ಫೆ.13ರಿಂದ 17ರವರೆಗೆ ಬೆಂಗಳೂರು ಏರ್ ಶೋ – ವಿಮಾನ ಪ್ರಯಾಣಕ್ಕೂ ಮುನ್ನ ಈ ಸುದ್ದಿ ನೋಡಿ  

ಫೆ.13ರಿಂದ 17ರವರೆಗೆ ಬೆಂಗಳೂರು ಏರ್ ಶೋ – ವಿಮಾನ ಪ್ರಯಾಣಕ್ಕೂ ಮುನ್ನ ಈ ಸುದ್ದಿ ನೋಡಿ  

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಫೆ.13ರಿಂದ 17ರವರೆಗೆ ‘14ನೇ ಏರೋ ಇಂಡಿಯಾ- 2023’ ಪ್ರದರ್ಶನ ನಡೆಯಲಿದೆ. ಈ ಹಿನ್ನೆಲೆ ಫೆ.8 ರಿಂದ 17 ರವರೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೆ. 8 ರಿಂದ 17 ರವರೆಗೆ ವಿಮಾನ ಆಗಮನ ಮತ್ತು ನಿರ್ಗಮನದಲ್ಲಿ ವ್ಯತ್ಯಯ ಉಂಟಾಗಲಿದೆ. ಅಂತರರಾಷ್ಟ್ರೀಯ ಪ್ರಯಾಣ ಮಾಡುವವರು ವಿಮಾನದ ಸಮಯ ಬದಲಾವಣೆ ಕುರಿತು ತಮ್ಮ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಪದೋನ್ನತಿ ತಡೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ – ಹಿರಿಯ ವಕೀಲೆ ವಿಕ್ಟೋರಿಯಾ ಗೌರಿ ಪ್ರಮಾಣವಚನ!

ಬುಧವಾರದಿಂದ ಯಲಹಂಕ ವಾಯುನೆಲೆಯಲ್ಲಿ ಪೈಲಟ್‌ಗಳು ಏರ್‌ ಶೋ ತಾಲೀಮು ಆರಂಭಿಸಲಿದ್ದು, ಈ ಅವಧಿಯಲ್ಲಿ ಎರಡು ರನ್‌ವೇಗಳನ್ನು ಮುಚ್ಚುವುದರಿಂದ ಕೆಲವು ವಿಮಾನಗಳು ರದ್ದಾಗುವ ಸಾಧ್ಯತೆ ಕೂಡ ಇದೆ.

ರನ್‌ವೇ ಮುಚ್ಚುವ ಬಗ್ಗೆ ಟಿಕೆಟ್‌ ಕಾಯ್ದಿರಿಸಿದ್ದ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳು ಇದುವರೆಗೂ ಮಾಹಿತಿ ನೀಡಿಲ್ಲ. ಇದರ ಪರಿಣಾಮ ವಿಮಾನಯಾನದಲ್ಲಿ ಅಡೆತಡೆಗಳು ಉಂಟಾಗಬಹುದು ಎಂದು ಮೂಲಗಳು ತಿಳಿಸಿವೆ.

ಫೆ. 13 ರಿಂದ 17ರವರೆಗೆ ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ ಯಲಹಂಕದಲ್ಲಿ ವಾಯು ನೆಲೆ ವ್ಯಾಪ್ತಿಯ 10 ಕಿ.ಮೀ. ವ್ಯಾಪ್ತಿಯಲ್ಲಿ ಫೆ.20ರವರೆಗೆ ಎಲ್ಲ ರೀತಿಯ ಮಾಂಸ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು. ಈ  ಆದೇಶವನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಹಿಂಪಡೆದಿದೆ. ಜತೆಗೆ ಮಾಂಸಾಹಾರ ತ್ಯಾಜ್ಯವನ್ನು ಸೂಕ್ತ ವಿಲೇವಾರಿಗೆ ಸೂಚಿಸಿದೆ.

ಏರೋ ಇಂಡಿಯಾ ಪ್ರದರ್ಶನದ ವೇಳೆ ವಿಮಾನಗಳ ಹಾರಾಟದ ನಡುವೆ ಸುರಕ್ಷತೆ ದೃಷ್ಟಿಯಿಂದ ಹಕ್ಕಿಗಳ ಹಾರಾಟ ತಡೆಗಟ್ಟಲು ಈ ಆದೇಶ ಹೊರಡಿಸಲಾಗಿತ್ತು. ಆದರೆ, ಇದನ್ನು ಪ್ರಶ್ನಿಸಿ ಮಾಂಸಾಹಾರಿ ಹೋಟೆಲ್‌/ಉದ್ದಿಮೆಗಳನ್ನು ತೆರೆಯಲು ಅನುಮತಿ ನೀಡುವಂತೆ ವಲಯ ಆಯುಕ್ತರಿಗೆ ಮನವಿ ಸಲ್ಲಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಆದೇಶ ನಿರ್ಬಂಧ ಹಿಂಪಡೆದಿರುವುದಾಗಿ ತಿಳಿಸಿದೆ.

suddiyaana