ಬೆಂಗಳೂರಿಗರೇ ಎಚ್ಚರ.. – ನಗರದಲ್ಲಿ ಸುರಕ್ಷಿತ ಮಟ್ಟಕ್ಕಿಂತ 5.8 ಪಟ್ಟು ಹೆಚ್ಚು ವಾಯುಮಾಲಿನ್ಯ!
ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿ ಪರಿಸ್ಥಿತಿ ಈಗ ರಾಜ್ಯ ರಾಜಧಾನಿಗೂ ಬರಲಿದೆಯಾ ಅನ್ನೋ ಆತಂಕ ಶುರುವಾಗಿದೆ. ಕಂಡು ಕೇಳರಿಯದಂತಹ ವಾಯುಮಾಲಿನ್ಯ ಬೆಂಗಳೂರಿನಲ್ಲಿ ಸೃಷ್ಟಿಯಾಗಿದೆ. ಕಳೆದ 366 ದಿನಗಳಲ್ಲಿ ಬೆಂಗಳೂರಿನಲ್ಲಿ ಸರಾಸರಿ ಮಾಲಿನ್ಯದ ಮಟ್ಟ 2.5 ಮಟ್ಟವು ವಿಶ್ವ ಆರೋಗ್ಯ ಸಂಸ್ಥೆಯು ನಿಗದಿಪಡಿಸಿದ ಸುರಕ್ಷಿತ ಮಟ್ಟಕ್ಕಿಂತ 5.8 ಪಟ್ಟು ಹೆಚ್ಚಾಗಿದೆ ಎಂಬ ಆತಂಕಕಾರಿ ಅಧ್ಯಯನ ವರದಿಯೊಂದು ಬಿಡುಗಡೆಯಾಗಿದೆ.
ಗ್ರೀನ್‌ಪೀಸ್ ಇಂಡಿಯಾದ ಅಧ್ಯಯನ ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಸರಾಸರಿ 29.01 μg/m3 PM2.5 ಸಾಂದ್ರತೆಯನ್ನು ಹೊಂದಿದೆ. ಇದು WHO ನಿಗದಿಪಡಿಸಿದ 5μg/m3 ಸುರಕ್ಷಿತ ಮಟ್ಟಕ್ಕಿಂತ 5.8 ಪಟ್ಟು ಹೆಚ್ಚಾಗಿದೆ. ಅದೇ ರೀತಿ, ನಗರದ ವಾರ್ಷಿಕ ಸರಾಸರಿ PM10 ಸಾಂದ್ರತೆಯು 55.14μg/m3, ಸುರಕ್ಷಿತ ಮಟ್ಟವಾದ 15 μg/m3 ಗಿಂತ 3.7 ಪಟ್ಟು ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಮೆಗಾ ಸಿಟಿಗಳಲ್ಲಿ ವಿಪರೀತ ವಾಯುಮಾಲಿನ್ಯ – ಬೆಂಗಳೂರಿನ ಪೊಲ್ಯೂಷನ್ ಬಗ್ಗೆಯೂ ಆತಂಕ..!
ಈ ಬಗ್ಗೆ ಗ್ರೀನ್‌ಪೀಸ್ ಇಂಡಿಯಾದ ಪ್ರಚಾರ ವ್ಯವಸ್ಥಾಪಕ ಅವಿನಾಶ್ ಚಂಚಲ್ ಮಾಹಿತಿ ನೀಡಿದ್ದು, ಬೆಂಗಳೂರಿಗರು ಅಪಾಯಕಾರಿ ಕಲುಷಿತ ಗಾಳಿಯನ್ನು ಉಸಿರಾಡುತ್ತಿದ್ದಾರೆ. ವಾಹನಗಳ ಹೊರಸೂಸುವಿಕೆಯು ನಗರದಲ್ಲಿ PM2.5 ಮತ್ತು NO2 ಸಾಂದ್ರತೆಗಳಿಗೆ ಪ್ರಮುಖ ಕೊಡುಗೆಗಳಲ್ಲಿ ಒಂದಾಗಿದೆ. ಹೊಸದಾಗಿ ರಚನೆಯಾದ ಸರ್ಕಾರ ಇದನ್ನು ಅತ್ಯಂತ ತುರ್ತಾಗಿ ಪರಿಹರಿಸಬೇಕು’ ಎಂದು ಹೇಳಿದ್ದಾರೆ.
