ಬೆಳ್ಳುಳ್ಳಿ ಕಬಾಬ್ ಟ್ರೆಂಡೋ ಟ್ರೆಂಡ್  – ರಾಹುಲ್ ಗೆ ಕೋಟಿ ರೂಪಾಯಿ ಲಾಟರಿ!

ಬೆಳ್ಳುಳ್ಳಿ ಕಬಾಬ್ ಟ್ರೆಂಡೋ ಟ್ರೆಂಡ್  – ರಾಹುಲ್ ಗೆ ಕೋಟಿ ರೂಪಾಯಿ ಲಾಟರಿ!

ಚಿತ್ರಾನ್ನ, ಪಲಾವ್ ಮಾಡಿದ್ರೂ ಬೆಳ್ಳುಳ್ಳಿ ಬೇಕು.. ಚಿಕನ್, ಮಟನ್ ಗಂತೂ ಬೆಳ್ಳುಳ್ಳಿ ಇರ್ಲೇಬೇಕು. ಚಂದ್ರು ಹಾಗೂ ರಾಹುಲ್ಲಾ ಕಾಂಬಿನೇಷನ್​ನ ಬೆಳ್ಳುಳ್ಳಿ ಕಬಾಬ್ ವೈರಲ್ ಆದ್ಮೇಲಂತೂ ಎಲ್ರ ಮನೆಯಲ್ಲೂ ರೆಸಿಪಿ ಪ್ರಯೋಗ ಆಗ್ತಿದೆ. ಒನ್ ಮೋರ್ ಒನ್ ಮೋರ್ ಅಂತಾ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿದ್ದಾರೆ. ಇನ್ನೂ ಕೆಲವ್ರು ಬೆಳ್ಳುಳ್ಳಿ ರೇಟ್ ನೋಡಿ ರೆಸಿಪಿ ಪ್ರಯೋಗವನ್ನ ಪೋಸ್ಟ್ ಪೋನ್ ಮಾಡಿದ್ದಾರೆ. ಜನರಿಗೆ ಶಾಕ್ ಕೊಟ್ಟಿರೋ ಅದೇ ಬೆಳ್ಳುಳ್ಳಿ ರೈತರನ್ನ ಲಕ್ಷಾಧಿಪತಿ, ಕೋಟ್ಯಧಿಪತಿಗಳನ್ನಾಗಿ ಮಾಡಿದೆ.

ಕರ್ನಾಟಕದಲ್ಲಿ ಈಗ ಎಲ್ಲಿ ನೋಡಿದ್ರೂ ಟ್ರೆಂಡಿಂಗ್​ನಲ್ಲಿ ಇರೋದು ಎರಡೇ ವಿಚಾರ. ಅದ್ರಲ್ಲಿ ಒಂದು ಕರಿಮಣಿ ಮಾಲೀಕ.. ಇನ್ನೊಂದು ಬೆಳ್ಳುಳ್ಳಿ ಕಬಾಬ್.. ಹೋಟೆಲ್ ಮಾಲೀಕ ಚಂದ್ರು ಅವ್ರ ಬೆಳ್ಳುಳ್ಳಿ ಕಬಾಬ್ ರೆಸಿಪಿ ಹಾಗೂ ರಾಹುಲ್ಲಾ ಎನ್ನುವ ಅವ್ರ ಡೈಲಾಗ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಬಳಿಕ ರಾಜ್ಯದಲ್ಲಿ ಬೆಳ್ಳುಳ್ಳಿ ಕಬಾಬ್ ಕ್ರೇಜ್ ಶುರುವಾಗಿದೆ. ಜನ ಕೂಡ ಮನೆಗಳಲ್ಲಿ ಈ ರೆಸಿಪಿಯನ್ನ ಟ್ರೈ ಮಾಡ್ತಿದ್ದಾರೆ.

ಇದನ್ನೂ ಓದಿ: ವಿವಾದಗಳ ಸುಳಿಯಲ್ಲಿ ಡಿಬಾಸ್ – ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಕೇಸ್ ದಾಖಲು

ಒಂದ್ಕಡೆ ಜನ ಕಬಾಬ್ ಮೆಚ್ಚಿಕೊಂಡಿದ್ರೆ ಮತ್ತೊಂದ್ಕಡೆ ಬೆಳ್ಳುಳ್ಳಿ ಬೆಳೆದ ರೈತರಿಗೆ ಲಾಟರಿಯೇ ಹೊಡೆದಿದೆ. ಕಳೆದ ವರ್ಷ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಟೊಮ್ಯಾಟೋ ಬೆಳೆದು ಕೆಲ ರೈತರು ಕೋಟಿ ಕೋಟಿ ಆದಾಯ ನೋಡಿದ್ರು. ಇದೀಗ ಬೆಳ್ಳುಳ್ಳಿ ಬೆಳೆಗಾರರಿಗೂ ಬಂಪರ್ ಲಾಟರಿ ಹೊಡೆದಿದೆ. ಸದ್ಯ ಬೆಳ್ಳುಳ್ಳಿಗೆ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಬಂದಿದೆ. ಕೆಜಿಗೆ 400 ರೂಪಾಯಿಗೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಪರಿಣಾಮ ರೈತರಿಗೆ ಹೆಚ್ಚೆಚ್ಚು ಲಾಭ ಬರ್ತಿದೆ. ಕರ್ನಾಟಕದಲ್ಲಿ ಬೆಳ್ಳುಳ್ಳಿ ಕಬಾಬ್ ಮೂಲಕ ರಾಹುಲ್ಲಾ ಟ್ರೆಂಡಿಂಗ್ ನಲ್ಲಿದ್ರೆ ಮಧ್ಯಪ್ರದೇಶದಲ್ಲಿ ಬೆಳ್ಳುಳ್ಳಿ ಬೆಳೆದು ರೈತ ರಾಹುಲ್ ಸದ್ದು ಮಾಡ್ತಿದ್ದಾರೆ.

ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ ಬಾಮಹನವಾಡ ಎಂಬಲ್ಲಿನ ಯುವ ರೈತ ರಾಹುಲ್ ದೇಶ್​ಮುಖ್​ ಎಂಬವವರ 13 ಎಕರೆಯಲ್ಲಿ ಬೆಳ್ಳುಳ್ಳಿ ಬೆಳೆದಿದ್ದು, ಮೂರೇ ತಿಂಗಳಲ್ಲಿ ಕೋಟ್ಯಧೀಶರಾಗಿದ್ದಾರೆ. ದೇಶ್​ಮುಖ್ ತಮ್ಮ 13 ಎಕರೆ ಜಮೀನಿನಲ್ಲಿ ಬೆಳ್ಳುಳ್ಳಿ ಬೆಳೆಯಲು ನಿರ್ಧರಿಸಿದ್ದರು. ಆ ಸಂದರ್ಭದಲ್ಲಿ ಬಿತ್ತನೆ ಬೀಜಕ್ಕೆ ಕೆಜಿಗೆ ಸುಮಾರು 300 ರೂಪಾಯಿ ಇತ್ತು. ಸಾಲ ಮಾಡಿ ನಾಟಿ ಮಾಡಿದ್ದರು. ಭೂಮಿ ತಾಯಿಯನ್ನ ನಂಬಿ 13 ಎಕರೆಯಲ್ಲಿ ಬೆಳ್ಳುಳ್ಳಿ ಬಿತ್ತನೆ ಮಾಡಿದ್ದರು. ಬೆಳ್ಳುಳ್ಳಿ ಬೆಳೆ ಕೈಸೇರುವ ಹೊತ್ತಿಗೆ 3 ತಿಂಗಳಲ್ಲಿ ಬೀಜ, ಗೊಬ್ಬರ, ಕೂಲಿ ಎಲ್ಲಾ ಸೇರಿ ಸುಮಾರು 25 ಲಕ್ಷ ರೂಪಾಯಿ ಖರ್ಚು ಮಾಡಿದ್ದರು. ಅವರ ಅದೃಷ್ಟಕ್ಕೆ ಬೆಳ್ಳುಳ್ಳಿಯ ಬೆಲೆ ನಿರೀಕ್ಷೆಗಿಂತಲೂ ಹೆಚ್ಚಾಗಿದೆ. ಹೀಗಾಗಿ ಕೇವಲ ಮೂರು ತಿಂಗಳಲ್ಲಿ ಸುಮಾರು 1.5 ಕೋಟಿ ರೂಪಾಯಿಗೂ ಹೆಚ್ಚು ಆದಾಯ ಪಡೆದಿದ್ದಾರೆ.

ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಗೆ ಕೆಜಿಗೆ 400ರಿಂದ 500 ರೂಪಾಯಿವರೆಗೂ ಮಾರಾಟವಾಗುತ್ತಿದೆ. ದೇಶ್​ಮುಖ್​ಗೆ ಒಂದು ಎಕರೆಯಲ್ಲಿ ಸುಮಾರು 14 ರಿಂದ 16 ಕ್ವಿಂಟಲ್ ಬೆಳ್ಳುಳ್ಳಿ ಉತ್ಪಾದನೆಯಾಗಿದೆ. ಇದರಿಂದ ಎಕರೆಗೆ ಸುಮಾರು 7ರಿಂದ 8 ಲಕ್ಷ ರೂಪಾಯಿ ಲಾಭ ಕೈ ಸೇರಿದೆ. ವಿಶೇಷವೆಂದರೆ ಬೆಳೆಯನ್ನ ಕಳ್ಳರಿಂದ ರಕ್ಷಿಸಲು ಸಿಸಿಟಿವಿಯನ್ನು ಅಳವಡಿಸಿದ್ದಾರೆ. ಒಟ್ಟಾರೆ 13 ಎಕರೆ ಜಮೀನಿನಲ್ಲಿ ಪ್ರತಿ ಎಕರೆಗೆ 14ರಿಂದ 16 ಕ್ವಿಂಟಾಲ್ ಬೆಳ್ಳುಳ್ಳಿ ಬೆಳೆ ಕೈಗೆ ಸಿಕ್ಕಿದ್ದು, 1.5 ಕೋಟಿಗೂ ಹೆಚ್ಚು ಆದಾಯ ಕಂಡಿದ್ದಾರೆ. ಅಲ್ದೇ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳ್ಳುಳ್ಳಿ ಬೆಳೆದ ರೈತರು ಲಕ್ಷಾಧೀಶರಾಗಿದ್ದಾರೆ. ರೈತರಿಗೆ ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕರೆ ಅವರೂ ಕೂಡ ಕೋಟ್ಯಧಿಪತಿಗಳಾಗುತ್ತಾರೆ ಅನ್ನೋದನ್ನೇ ಈ ಘಟನೆಗಳೇ ಸಾಕ್ಷಿ.

Shwetha M