ಕನ್ನಡಿಗರು ಒಗ್ಗೂಡುವುದಕ್ಕೆ ಕಾವ್ಯದಲ್ಲೇ ಕರೆ ಕೊಟ್ಟ ಯುಗದ ಕವಿ – ಏಕೀಕರಣದ ಕೂಗಿಗೆ ಹಾಡಿನ ರೂಪಕೊಟ್ಟವರು ದ.ರಾ ಬೇಂದ್ರೆ

ಕನ್ನಡಿಗರು ಒಗ್ಗೂಡುವುದಕ್ಕೆ ಕಾವ್ಯದಲ್ಲೇ ಕರೆ ಕೊಟ್ಟ ಯುಗದ ಕವಿ – ಏಕೀಕರಣದ ಕೂಗಿಗೆ ಹಾಡಿನ ರೂಪಕೊಟ್ಟವರು ದ.ರಾ ಬೇಂದ್ರೆ

ಒಂದೇ ಒಂದೇ ಒಂದೇ ಕರ್ನಾಟಕ ಒಂದೇ

ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ

ಹಿಂದೆ ಮುಂದೆ ಎಂದೆ ಕರ್ನಾಟಕ ಒಂದೇ

ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೆ

ಒಂದೇ.. ಕನ್ನಡ ಎಂಬ ಮೂಲಕ ಕನ್ನಡಿಗರು ಒಗ್ಗೂಡುವುದಕ್ಕೆ ಕಾವ್ಯದಲ್ಲೇ ಕರೆ ಕೊಟ್ಟು, ಏಕೀಕರಣದ ಕೂಗಿದೆ ಹಾಡಿನ ರೂಪಕೊಟ್ಟವರು ಯುಗದ ಕವಿ.. ಜಗದ ಕವಿ.. ಬೇಂದ್ರೆ.. ಬೆಂದರೆ ಬೇಂದ್ರೆ ಎಂಬ ರೀತಿಯಲ್ಲಿ ಬಾಳಿ ಬದುಕಿದವರು ಅಂಬಿಕಾತನಯದತ್ತ.. ಕನ್ನಡದ ವಿಚಾರದಲ್ಲಿ ಅವರದ್ದು ಅದ್ಯಮ ವಿಶ್ವಾಸ.. ಗಡಿರೇಖೆಗಳಾಚೆಗೂ ವಿಸ್ತರಿಸಿ ನೋಡುವುದು ಶ್ರೇಷ್ಠ ಕವಿಗಳ ಸತ್ವ. ಅದೇ ಸತ್ವ ಬೇಂದ್ರೆಯವರ ತತ್ವವೂ ಆಗಿತ್ತು. ಹಾಗಿದ್ದರೂ ಭಾಷೆಗೊಂದು ಬೆಸೆಯುವ, ಭೌಗೋಳಿಕವಾಗಿ ಸಾಂಸ್ಕೃತಿಕವಾಗಿ ಒಗ್ಗೂಡುವ ಗುಣವಿರುತ್ತದೆ.. ಅದಕ್ಕಾಗಿಯೇ ಬೇಂದ್ರೆ ಒಂದೇ ಕರ್ನಾಟಕ ಎಂದು ಸಾರುತ್ತಾರೆ..

