ರಾಜ್ಯದಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮ – ಧ್ವಜಾರೋಹಣ ನೆರವೇರಿಸಿ, ಐದು ಗ್ಯಾರಂಟಿಗಳನ್ನು ಕೊಂಡಾಡಿದ ರಾಜ್ಯಪಾಲ ಗೆಹ್ಲೋಟ್

ರಾಜ್ಯದಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮ – ಧ್ವಜಾರೋಹಣ ನೆರವೇರಿಸಿ, ಐದು ಗ್ಯಾರಂಟಿಗಳನ್ನು ಕೊಂಡಾಡಿದ ರಾಜ್ಯಪಾಲ ಗೆಹ್ಲೋಟ್

75ನೇ ಗಣರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ. ಬೆಳಗ್ಗೆ 9 ಗಂಟೆಗೆ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಪೊಲೀಸ್ ತುಕಡಿಗಳಿಂದ ಗೌರವ ವಂದನೆ ಸ್ವೀಕಾರ ಮಾಡಿದರು.

ಇದನ್ನೂ ಓದಿ: ಚೀನಾದಿಂದ ಮೊದಲ ಚಾಲಕ ರಹಿತ ರೈಲು ರವಾನೆ – ಯಾವಾಗಿನಿಂದ ಮೆಟ್ರೋ ಸಂಚಾರ ಆರಂಭ?

ಧ್ವಜಾರೋಹಣ ಬಳಿಕ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌, ಮೊದಲು ನಾಡಿನ ಜನರಿಗೆ ಗಣರಾಜ್ಯೋತ್ಸವ ಶುಭಾಶಯ ಕೋರಿದರು. ರಾಜ್ಯದಲ್ಲಿ 223 ತಾಲೂಕು ಬರ ಅಂತ ಘೋಷಣೆ ಮಾಡಲಾಗಿದೆ. ಬರ ಪರಿಹಾರಕ್ಕಾಗಿ ಎನ್‍ಡಿಆರ್ ಎಫ್‍ಗೆ ಅನುದಾನ ಕೋರಲಾಗಿದೆ. ರಾಜ್ಯ ಸರ್ಕಾರ ಬರ ಪರಿಹಾರವಾಗಿ ರೈತರಿಗೆ 2 ಸಾವಿರ ಮಧ್ಯಂತರ ಪರಿಹಾರ ನೀಡಲಾಗಿದೆ ಎಂದರು.

ಸರ್ಕಾರ ನುಡಿದಂತೆ ನಡೆದಿದೆ. 5 ಗ್ಯಾರಂಟಿ ಯಶಸ್ವಿಯಾಗಿ ಜಾರಿ ಮಾಡಿದೆ. ಶಕ್ತಿ ಯೋಜನೆಯಲ್ಲಿ 134.34 ಕೋಟಿ ಜನ ಉಚಿತ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಯೋಜನೆ ಅಡಿ 2900.12 ಕೋಟಿ ಹಣ ಫಲಾನುಭವಿಗಳಿಗೆ ವರ್ಗಾವಣೆ ಮಾಡಲಾಗಿದೆ. ಗೃಹಜ್ಯೋತಿ ಯೋಜನೆ ಅಡಿ 1.50 ಕೋಟಿ ಗ್ರಾಹಕರು ಯೋಜನೆ ಫಲ ಪಡೆಯುತ್ತಿದ್ದಾರೆ. 700 ಕೋಟಿ ಗೃಹಜ್ಯೋತಿಗಾಗಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕುಡಿಯುವ ನೀರು, ಮೇವು, ಪರಿಹಾರ ಕ್ರಮಗಳಿಗಾಗಿ ಶಾಸಕರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಬೆಳೆ ಸಮೀಕ್ಷೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಆಗಿದೆ. ರೈತ ಸಿರಿ ಯೋಜನೆ ಅಡಿ ಸಿರಿಧಾನ್ಯ ಬೆಳೆಗಾರರಿಗೆ ಹೆಕ್ಟೇರ್ ಗೆ 10 ಸಾವಿರ ದಂತೆ ಗರಿಷ್ಠ2 ಹೆಕ್ಟೇರ್ ಗೆ ಪ್ರೋತ್ಸಾಹ ಧನ ನೀಡಲಾಗ್ತಿದೆ. ಕರ್ನಾಟಕ ಅನೀಮಿಯಾ ಮುಕ್ತ ರಾಜ್ಯ ಮಾಡಲು 185.74 ಕೋಟಿ ವೆಚ್ಚ ಮಾಡಲಾಗ್ತಿದೆ. ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಹೃದಯ ಜ್ಯೋತಿ ಯೋಜನೆ ಅನುಷ್ಠಾನಕ್ಕೆ ಕ್ರಮವಹಿಸಲಾಗಿದೆ. ಡಯಾಲಿಸಿಸ್ ಕೇಂದ್ರಗಳನ್ನ 219ಕ್ಕೆ ವಿಸ್ತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. 108 ಆರೋಗ್ಯ ಕವಚ ಯೋಜನೆ ಅಡಿ ಹೊಸದಾಗಿ 262 ಅಂಬುಲೆನ್ಸ್ ಖರೀದಿ ಮಾಡಲಾಗ್ತಿದೆ ಎಂದು ಹೇಳಿದರು.

ಬೆಂಗಳೂರು ಅಭಿವೃದ್ಧಿಗೆ ಬ್ರ್ಯಾಂಡ್ ಬೆಂಗಳೂರು, ಸಾರ್ವಜನಿಕರ ಧ್ವನಿ ಸರ್ಕಾರದ ಧ್ವನಿ ಎಂಬ ಮನೋಭಾವದಿಂದ ರೂಪಿಸಲಾಗಿದೆ. 8 ಪ್ರಮುಖ ವಿಷಯಗಳ ಕುರಿತು ತಜ್ಞರು, ಸಾರ್ವಜನಿಕರಿಂದ ಸಲಹೆ ಪಡೆಯಲಾಗಿದೆ. 70 ಸಾವಿರ ಸಲಹೆ ಬಂದಿದ್ದು ಸಮಿತಿ ಪರಿಶೀಲನೆ ಮಾಡಿ ಕ್ರಮ ಮಾಡಲಾಗುತ್ತದೆ. ಬೆಂಗಳೂರು ಮುಖ್ಯ ರಸ್ತೆಗಳ ಅಭಿವೃದ್ಧಿ 200 ಕೋಟಿ ಯೋಜನೆಗೆ ಚಾಲನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಆಯ್ದ ಸ್ಥಳಗಳಲ್ಲಿ ಸುರಂಗ ರಸ್ತೆ ನಿರ್ಮಿಸಲು ಯೋಜನೆ ರೂಪಿಸಲಾಗ್ತಿದೆ. ಪ್ರಾಯೋಗಿಕವಾಗಿ 2km ರಸ್ತೆ ನಿರ್ಮಾಣಕ್ಕೆ ಡಿಪಿಆರ್ ತಯಾರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವ ವ್ಯವಸ್ಥೆ ಮಾಡಲಾಗಿದೆ. SC-ST ನಿರುದ್ಯೋಗಿಗಳಿಗೆ ಸ್ವಾವಲಂಬಿ ಸಾರಥಿ ಯೋಜನೆ ಜಾರಿಗೆ ತರಲಾಗಿದೆ ಎಂದರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿ, ನಗರ ಪೊಲೀಸ್ ಆಯುಕ್ತ, ಬಿಬಿಎಂಪಿ ಆಯುಕ್ತ ಉಪಸ್ಥಿತರಿದ್ದರು.

Shwetha M