ರಾಹುಲ್ಲಾ.. ರುಬ್ಬಿಕೊಡಪ್ಪ.. ಅಲ್ಲಾಡ್ಸಪ್ಪಾ.. ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೂ ಟ್ರೆಂಡ್ – ಬೆಳ್ಳುಳ್ಳಿ ಕಬಾಬ್ ಚಂದ್ರು ಯಾರು?
ಈಗಂತೂ ಸೋಶಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು. ಬೆಳ್ಳುಳ್ಳಿ ಕಬಾಬ್.. ರಾಹುಲ್ಲಾ ಸ್ವಲ್ಪ ಬಾರಪ್ಪ ಅನ್ನೋ ಡೈಲಾಗ್ಗಳೇ ಟ್ರೆಂಡಿಂಗ್ನಲ್ಲಿವೆ. ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಬೆಳ್ಳುಳ್ಳಿ ಕಬಾಬ್ ರೀಲ್ಸ್ ಮಾಡ್ತಿದ್ದಾರೆ. ಅಷ್ಟಕ್ಕೂ ಬೆಳ್ಳುಳ್ಳಿ ಕಬಾಬ್ ಮೂಲಕವೇ ಫೇಮಸ್ ಆಗಿರೋ ಚಂದ್ರು ಯಾರು ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ..
ಸೋಶಿಯಲ್ ಮೀಡಿಯಾಗಳಲ್ಲಿ ಬೆಳ್ಳುಳ್ಳಿ ಕಬಾಬ್ ರೆಸಿಪಿ ಸಖತ್ ವೈರಲ್ ಆಗಿದೆ. ಅದರಲ್ಲೂ ಚಂದ್ರು ಅವರು ಅಡುಗೆ ಮಾಡುವಾಗ ಹೇಳುವ ‘ಒನ್ಸ್ ಮೋರ್ ಒನ್ಸ್ ಮೋರ್’, ‘ಸ್ವಲ್ಪ ರುಬ್ಬಿಕೊಡಪ್ಪ ರಾಹುಲ್ಲಾ’ ಡೈಲಾಗ್‌ಗಳಂತೂ ಸಿಕ್ಕಾಪಟ್ಟೆ ಫೇಮಸ್ ಆಗಿವೆ. ಅದೆಷ್ಟರ ಮಟ್ಟಿಗೆ ಅಂದ್ರೆ ಬೆಂಗಳೂರು ಬುಲ್ಸ್ ತಂಡದ ಕಬ್ಬಡ್ಡಿ ಆಟಗಾರರು ಕೂಡ ಚಂದ್ರು ಅವ್ರ ಡೈಲಾಗ್ಗಳನ್ನ ಹೇಳಿದ್ದಾರೆ. ಬೆಳ್ಳುಳ್ಳಿ ಕಬಾಬ್, ರಾಹುಲ್ಲಾ ರುಬ್ಬಿಕೊಡಪ್ಪಾ ರಾಜ, ಒನ್ ಮೋರ್ ಒನ್ ಮೋರ್ ಅನ್ಬೇಕು ಎಂದು ಬೆಂಗಳೂರು ಗೂಳಿಗಳು ಡೈಲಾಗ್ ಹೊಡೆದಿದ್ದಾರೆ. ಎಕ್ಸ್‌ನಲ್ಲಿ ಬೆಂಗಳೂರು ಬುಲ್ಸ್ ಅಧಿಕೃತ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು ಸದ್ಯ ಸಖತ್ ಸೌಂಡ್ ಮಾಡುತ್ತಿದೆ.
ಇದನ್ನೂ ಓದಿ: ಕುಮಾರಿ ಆಂಟಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್! – ಕೊನೆಗೂ ಅಂಗಡಿ ತೆರೆಸಿದ ಸಿಎಂ!
ಇನ್ನು ನಾನು ನಂದಿನಿ ಬೆಂಗಳೂರಿಗೆ ಬಂದಿನಿ ಖ್ಯಾತಿಯ ವಿಕಿಪೀಡಿಯಾ ಕೂಡ ರಾವುಲ್ಲಾನನ್ನ ನೆನೆಸಿಕೊಂಡಿದ್ದಾರೆ. ಕರಿಮಣಿ ಮಾಲೀಕ ನಾನಲ್ಲ ಅನ್ನೋ ಲಿರಿಕ್ಸ್ಗೆ ಕರಿಮಣಿ ಮಾಲೀಕ ರಾವುಲ್ಲಾ ಅಂತಾ ರೀಲ್ಸ್ ಮಾಡಿದ್ದಾರೆ. ಇದು ಕೂಡ ಭಾರೀ ವೈರಲ್ ಆಗ್ತಿದೆ.