ಈ ಅಧ್ಯಯನವನ್ನು ಬೆಂಗಳೂರು ಮಾತ್ರವಲ್ಲದೇ ಕೇರಳದ ಕೊಚ್ಚಿ, ಚೆನ್ನೈ, ದೆಹಲಿ, ಮಹಾರಾಷ್ಟ್ರದ ಮುಂಬೈ ಮತ್ತು ಉತ್ತರ ಭಾರತದ ಹಲವಾರು ನಗರಗಳು ಸೇರಿದಂತೆ 11 ನಗರಗಳಲ್ಲಿ ನಡೆಸಲಾಗಿದೆ. ಸಂಶೋಧನೆಯು ಪ್ರತಿ ನಗರದಲ್ಲಿನ ವಾಯು ಗುಣಮಟ್ಟ ಸೂಚ್ಯಂಕವನ್ನು (AQI) ವಿಶ್ಲೇಷಿಸಿದೆ ಮತ್ತು ಇದು ಸೆಪ್ಟೆಂಬರ್ 2021 ರಿಂದ ಸೆಪ್ಟೆಂಬರ್ 2022 ರವರೆಗೆ ಪ್ರತಿ ದಿನವೂ ಗುಣಮಟ್ಟಕ್ಕಿಂತ ಕೆಳಗಿದೆ ಎಂದು ಕಂಡುಹಿಡಿದಿದೆ.
ತೀವ್ರ ವಾಯು ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಅಕಾಲಿಕ ಮರಣ ಮತ್ತು ಆಸ್ತಮಾ, ಅವಧಿಪೂರ್ವ ಜನನ, ಕಡಿಮೆ ತೂಕದ ಮಕ್ಕಳ ಜನನ, ಖಿನ್ನತೆ, ಸ್ಕಿಜೋಫ್ರೇನಿಯಾ, ಮಧುಮೇಹ, ಪಾರ್ಶ್ವವಾಯು ಮತ್ತು ಶ್ವಾಸಕೋಶದ ಕ್ಯಾನ್ಸರ್ ಸೇರಿದಂತೆ ಅನೇಕ ವೈದ್ಯಕೀಯ ಪರಿಸ್ಥಿತಿಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಇನ್ನು ಆತಂಕಕಾರಿ ಅಧ್ಯಯನ ವರದಿ ಮಧ್ಯೆಯೂ ಕೂಡ ಸಂಶೋಧಕರು ನಗರದಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಏನೇನು ಕ್ರಮಗಳನ್ನು ಕೈಗೊಳ್ಳಬೇಕು ಎಂಬುವುದನ್ನು ಸೂಚಿಸಿದ್ದಾರೆ. ಪ್ರಮುಖವಾಗಿ ಬಸ್ ಸೇವೆಗಳು ಸಾರಿಗೆಯ ನೈಸರ್ಗಿಕ ಮತ್ತು ಪ್ರಾಥಮಿಕ ಆಯ್ಕೆಯಾಗಿರಬೇಕು. BMTC ಬಸ್ ಗಾತ್ರವನ್ನು ದ್ವಿಗುಣಗೊಳಿಸಬೇಕು ಮತ್ತು ಎಲ್ಲಾ 11 ಬಸ್ ಲೇನ್‌ಗಳನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಬೇಕು. ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲು ವಾಹನಗಳ ಪಾರ್ಕಿಂಗ್ ಶುಲ್ಕವನ್ನು 3-4 ಪಟ್ಟು ಹೆಚ್ಚಿಸಬೇಕು ಎಂದು ಎಂದು ಶಿಫಾರಸ್ಸಿನಲ್ಲಿ ಉಲ್ಲೇಖಿಸಲಾಗಿದೆ.