ಬಂಧನದ ಭೀತಿಯಿಂದ ರೇವಣ್ಣ ಬಚಾವ್! – ಒಂದು ದಿನದ ಮಟ್ಟಿಗೆ ಜಾಮೀನು ನೀಡಿದ ಕೋರ್ಟ್
ಹಾಸನದ ಹೊಳೆನರಸೀಪುರದಲ್ಲಿ ಶಾಸಕ ಹೆಚ್.ಡಿ ರೇವಣ್ಣ ವಿರುದ್ಧ ದಾಖಲಾಗಿರೋ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರೇವಣ್ಣಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಶುಕ್ರವಾರ ಮಧ್ಯಾಹ್ನದವರೆಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಕನ್ನಡ ಓದಲು ಬರಲ್ಲ.. ವರ್ಷಕ್ಕೆ 3 ಪರೀಕ್ಷೆ ನಡೆಸಲು ಹೊರಟು ಸುಮ್ಮನಾದರು – ಮಧು ಬಂಗಾರಪ್ಪ ವಿರುದ್ಧ ನಾರಾಯಣಸ್ವಾಮಿ ಕಿಡಿ
ಹೊಳೆನರಸೀಪುರದಲ್ಲಿ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ರೇವಣ್ಣ, ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಾದ ಪ್ರತಿವಾದ ಆಲಿಸಿದ ಕೋರ್ಟ್, ಅಂತಿಮವಾಗಿ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ರೇವಣ್ಣಗೆ ತಾತ್ಕಾಲಿಕವಾಗಿ ರಿಲೀಫ್ ಸಿಕ್ಕಂತಾಗಿದೆ.
ಲೈಂಗಿಕ ದೌರ್ಜನ್ಯ ಕೇಸ್ನಲ್ಲೂ ಮೊದಲನೇ ಆರೋಪಿ ಆಗಿರುವ ರೇವಣ್ಣ, ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ಗೆ ಹಾಜಾರಾಗಿದ್ದರು. ನ್ಯಾಯಾಧೀಶರ ಮುಂದೆಯೇ ಹಾಜರಾಗಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಹೊಳೆನರಸೀಪುರದ ಕೇಸ್ ಜಾಮೀನುಸಹಿತ ಕೇಸ್ ಆಗಿದ್ದರೂ ವಶಕ್ಕೆ ಪಡೆಯಬಹುದು ಎಂಬ ಅನುಮಾನದಿಂದ ಕೋರ್ಟ್ಗೆ ಹಾಜರಾಗಿದ್ದರು. ಈ ಹಿಂದೆಯೂ ಬಂಧನದ ಬೀತಿಯಿಂದ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ, ಎಸ್ಐಟಿ ಎಸ್ಪಿಪಿ, ಜಾಮೀನು ರಹಿತ ಪ್ರಕರಣಗಳನ್ನ ದಾಖಲಿಸಿಲ್ಲ ಎಂದು ಸ್ಪಷ್ಟನೆ ಕೊಟ್ಟ ಬಳಿಕ ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್ ಪಡೆದಿದ್ದರು.
ಕಿಡ್ನ್ಯಾಪ್ ಕೇಸ್ನಲ್ಲಿ ರೇವಣ್ಣಗೆ ಮತ್ತೆ ಸಂಕಷ್ಟ?
ಮೈಸೂರಿನ ಕೆ.ಆರ್ ನಗರದ ಕಿಡ್ನ್ಯಾಪ್ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವ ರೇವಣ್ಣಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಜಾಮೀನು ರದ್ದು ಕೋರಿ ಎಸ್ಐಟಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸೋ ಸಾಧ್ಯತೆ ಇದೆ. ಯಾಕಂದರೆ, ಕಿಡ್ನ್ಯಾಪ್ ಪ್ರಕರಣದಲ್ಲಿ 2ನೇ ಆರೋಪಿ ಸತೀಶ್ ಬಾಬು ವಿಚಾರಣೆ ನಡೆಸಿರುವ ಎಸ್ಐಟಿಗೆ ಮಹತ್ವದ ಸಾಕ್ಷ್ಯ ಕಲೆಹಾಕಿದೆ. ಜೊತಗೆ ರೇವಣ್ಣ ವಿರುದ್ಧ ಬಲವಾದ ಸಾಕ್ಷ್ಯ ಕಲೆ ಹಾಕಲು ತಯಾರಿ ನಡೆಸಿದೆ. ಈ ಎಲ್ಲಾ ಅಂಶ ಮುಂದಿಟ್ಟು ಮೇಲ್ಮನವಿ ಸಲ್ಲಿಸೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.