RCB ಬಾಯ್.. 13 ಬಾಲ್​.. 44 ರನ್ – ಮೈಸೂರು ಹುಡುಗ್ರಿಗೆ ಮಹಾರಾಜ ಪಟ್ಟ
ಯಾರ ಮೇಲೆ IPL ಫ್ರಾಂಚೈಸಿಗಳ ಕಣ್ಣು?

RCB ಬಾಯ್.. 13 ಬಾಲ್​.. 44 ರನ್ – ಮೈಸೂರು ಹುಡುಗ್ರಿಗೆ ಮಹಾರಾಜ ಪಟ್ಟಯಾರ ಮೇಲೆ IPL ಫ್ರಾಂಚೈಸಿಗಳ ಕಣ್ಣು?

ಐಪಿಎಲ್ ಹರಾಜಿಗೂ ಮುನ್ನವೇ ಬಾರೀ ಕುತೂಹಲ ಮೂಡಿಸಿದ್ದ ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿ ಫಿನಾಲೆಯಲ್ಲಿ ಮೈಸೂರು ವಾರಿಯರ್ಸ್ ತಂಡ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿದೆ. ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದೆ. ಮೂರನೇ ಆವೃತ್ತಿಯ ಈ ಟೂರ್ನಿ ಸಾಕಷ್ಟು ವಿಚಾರಗಳಿಂದ ಸದ್ದು ಮಾಡಿತ್ತು. ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ಕೂಡ ಕಣ್ಣಿಟ್ಟಿದ್ರು. ಇದೇ ಕಾರಣಕ್ಕೋ ಏನೂ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಬೆಂಚ್ ಗೆ ಸೀಮಿತವಾದವ್ರು, ಅವಕಾಶ ಸಿಗದೆ ಸೈಡ್​ಲೈನ್ ಆದ ಕೆಲ ಆಟಗಾರರು ಮಹರಾಜ ಟ್ರೋಫಿಯಲ್ಲಿ ರಣಾರ್ಭಟ ತೋರಿಸಿದ್ದಾರೆ. ಲೆಜೆಂಡರಿ ಕ್ರಿಕೆಟಿಗರೇ ಬೆರಗಾಗುವಂತೆ ತಮ್ಮ ತಾಕತ್ತು ತೋರಿಸಿದ್ದಾರೆ. ಅಷ್ಟಕ್ಕೂ ಮಹಾರಾಜ ಟ್ರೋಫಿಯಲ್ಲಿ ಮಿಂಚಿದ ಪ್ಲೇಯರ್ಸ್ ಯಾರು? ಆರ್​ಸಿಬಿಯಲ್ಲಿ ಬೆಂಚ್ ಕಾದಿದ್ದ ಆಟಗಾರನ ಅಬ್ಬರ ಹೇಗಿತ್ತು? ಅತೀ ಹೆಚ್ಚು ರನ್ಸ್ ಹಾಗೂ ವಿಕೆಟ್ ಕಿತ್ತಿದ್ಯಾರು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಕೇಳಿ ಬರ್ತಿದೆ ವಿಚಿತ್ರ ಶಬ್ದ – ಅಪಾಯದಲ್ಲಿ ಸುನಿತಾ ವಿಲಿಯಮ್ಸ್‌?

