ್ಟು ಏರಿಕೆಯಾಗಲಿದೆ.

ಪ್ಯಾರಸಿಟಮಾಲ್, ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಗ್ಯಾಸ್ಟ್ರಿಕ್ ಮಾತ್ರೆಗಳು ಹಾಗೂ ಕೆಮ್ಮಿನ ಸಿರಪ್ ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ಅಗತ್ಯ ಔಷಧಗಳ ಬೆಲೆ ಏರಿಕೆಯಾಗಲಿದೆ. ಇದರೊಂದಿಗೆ ಸೌಂದರ್ಯವರ್ಧಕಗಳು ಮತ್ತು ಮಕ್ಕಳ ಉತ್ಪನ್ನಗಳ ಬೆಲೆಯೂ ಹೆಚ್ಚಾಗಲಿದೆ ಎಂದು ಬೆಂಗಳೂರು ನಗರ ಡ್ರಗ್ಸ್ ಅಂಡ್ ಕೆಮಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಮಾಯಣ್ಣ ತಿಳಿಸಿದ್ದಾರೆ.

ಔಷಧ ದರ ಏರಿಕೆ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಔಷಧ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರದ ಪಾಲಿಸಿಯ ಮೇಲೆ ಅವಲಂಬಿತವಾಗಿದೆ. ಯುದ್ಧದ ಎಫೆಕ್ಟ್‌ನಿಂದ ದರ ಏರಿಕೆಯಾದರೆ ಅದು ನಮ್ಮ ಕೈಯಲ್ಲಿ ಇಲ್ಲ. ಆದರೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಔಷಧದ ಕೊರತೆಯಾಗದಂತೆ ನಾವು ಕ್ರಮ ಕೈಗೊಳ್ಳುತ್ತೇವೆ. ಹೆಚ್ಚಿನ ದರ ನೀಡಿಯಾದರೂ ಔಷಧ ಖರೀದಿ ಮಾಡಿ ಜನರಿಗೆ ತಲುಪಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಒಟ್ಟಿನಲ್ಲಿ ವಾಣಿಜ್ಯ ಗ್ಯಾಸ್ ಕೊರತೆ ಬಳಿಕ ಈಗ ಔಷಧಗಳ ಬೆಲೆ ಏರಿಕೆ ಬಿಸಿ ಜನರಿಗೆ ತಟ್ಟಲಿದ್ದು, ಮುಂದಿನ ದಿನಗಳಲ್ಲಿ ಏನೆಲ್ಲ ಸಮಸ್ಯೆಯಾಗಲಿದೆ ಎಂದು ಕಾದು ನೋಡಬೇಕಿದೆ.

Shwetha M