ಇದನ್ನೂ ಓದಿ: ಕನ್ನಡ ಪದಗಳನ್ನು ಹಾಡುತ್ತ ಕನ್ನಡವನ್ನು ಮೆರೆಸಿದ ಸಾಹಿತಿ ಜಿ.ಪಿ ರಾಜರತ್ನಂ

ಕಾವ್ಯದಲ್ಲಿ ಕುಸುರಿತನ, ಭಾವ ಲಾಲಿತ್ಯ, ಬರವಣಿಗೆಯಲ್ಲಿ ದಿಟ್ಟತನ ತೋರಿದ ಬೇಂದ್ರೆಯವರ ಸಾಹಿತ್ಯ ಓದೋದೇ ಕನ್ನಡಿಗರಿಗೆ ಸಿಕ್ಕ ಬಹುದೊಡ್ಡ ವರದಾನ. ಜನವರಿ 31 1896ರಲ್ಲಿ ಧಾರವಾಡದಲ್ಲಿ ಜನಸಿದ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ಕನ್ನಡನಾಡಿನ ಶಾರದಾಪುತ್ರ. ನವಿರಾದ ಕವಿತೆಗಳನ್ನ ಬರೆದು ಸಾಹಿತ್ಯ ಪ್ರೇಮಿಗಳ ಎದೆಯಲ್ಲಿ ಅಚ್ಚೊತ್ತಿ ಕೂತವರು ಈ ಅಂಬಿಕಾತನಯದತ್ತ. ಬೇಂದ್ರೆ ಮಾಸ್ತರರ ಪೆನ್ನಿನ ತುದಿಯಲ್ಲಿ ಸದಾ ಸರಸ್ವತಿಯೇ ಕೂತಿದ್ದಳು. ಯಾಕೆಂದ್ರೆ, ಈ ಕಾವ್ಯ ಗಾರುಡಿಗ ಬರೆದ ಕವಿತೆಗಳು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳು ಅಪಾರವಾದುದು. ನಮ್ಮ ನಾಡಿಗೆ ಎರಡನೇ ಜ್ಞಾನಪೀಠ ದೊರಕಿಸಿಕೊಟ್ಟ ಕೀರ್ತಿಯೂ ಇವರಿಗೆ ಸಲ್ಲುತ್ತೆ.

ಆಳುವ ವ್ಯವಸ್ಥೆ ವಿರುದ್ಧ ಧಿಕ್ಕಾರ ಕೂಗಿದ್ದು ಕೂಡಾ ತಮ್ಮ ಕವಿತೆಗಳಿಂದಲೇ. ಸ್ವಾತಂತ್ರ್ಯದ ಹೋರಾಟದ ಸಂದರ್ಭದಲ್ಲಿ ನರಬಲಿ ಕವಿತೆ ಬರೆದ ಬೇಂದ್ರೆಯವರನ್ನು ಬ್ರಿಟಿಷ್ ಸರ್ಕಾರ ಜೈಲಿಗೂ ಹಾಕಿತ್ತು. ನರಬಲಿ ಕವಿತೆಯ ಮೂಲಕ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಲೇಬೇಕಾದ ಅನಿವಾರ್ಯತೆಯನ್ನು ಅಂದು ಅಂಬಿಕಾತನಯದತ್ತರು ಸಾರಿ ಹೇಳಿದ್ದರು.

ಬ್ರಿಟಿಶರು ಭಾರತವನ್ನು ಆಳುತ್ತಿದ್ದ ಕಾಲ. ತಮ್ಮ ಔದ್ಯೋಗಿಕ ಹಾಗು ಆರ್ಥಿಕ ಪ್ರಗತಿಗಾಗಿ ಬ್ರಿಟಿಶರು ಭಾರತೀಯರ ನೆತ್ತರನ್ನು ಹೀರಿದರು. ಯುದ್ಧಕಾಲದಲ್ಲಿ ಬ್ರಿಟಿಶ್ ಸೈನ್ಯಕ್ಕೆ ಆಹಾರ ಪೂರೈಸುವ ಸಲುವಾಗಿ, ಭಾರತದಲ್ಲಿ ಕೃತಕ ಆಹಾರ ಅಭಾವ ಸೃಷ್ಟಿಯಾಯಿತು. ಇದನ್ನೇ ಬೇಂದ್ರೆಯವರು ತಮ್ಮ ‘ತುತ್ತಿನ ಚೀಲ’ ಕವನದಲ್ಲಿ ಹೀಗೆ ಹೇಳಿದ್ದಾರೆ:

“ಕಿಕ್ಕಿರಿ ತುಂಬಿದೆ ಭೂಮಿಯ ಕಣಜ

ಕಕ್ಕಸ ಬಡುತಿದೆ ಬೊಕ್ಕಸದೊಡಲು

ಬಾಳಿಗಿಂತಲೂ ಕೂಳೇ ಮೇಲೊ?

ಬರಿದೊ ಬರಿದು ತೆರವೊ ತೆರವು

ಬಡವರ ಬಗ್ಗರ ತುತ್ತಿನ ಚೀಲಾ.”

ಭೂಮಿಯ ಮೇಲೆ ಎಲ್ಲಿಯೂ ಆಹಾರದ ಅಭಾವವಿಲ್ಲ ಎಂದು ಹೇಳುತ್ತಲೆ, ‘ಕಕ್ಕಸಬಡುತಿದೆ ಬೊಕ್ಕಸದೊಡಲು’ ಎಂದು  ಬೇಂದ್ರೆಯವರು ಬ್ರಿಟಿಶ್ ಸರಕಾರದ ನೀತಿಯನ್ನು ಎಷ್ಟು ಕಟುವಾಗಿ ಟೀಕಿಸಿದ್ದರು. ಮುಂದೆ ಬ್ರಿಟಿಷರ ವಿರುದ್ಧ ಹೇಗೆ ಸಮರ ಸಾರಬೇಕು ಎನ್ನುವುದನ್ನು ನರಬಲಿ ಕವನದ ಮೂಲಕ ಬೇಂದ್ರೆ ವಿವರಿಸಿದ್ದರು.