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ನಡೆದ ಮಹಾರಾಜ ಟ್ರೋಫಿ ಟೂರ್ನಿಯ ಫಿನಾಲೆ ಮ್ಯಾಚ್ ಹತ್ತು ಹಲವು ದಾಖಲೆಗಳನ್ನ ಬರೆದಿದೆ. ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡದ ನಾಯಕ ಮಯಾಂಕ್ ಅಗರ್ವಾಲ್ ಮೊದಲು ಬೌಲಿಂಗ್ ಚೂಸ್ ಮಾಡ್ಕೊಂಡಿದ್ರು. ಮೊದಲು ಬ್ಯಾಟಿಂಗ್ ಮಾಡಿದ ಕರುಣ್ ನಾಯರ್ ನಾಯಕತ್ವದ ಮೈಸೂರು ತಂಡಕ್ಕೆ ಒಳ್ಳೆ ಓಪನಿಂಗ್ ಸಿಕ್ಕಿರಲಿಲ್ಲ. ಓಪನರ್ ಆಗಿ ಇನ್ನಿಂಗ್ಸ್ ಆರಂಭಿಸಿದ್ದ ಕಾರ್ತಿಕ್.ಸಿ 3 ರನ್​ಗಳಿಗೆ ವಿಕೆಟ್ ಒಪ್ಪಿಸಿದ್ರು. ನಂತರ ಕಾರ್ತಿಕ್ ಎಸ್​ಯು ಅವರಿಗೆ ಜೊತೆಯಾದ ನಾಯಕ ಕರುಣ್​ ಬಿರುಸಿನ ಜೊತೆಯಾಟವಾಡಿದರು. 2ನೇ ವಿಕೆಟ್​ಗೆ 81 ರನ್​ಗಳ ಜೊತೆಯಾಟ ಬಂತು. ಕರುಣ್ ನಾಯರ್ 45 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಿತ 66 ರನ್ ಪೇರಿಸಿದರು. ಮತ್ತು ಕಾರ್ತಿಕ್ 44 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್​ ಸಹಿತ 71 ರನ್ ಚಚ್ಚಿದರು. ಇನ್ನು ಮೈಸೂರು ಪರ ಅಚ್ಚರಿಯ ರೀತಿಯಲ್ಲಿ ಬ್ಯಾಟ್ ಬೀಸಿದ್ದು ನಮ್ಮ ಆರ್​ಸಿಬಿ ಹುಡುಗ ಮನೋಜ್ ಬಾಂಡಗೆ.

13 ಎಸೆತಗಳಲ್ಲಿ 44 ರನ್ ಚಚ್ಚಿದ ಮನೋಜ್ ಬಾಂಡಗೆ!

ಟ್ಯಾಲೆಂಟ್ ಅನ್ನೋದು ಎಲ್ಲರಲ್ಲೂ ಇರುತ್ತೆ. ಬಟ್ ಚಾನ್ಸ್ ಸಿಗ್ಬೇಕು ಅಷ್ಟೇ ಅನ್ನೋದಕ್ಕೆ ಮನೋಜ್ ಬಾಂಡಗೆ ಬೆಸ್ಟ್ ಎಕ್ಸಾಂಪಲ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಬೆಂಚ್​ಗೆ ಸೀಮಿತವಾಗಿದ್ದ ನಮ್ಮ ಕನ್ನಡದ ಹುಡುಗ ಮನೋಜ್ ಬಾಂಡಗೆ ಮಹಾರಾಜ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಘೀಳಿಟ್ಟಿದ್ದಾರೆ. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮನೋಜ್ ಭಾಂಡಗೆ ಕೇವಲ 13 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್ ಸಹಿತ ಅಜೇಯ 44 ರನ್ ಬಾರಿಸಿದರು. ಇವರ ಬ್ಯಾಟಿಂಗ್ ವೈಭವದಿಂದ ಮೈಸೂರು 4 ವಿಕೆಟ್ ನಷ್ಟಕ್ಕೆ 207 ರನ್​ಗಳ ಬೃಹತ್ ಮೊತ್ತ ಪೇರಿಸಿತು.

208 ರನ್ ಗಳ ಟಾರ್ಗೆಟ್.. 45 ರನ್ ಗಳಿಂದ ಸೋಲು!

ಮೈಸೂರು ವಾರಿಯರ್ಸ್ ನೀಡಿದ್ದ 208 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಬೆಂಗಳೂರು ತಂಡದ ಪರ ಎಲ್​ಆರ್ ಚೇತನ್ ಅರ್ಧಶತಕ ದಾಖಲಿಸಿದ್ದು ಬಿಟ್ಟರೆ ಬೇರೆ ಯಾರೂ ಕೂಡ ಉತ್ತಮ ಸಾಥ್ ನೀಡ್ಲಿಲ್ಲ. ಮಯಾಂಕ್ ಅಗರ್ವಾಲ್ 6, ಭುವನ್ ರಾಜು 1, ಶಿವಕುಮಾರ್ ರಕ್ಷಿತ್ 5, ಶುಭಾಂಗ್ ಹೆಗ್ಡೆ 5, ಸೂರಜ್ ಅಹುಜಾ 8 ರನ್ ಗಳಿಸಲಷ್ಟೆ ಶಕ್ತರಾದರು. ಕ್ರಾಂತಿಕುಮಾರ್ ಮಾತ್ರ 39 ರನ್ ಗಳಿಸಿದ್ರು. ಪರಿಣಾಮ 8 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಹಾಗಾಗಿ 45 ರನ್​​ಗಳಿಂದ ಮೈಸೂರು ಎದುರು ಬೆಂಗಳೂರು ಹುಡುದ್ರು ಸೋಲೊಪ್ಪಿಕೊಂಡ್ರು.

