ಕಾಲೇಜ್‌ಗೆ ತೆರಳುತ್ತಿದ್ದ ಬಾಲಕಿ ಕಿಡ್ನ್ಯಾಪ್ ಯತ್ನ! – ಚೂರಿ ಇರಿತಕ್ಕೊಳಗಾದ್ರೂ ಬಾಲಕಿ ತಪ್ಪಿಸಿಕೊಂಡಿದ್ದು ಹೇಗೆ?

ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸಂತೆಕಟ್ಟೆಯಲ್ಲಿ ನಡೆದಿದೆ.
ಇದನ್ನೂ ಓದಿ: ಅಬಕಾರಿ ಇಲಾಖೆ ಹಗರಣ ಕೇಸ್! – ರಾಜೀನಾಮೆ ಒತ್ತಾಯದ ಬೆನ್ನಲ್ಲೇ ದೈವದ ಮೊರೆ ಹೋದ ಸಚಿವ ತಿಮ್ಮಾಪುರ!
ವಿದ್ಯಾರ್ಥಿನಿ ಮನೆಯಿಂದ ಕಾಲೇಜಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದಳು. ಸಂತೆಕಟ್ಟೆ ಬಳಿ ಬರುತ್ತಿದ್ದಂತೆ ಅಪರಿಚಿತರ ಗುಂಪೊಂದು ಆಕೆಯನ್ನು ಅಡ್ಡಗಟ್ಟಿ, ಸಿನಿಮೀಯ ಶೈಲಿಯಲ್ಲಿ ಅಪಹರಣಕ್ಕೆ ಯತ್ನಿಸಿದ್ದಾರೆ. ಬಲವಂತವಾಗಿ ಕಾರಿಗೆ ಎಳೆದು ಹಾಕಲು ಸಾಧ್ಯವಾಗದಿದ್ದಾಗ ವಿದ್ಯಾರ್ಥಿನಿಯ ಕೈಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಬಾಲಕಿ ಕಾಲೇಜಿಗೆ ಹೋಗುತ್ತಿದ್ದ ವೇಳೆ ಸಂತೆಕಟ್ಟೆ ಬಳಿ ಮುಖಕ್ಕೆ ಮಾಸ್ಕ್ ಧರಿಸಿ ದುಷ್ಕರ್ಮಿಗಳು ಇಕೋ (ECO) ಕಾರಿನಲ್ಲಿ ಬಂದ್ದಾರೆ. ಬಳಿಕ ಮೂವರು ದುಷ್ಕರ್ಮಿಗಳು ಬಾಲಕಿ ಸ್ಕೂಟಿಗೆ ಅಡ್ಡಲಾಗಿ ಕಾರು ನಿಲ್ಲಿಸಿದ್ದಾರೆ. ಏಕಾಏಕಿ ಕಾರಿನಿಂದ ಇಳಿದ ಮುಸುಕುಧಾರಿಗಳು, ಬಾಲಕಿಗೆ ಚೂರಿ ತೋರಿಸಿ ಬೆದರಿಸಿದ್ದಾರೆ. ಅಲ್ಲದೆ, ಆಕೆಯನ್ನು ಬಲವಂತವಾಗಿ ಎತ್ತಿಕೊಂಡು ಕಾರಿನೊಳಗೆ ಕೂರಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಧೈರ್ಯಗೆಡದ ವಿದ್ಯಾರ್ಥಿನಿ ಜೋರಾಗಿ ಕಿರುಚಾಡಿದ್ದಾರೆ. ಇದರಿಂದ ವಿಚಲಿತರಾದ ದುಷ್ಕರ್ಮಿಗಳು ಆಕೆಯ ಕೈಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾರೆ. ಇದೇ ವೇಳೆ ಮತ್ತೊಂದು ವಾಹನ ಬರುತ್ತಿದ್ದಂತೆ ದುಷ್ಕರ್ಮಿಗಳು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ಆ ರಸ್ತೆಯಲ್ಲಿ ಅಬ್ಬುಸಾಲಿ ಎಂಬುವರು ಆಗಮಿಸಿದ್ದಾರೆ. ಇದನ್ನು ಗಮನಿಸಿದ ಗಮನಿಸಿದ ದುಷ್ಕರ್ಮಿಗಳು ಸಿಕ್ಕಿಬೀಳುವ ಭಯದಿಂದ ಕಾರು ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ. ತಕ್ಷಣವೇ ಸ್ಪಂದಿಸಿದ ಅಬ್ಬುಸಾಲಿ ಅವರು, ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಮಯ ಪ್ರಜ್ಞೆ ಮೆರೆದ ಅಬ್ಬುಸಾಲಿ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ವಿಷಯ ತಿಳಿದ ತಕ್ಷಣ ಬೆಳ್ತಂಗಡಿ ಠಾಣಾ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗಿದ್ದು, ಹಲ್ಲೆಕೋರರು ಬಳಸಿದ ಇಕೋ ಕಾರಿನ ಪತ್ತೆಗೆ ಬಲೆ ಬೀಸಿದ್ದಾರೆ. ಆ ಭಾಗದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಇದು ಪೂರ್ವನಿಯೋಜಿತ ಕೃತ್ಯವೇ ಅಥವಾ ದರೋಡೆ ಉದ್ದೇಶವಿತ್ತೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.

ನೋಡಿರಿ