‘ಬಲಗಾಲ್ ಬುಡದಿಂ ಬಿಡುಗಡೆ ಬಿಡಿಸಲು

ನರಬಲಿಯೇ ಬೇಕು !

ಇದುವೆ ಕಾಳಿಯ ಪೂಜೆಯು ಶುದ್ಧ !

ಇದಕ್ಕೆ ಹುಂಬರು ಎಂಬರು ಯುದ್ಧ !’

ಬ್ರಿಟಿಶರ ತಾಮಸೀ ಶಕ್ತಿಯನ್ನು ಬೇಂದ್ರೆಯವರು ರುದ್ರಕಾಳಿಗೆ ಹೋಲಿಸಿ ರಚಿಸಿದ ಕವನ ‘ನರಬಲಿ’. ಈ ರುದ್ರಕಾಳಿಯ ಬಲಗಾಲಿನ ಬುಡದಲ್ಲಿ ನಮ್ಮ ಬಿಡುಗಡೆಯು ಅಂದರೆ ಭಾರತೀಯರ ಸ್ವಾತಂತ್ರ್ಯವು ಸಿಕ್ಕು ನರಳುತ್ತಿದೆ. ಈ ತಾಮಸೀ ಶಕ್ತಿಗೆ ನಾವು ನರಬಲಿಯನ್ನು ಅಂದರೆ ನಮ್ಮ ಆತ್ಮಾಹುತಿಯನ್ನು ನೀಡಿದರೆ ಮಾತ್ರ, ನಮ್ಮ ಸ್ವಾತಂತ್ರ್ಯವನ್ನು ನಾವು ಮರಳಿ ಪಡೆಯಲು ಸಾಧ್ಯ ಎದು ಕವಿ ಸಾರಿ ಹೇಳಿದ್ದರು. ಅಂದಹಾಗೆ  ‘ನರಬಲಿ’ ಕವಿತೆ ಬರೆದದ್ದಕ್ಕಾಗಿ ಬೇಂದ್ರೆಯವರಿಗೆ ೧೯೩೨ರಲ್ಲಿ  ಹಿಂಡಲಗಾ ಜೈಲಿಗೆ ಹಾಕಿದ್ದರು. ಅದಾದ ನಂತರ  ಮುಗದ ಎನ್ನುವ ಹಳ್ಳಿಯಲ್ಲಿ ಒಂದು ರೀತಿಯ ಗೃಹ ಬಂಧನದಲ್ಲಿ ಇಡಲಾಗಿತ್ತು.

ಬೇಂದ್ರೆಯವರು ಮುಗದದಲ್ಲಿ ಇದ್ದಾಗ, ‘ಮನೋಹರ ಗ್ರಂಥಮಾಲೆ’ಯ ಸ್ಥಾಪಕರಾದ ಜಿ.ಬಿ.ಜೋಶಿಯವರು ಪ್ರತಿ ದಿನ ೧೩ ಕಿಲೋಮೀಟರ ದೂರದ ಮುಗದಕ್ಕೆ ಸೈಕಲ್ ಹೊಡೆದುಕೊಂಡು ಹೋಗಿ ಊಟ ಕೊಟ್ಟು ಬರುತ್ತಿದ್ದರಂತೆ. ಆದ್ರೆ ಬ್ರಿಟಿಷರು ಬೇಂದ್ರೆಯವರನ್ನು ಜೈಲಿಗೆ ಹಾಕಿದ್ದು ಮಾತ್ರವಲ್ಲ.. ಆರು ವರ್ಷಗಳವರೆಗೆ ಬೇಂದ್ರೆಯವರಿಗೆ ಯಾರೂ ನೌಕರಿ ಕೊಡಬಾರದು ಎಂಬ ಆದೇಶ ಹೊರಡಿಸಿದ್ದರು. ಇದರಿಂದಾಗಿ ಬೇಂದ್ರೆಯವರು ತಮ್ಮ ಹೆಂಡತಿಮಕ್ಕಳನ್ನು ಬಂಧುಗಳ ಮನೆಗೆ, ಪರಾಶ್ರಯಕ್ಕೆ ಕಳುಹಿಸಿ, ತಾವು ಹಿಂಡಲಗಕ್ಕೆ ತೆರಳಿದ್ದರು. ಅದಕ್ಕೇ ಹೇಳುವುದು ‘ಬೆಂದರೆ ಅದು ಬೇಂದ್ರೆ’ ಎಂದು.. ಇಷ್ಟೆಲ್ಲಾ ತೊಂದರೆ ಅನುಭವಿಸಿದರೂ  ಯಾವ ಹಂಗಿಲ್ಲದೇ ಯಾರ ಮುಲಾಜಿಗೂ ಸಿಗದೆ ಅಂಜದೇ ಪದ್ಯ ಬರೆದವರು ಗಂಡು ಮೆಟ್ಟಿದ ನಾಡಿನ ಗಟ್ಟಿಗ ಅಂಬಿಕಾತನಯದತ್ತರು.

