ದಂಡ ಪಾವತಿಗೆ 50% ಡಿಸ್ಕೌಂಟ್ – ನಾಲ್ಕು ದಿನದಲ್ಲಿ ವಸೂಲಾಗಿದ್ದು ಎಷ್ಟು ಕೋಟಿ?
ಬೆಂಗಳೂರು: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಫೈನ್ ಕಟ್ಟದೇ ಬಾಕಿ ಉಳಿಸಿಕೊಂಡವರಿಗೆ ರಾಜ್ಯ ಸಂಚಾರಿ ಪೊಲೀಸ್ ಇಲಾಖೆ ಫೆ. 11 ರವರೆಗೆ ಶೇ 50 ರಷ್ಟು ರಿಯಾಯಿತಿ ನೀಡಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ನಾಲ್ಕು ದಿನದಲ್ಲಿ 25. 42 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸುಪ್ರೀಂಗೆ ಐವರು ನೂತನ ನ್ಯಾಯಾಧೀಶರ ನೇಮಕ – ಇನ್ನೆಷ್ಟು ಹುದ್ದೆಗಳು ಬಾಕಿ!?
ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸಂಚಾರಿ ಪೊಲೀಸ್ ಇಲಾಖೆ ದಂಡ ಸಂಗ್ರಹಿಸುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ 8 ಲಕ್ಷಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥವಾಗಿದ್ದು 25.42 ಕೋಟಿಗೂ ಹೆಚ್ಚು ದಂಡ ಸಂಗ್ರಹ ಆಗಿದೆ. ಮಾತ್ರವಲ್ಲದೆ ಇನ್ನೂ ಎರಡು ದಿನದಲ್ಲಿ ಪ್ರತಿಕ್ರಿಯೆ ಹಾಗೂ ಪ್ರಕರಣಗಳನ್ನು ನೋಡಿಕೊಂಡು ಕಾಲಾವಧಿ ವಿಸ್ತರಿಸುವ ಬಗ್ಗೆ ಇಲಾಖೆ ಚಿಂತನೆ ನಡೆಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಂಡ ಪಾವತಿ ಬಗ್ಗೆ ಮಾಹಿತಿ ನೀಡಿದ ಸಂಚಾರ ವಿಶೇಷ ಪೊಲೀಸ್ ಆಯುಕ್ತ ಎಂ.ಎ. ಸಲೀಂ, ಶೇ.50 ರಿಯಾಯಿತಿ ಘೋಷಣೆ ನಂತರ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ವಾಹನ ಸವಾರರು ನಾಲ್ಕನೇ ದಿನವೂ ಸ್ವಯಂಪ್ರೇರಿತರಾಗಿ ದಂಡ ಪಾವತಿಸುತ್ತಿದ್ದಾರೆ. 8,68,405 ಪ್ರಕರಣಗಳ ಇತ್ಯರ್ಥವಾಗಿದೆ. 25,42,52,000ಕ್ಕೂ ಅಧಿಕ ಮೊತ್ತದ ದಂಡ ಸಂಗ್ರಹ ಆಗಿದೆ ಎಂದರು.
ದಂಡ ಪಾವತಿಗೆ ಏನಾದರು ಸಮಸ್ಯೆಗಳಿದ್ದರೆ ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ನಲ್ಲಿ ಪರಿಶೀಲಿಸಲು ಸೂಚನೆ ನೀಡಲಾಗಿದೆ. ಎರಡು ದಿನ ನೋಡಿಕೊಂಡು ಕಾಲಾವಧಿಯನ್ನು ವಿಸ್ತರಿಸುವ ಬಗ್ಗೆ ಚಿಂತನೆ ಇದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಚರ್ಚಿಸಲಾಗುವುದು. ಇನ್ನು 1.80 ಕೋಟಿ ಪ್ರಕರಣಗಳು ಬಾಕಿ ಇವೆ. ಸದ್ಯ 8 ಲಕ್ಷ ಪ್ರಕರಣಗಳು ಇತ್ಯರ್ಥವಾಗಿವೆ. ದಂಡ ಪಾವತಿ ಮಾಡುವ ವೇಳೆ ನಕಲಿ ನಂಬರ್ ಪ್ಲೇಟ್ಗಳ ಬಗ್ಗೆಯೂ ದೂರು ಬರುತ್ತಿವೆ. ಅಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಅಂತಹವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುತ್ತದೆ ಎಂದರು.