ಐಪಿಎಲ್ ಮಾಲೀಕರ ಚಿತ್ತ ಕದ್ದ ಮಹಾರಾಜ ಪ್ಲೇಯರ್ಸ್

ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಪ್ಲೇಯರ್ಸ್ ಪ್ರದರ್ಶನಕ್ಕೆ ಐಪಿಎಲ್ ಫ್ರಾಂಚೈಸಿ ಓನರ್​ಗಳೂ ಕೂಡ ಶಾಕ್ ಆಗಿದ್ದಾರೆ. ಅದ್ರಲ್ಲೂ ಮೈಸೂರು ವಾರಿಯರ್ಸ್ ನಾಯಕ ಕರುಣ್ ನಾಯರ್ ಅಮೋಘ ಪ್ರದರ್ಶನ ನೀಡಿದ್ದಾರೆ. ಆಡಿದ 12 ಪಂದ್ಯಗಳಲ್ಲಿ 56ರ ಸರಾಸರಿಯಲ್ಲಿ 560 ರನ್‌ ಬಾರಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ ಐದು ಅರ್ಧಶತಕ ಸೇರಿವೆ. ಇವರ ಅಮೋಘ ಪ್ರದರ್ಶನ ನಿಜಕ್ಕೂ ಐಪಿಎಲ್ ಮಾಲೀಕರ ಚಿತ್ತ ಕದ್ದಿದೆ. ಈ ಬಾರಿಯ ಮಹಾರಾಜ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಒಟ್ಟು ಮೂವರು ಆಟಗಾರರು ಶತಕ ಬಾರಿಸಿದ್ದಾರೆ. ಮೈಸೂರು ವಾರಿಯರ್ಸ್‌ ತಂಡದ ನಾಯಕ ಕರುಣ್‌ ನಾಯರ್‌ ಮಂಗಳೂರು ಡ್ರಾಗನ್ಸ್‌ ವಿರುದ್ಧ ಅಜೇಯ 124 ರನ್‌ ಸಿಡಿಸಿದ್ದಾರೆ. ಇನ್ನು ಗುಲ್ಬರ್ಗ್ ಮಿಸ್ಟೆಕ್ಸ್ ತಂಡದ ಪರ ಆರ್‌ ಸ್ಮರಣ್‌, ಅಜೇಯ 104 ರನ್‌ಗಳ ಇನಿಂಗ್ಸ್‌ನ್ನು ಮೈಸೂರು ವಾರಿಯರ್ಸ್‌ ವಿರುದ್ಧ ಆಡಿದ್ದಾರೆ. ಹುಬ್ಬಳ್ಳಿ ಟೈಗರ್ಸ್ ಪರ ಕೆ.ಎಲ್ ಶ್ರೀಜೇತ್, ಗುಲ್ಬರ್ಗ ವಿರುದ್ಧ ಅಜೇಯ ಶತಕದ ಸಾಧನೆ ಮಾಡಿದ್ದಾರೆ. ಕನ್ನಡಿಗ ಮನೋಜ್ ಬಾಂಡಗೆ ಕೂಡ  12 ಪಂದ್ಯಗಳಲ್ಲಿ 292 ರನ್ ಗಳಿಸಿದ್ದಾರೆ. ಅದು ಕೂಡ 41ರ ಬ್ಯಾಟಿಂಗ್ ಸರಾಸರಿ ಮತ್ತು 213ರ ಸ್ಟ್ರೈಕ್​ರೇಟ್​​ನಲ್ಲಿ ಅಬ್ಬರಿಸಿದ್ದಾರೆ. ಈ ಆವೃತ್ತಿಯಲ್ಲಿ 16 ಬೌಂಡರಿ, 25 ಸಿಕ್ಸರ್​ ಸಿಡಿಸಿದ್ದಾರೆ. ಆದರೆ ಇಂತಹ ಆಟಗಾರನಿಗೆ ಆರ್​ಸಿಬಿ ಒಂದೇ ಒಂದು ಅವಕಾಶ ನೀಡಿರಲಿಲ್ಲ. ಎರಡು ಆವೃತ್ತಿಗಳಲ್ಲೂ ಬೆಂಚ್​ಗೆ ಸೀಮಿತಗೊಳಿಸಿದೆ.