ಬೇಂದ್ರೆಯವರ ಕಾವ್ಯದಲ್ಲಿ ಪದಗಳೆಂದರೆ ಕೇವಲ ಕಾಲ್ಪನಿಕ ಚಿತ್ರಣವಲ್ಲ, ಜೀವನಾನುಭವ ಸಾರುವ ಮಾಧ್ಯಮವಾಗಿತ್ತು. ಕನ್ನಡವು ಕನ್ನಡವ ಕನ್ನಡಿಸುತಿರಬೇಕು ಅನ್ನೋ ಬೇಂದ್ರೆಯವರ ಕವಿವಾಣಿ ಕನ್ನಡದ ಅಸ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿತ್ತು. ದ.ರಾ ಬೇಂದ್ರೆ ಜೊತೆ ಶಂಭಾ ಜೋಶಿ, ಬೆಟಗೇರಿ ಕೃಷ್ಣಶರ್ಮ ಸೇರಿ ಕರ್ನಾಟಕದ ಏಕೀಕರಣಕ್ಕಾಗಿ ಬಹಳ ಶ್ರಮಿಸಿದ್ದರು. ಧಾರವಾಡ ಮತ್ತು ಬೆಳಗಾವಿ ಮರಾಠಿಮಯವಾಗಿದ್ದವು. ಉತ್ತರಕರ್ನಾಟಕದಲ್ಲಿ ಬೇಂದ್ರೆಯವರಂಥಾ ಸಾಹಿತಿಗಳು ಈ ಜಿಲ್ಲೆಗಳಲ್ಲಿ ಕನ್ನಡವನ್ನ ಉಳಿಸಿ ಬೆಳೆಸಲು ಸಾಕಷ್ಟು ಶ್ರಮಿಸಿದ್ದರು. ಅದ್ರಲ್ಲೂ ಬೇಂದ್ರೆಯವರು ಕನ್ನಡ ಭಾಷೆಯನ್ನ ಈ ಭಾಗಗಳಲ್ಲಿ ಹದಗೊಳಿಸಲು ಸಾಹಿತ್ಯಕೃಷಿಯಲ್ಲಿ ತಮ್ಮನ್ನ ತೊಡಗಿಸಿಕೊಂಡರು. ಬೇಂದ್ರೆಯವರು ಕನ್ನಡ ಸಾಹಿತ್ಯದಲ್ಲೂ ಐಕ್ಯತೆ ಮೂಡಿಸಿದ್ದರು. ಅದರಲ್ಲೂ ಕರ್ನಾಟಕ ಏಕೀಕರಣ ಭೌಗೋಳಿಕವಾಗಿ ಹರಿದ ಭೂಪಟ ಜೋಡಿಸುವ ಕೆಲಸವಲ್ಲ. ಅದರ ಬದಲಾಗಿ ಸಾಂಸ್ಕೃತಿಕವಾಗಿ ಒಗ್ಗೂಡಿಸಬೇಕು ಅನ್ನೋ ಮಹಾದಾಸೆ ಬೇಂದ್ರೆಯವರಿಗಿತ್ತು. ವೈವಿಧ್ಯತೆಯೇ ಕನ್ನಡಿಗರ ಮೂಲ ಶಕ್ತಿ ಎನ್ನುವ ಬೇಂದ್ರೆ ಕನ್ನಡನಾಡನ್ನೂ ಕೂಡಾ ಸಾಮರಸ್ಯದ ಕೂಟವೆಂದೇ ಭಾವಿಸಿದ್ದರು. ಬೇಂದ್ರೆಯವರ ‘ಒಂದೇ ಕರ್ನಾಟಕ’ ಎಂಬ ಕವಿತೆಯ ಮೂಲಕ ಏಕೀಕರಣದ ಮಹತ್ವವನ್ನು ವಿವರಿಸುತ್ತಲೇ ಒಳಗಿರುವ ಮತೀಯ ಕಲಹಗಳನ್ನು ದೂರ ಮಾಡುವ ಆಶಾವಾದ ವ್ಯಕ್ತಪಡಿಸಿದ್ದರು. ಇದು ಪ್ರಕಟವಾದದ್ದು 1951ರಲ್ಲಿ. ಕರ್ನಾಟಕ ಏಕೀಕರಣ ಚಳುವಳಿಯ ಭಾವೋತ್ಕರ್ಷದ ಕಾಲವದು. ಏಕೀಕರಣ ಚಳುವಳಿಯ ಮೂಲಕ ಕರ್ನಾಟಕತ್ವ ಪಡೆಯುತ್ತಿದ್ದ ಮತೀಯ ಆಯಾಮವನ್ನು ನಿರಾಕರಿಸುವ ಪದ್ಯವಿದು.

ಇಲ್ಲಿಯ ಜನ-ಮನ-ಭಾಷೆಯು ಕನ್ನಡವದು ಒಂದೇ

ಒಂದೇ ಜನವೂ ಒಂದೇ ಮನವೂ ಕನ್ನಡಿಗರು ಎಂದೇ

ಕುಲವೊಂದೇ ಸ್ಥಲವೊಂದೇ ನೀತಿಯನೆಲೆಯೊಂದೇ

ಹೀಗೆನ್ನದ ಹೆರವರು ಅವರಿದ್ದರೂ ಒಂದೇ

ಇರದಿದ್ದರೂ ಒಂದೇ

ಒಂದೇ ಒಂದೇ ಒಂದೇ ಕರ್ನಾಟಕವೊಂದೇ

ಹೀಗೆ ಹೇಳುತ್ತಲೇ ಕನ್ನಡಿಗರು ಒಗ್ಗೂಡುವುದರಿಂದ ಕೇವಲ ಕರ್ನಾಟಕ ಮಾತ್ರವಲ್ಲ.. ಜಗದ ಏಳಿಗೆಯಾಗುವುದಿದೆ ಎನ್ನುವ ವಿಶ್ವಾಸ ಬೇಂದ್ರೆಯವರದ್ದಾಗಿತ್ತು. ಅದೇ ಕಾರಣಕ್ಕೆ “ಒಂದೇ ಒಂದೇ ಒಂದೇ ಕರ್ನಾಟಕವೊಂದೇ , ಜಗದೇಳಿಗೆಯಾಗುವುದಿದೆ ಕರ್ನಾಟಕದಿಂದೇ” ಎನ್ನುತ್ತಾರೆ. ಕನ್ನಡತನದ ಗುರುತು ಭಾರತೀಯತ್ವಕ್ಕೆ , ಜಗತ್ತಿಗೆ ಅಪಾಯಕಾರಿಯಲ್ಲ ಅನ್ನೋದು ಕವಿಯ ಆಶಯವಾಗಿತ್ತು.

ನಾಲ್ಕು ತಂತಿಯನ್ನು ಮೀಟಿದ ಕವಿ ಅದಕ್ಕಾಗಿ ಜ್ಞಾನಪೀಠ ಪಡೆದರು.. ಅನುಭವದ ಆಧಾರದಿಂದಲೇ ಕಾವ್ಯ ರಚಿಸುತ್ತಾ ಸಾಗಿದ ಬೇಂದ್ರೆ ಅನುಭಾವದ ಮೂಲಕ ಕನ್ನಡದಲ್ಲೊಂದು ಗಟ್ಟಿಯಾದ ಸೃಜನಶೀಲ ಸಾಹಿತ್ಯ ಬೆಳವಣಿಗೆಯ ಬೀಜ ಬಿತ್ತಿದ್ದರು. ಅಂಬಿಕಾತನಯದತ್ತರು ಬಿತ್ತಿದ ಕಾವ್ಯ ಕೃಷಿ ಕನ್ನಡ ಸಾಹಿತ್ಯಲೋಕದಲ್ಲೀಗ ಹೂ, ಹಣ್ಣು ನೀಡುತ್ತಿವೆ. ದ.ರಾ ಬೇಂದ್ರೆ, ಇಂದಿಗೂ, ಎಂದೆಂದಿಗೂ ಕನ್ನಡಿಗರ ಹೃದಯದಲ್ಲಿ ಸಾಹಿತ್ಯಪ್ರೇಮಿಗಳಲ್ಲಿ ಅಜರಾಮರ.

Sulekha