ಇನ್ನು ಸ್ಟಾರ್ ಆಟಗಾರ ಅಭಿನವ್ ಮನೋಹರ್ ಪ್ರಸಕ್ತ ಮಹಾರಾಜ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ್ದಾರೆ. ಇವರು ಆಡಿದ 10 ಪಂದ್ಯಗಳಲ್ಲಿ 62 ಸಿಕ್ಸರ್ ಬಾರಿಸಿದ್ದಾರೆ. ಹಾಗೇ ದೇಶೀಯ ಬೌಲರ್‌ ಹುಡುಕಾಟದಲ್ಲಿರುವ ಐಪಿಎಲ್‌ ತಂಡಗಳಿಗೆ ಎಲ್‌ಆರ್‌ ಕುಮಾರ್ ಬೆಸ್ಟ್ ಚಾಯ್ಸ್ ಆಗಲಿದ್ದಾರೆ. ಆಡಿದ 9 ಪಂದ್ಯಗಳಲ್ಲಿ 17 ವಿಕೆಟ್‌ ಪಡೆದಿದ್ದಾರೆ. ಒಂದೇ ಪಂದ್ಯದಲ್ಲಿ ಮೂರು ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. ಬೆಂಗಳೂರು ತಂಡದ ಎಲ್‌ ಕುಶಾಲ್ ಹಾಗೂ ಗುಲ್ಬರ್ಗ ತಂಡದ ಎ ಪ್ರಭಾಕರ ಒಂದೇ ಪಂದ್ಯದಲ್ಲಿ ಐದು ವಿಕೆಟ್ ಪಡೆದು ಬೀಗಿದ್ದಾರೆ. ಒಟ್ನಲ್ಲಿ ಐಪಿಎಲ್​ನಲ್ಲಿ ಸೈಡ್​ಲೈನ್ ಆಗಿದ್ದ ಆಟಗಾರರು ಮಹಾರಾಜ ಟ್ರೋಫಿಯಲ್ಲಿ ತಮ್ಮ ಸಾಮರ್ಥ್ಯವನ್ನ ಪ್ರೂವ್ ಮಾಡಿದ್ದಾರೆ. ಸೋ ಇನ್ನಾದ್ರೂ ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ಕಳಪೆ ಪ್ರದರ್ಶನ ನೀಡಿದ್ರೂ ಸ್ಟಾರ್ ಪ್ಲೇಯರ್ಸ್ ಅಂತಾ ಪದೇಪದೆ ಚಾನ್ಸ್ ಕೊಡೋ ಬದಲು ನಮ್ಮ ದೇಶೀಯ ಆಟಗಾರರಿಗೆ ಮಣೆ ಹಾಕಬೇಕಿದೆ. ಅದ್ರಲ್ಲೂ ನಮ್ಮ ಬೆಂಗಳೂರು ಫ್ರಾಂಚೈಸಿಯೂ ಬುದ್ಧಿ ಕಲಿಯಬೇಕಿದೆ. ಕಳೆದ ಬಾರಿ ಮ್ಯಾಕ್ಸ್​ವೆಲ್ ಬ್ಯಾಕ್ ಟು ಬ್ಯಾಕ್ ಫೇಲ್ ಆದ್ರೂ ಅವಕಾಶ ಕೊಟ್ಟಿದ್ರು. ಸತತ 2 ವರ್ಷಗಳಿಂದ್ಲೂ ಮನೋಜ್ ಬಾಂಡಗೆಯನ್ನ ಬೆಂಚ್​ಗೆ ಸೀಮಿತ ಮಾಡಿದ್ರು. ಸೋ ಇನ್ನಾದ್ರೂ ಇಂಥಾ ಪ್ರತಿಭಾವಂತ ಆಟಗಾರರಿಗೆ ಐಪಿಎಲ್​ನಲ್ಲಿ ಹಾಗೇ ಟೀಂ ಇಂಡಿಯಾದಲ್ಲೂ ಚಾನ್ಸ್ ಸಿಗುವಂತಾಗ್ಲಿ.

Shwetha M

Leave a Reply

Your email address will not be published. Required fields are marked *