ಅಷ್ಟಕ್ಕೂ ಬಾಣಸಿಗ ಹಾಗೂ ಹೋಟೆಲ್ ಮಾಲೀಕರಾಗಿರುವ ಚಂದ್ರು ಅವರು ಮಾತನಾಡುವ ಶೈಲಿಯೇ ವಿಭಿನ್ನವಾಗಿದೆ. ಜಗತ್ತಿಗೇ ಕೊರೊನಾ ಸೋಂಕು ಅಪ್ಪಳಿಸಿದ ಸಮಯಕ್ಕೆ ಕರ್ನಾಟಕ ಕೂಡ ಈ ಮಹಾಮಾರಿ ಹೊಡೆತಕ್ಕೆ ತತ್ತರಿಸಿತ್ತು. ಅದರಲ್ಲೂ ಕರ್ನಾಟಕದ ಹೋಟೆಲ್ ಉದ್ಯಮ ನಲುಗಿತ್ತು. ಹೀಗೆ ಚಂದ್ರು ಅವರು ಕೂಡ, ಕೊರೊನಾ ಬಂದಾಗ ಸಂಕಷ್ಟದ ದಿನಗಳ ಎದುರಿಸಿದ್ದರಂತೆ. ಆಗ ಕೆಲಸ ಮಾಡಲು ಅವರ ಹೊಸ ಹೋಟೆಲ್‌ಗೆ ನೌಕರರು ಸಿಗುತ್ತಿಲ್ಲ ಎಂಬ ಕೊರಗು ಕಾಡಿತ್ತಂತೆ. ಆದರೆ ಈ ಹುಡುಗ ರಾಹುಲ್ಲಾ, ಚಂದ್ರು ಅವರ ಜೊತೆಯಾಗಿ ನಿಂತಿದ್ದನಂತೆ. ಇದೇ ಕಾರಣಕ್ಕೆ ಕಳೆದ 2 ವರ್ಷ 6 ತಿಂಗಳಿಂದ ಇವನನ್ನ ತಮ್ಮ ರೈಟ್ ಹ್ಯಾಂಡ್ ರೀತಿ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.
ಅಷ್ಟಕ್ಕೂ ಈ ಚಂದ್ರು ಮೊದಲು ಸಿನಿಮಾರಂಗದಲ್ಲೇ ಕೆಲಸ ಮಾಡುತ್ತಿದ್ದವರು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಮೂಲತಃ ಮೇಕಪ್ ಮ್ಯಾನ್ ಆಗಿದ್ದ ಚಂದ್ರು, ನಟಿ ಮಾಲಾಶ್ರೀ ಅವರ ಜೊತೆಗೂ ಕೆಲಸ ಮಾಡಿಕೊಂಡಿದ್ದರು. ಅಣ್ಣಾವ್ರ ಕುಟುಂಬದ ಜೊತೆಗೆ ಉತ್ತಮ ಒಡನಾಟ ಹೊಂದಿರುವ ಚಂದ್ರು, ಸದ್ಯ ‘ಬೆಳ್ಳುಳ್ಳಿ ಕಬಾಬ್’ ಮೂಲಕ ವೈರಲ್ ಆಗಿದ್ದಾರೆ.
ಇತ್ತೀಚೆಗಷ್ಟೇ ಸ್ಟಾರ್ ಸುವರ್ಣ ವಾಹಿನಿಯ ‘ಬೊಂಬಾಟ್ ಭೋಜನ’ ಶೋಗೂ ಕೂಡ ಆಗಮಿಸಿದ್ದರು. ಅಲ್ಲಿ ತಮ್ಮ ಹಳೆಯ ದಿನಗಳ ಬಗ್ಗೆ ಮತ್ತು ಸಿನಿಮಾರಂಗದ ನಂಟಿನ ಬಗ್ಗೆ ಸಿಹಿ ಕಹಿ ಚಂದ್ರು ಅವರ ಬಳಿ ಮಾತನಾಡಿದ್ದಾರೆ. ನಾನು ಮೇಕಪ್ ಮ್ಯಾನ್ ಚಂದ್ರು ಎಂದು ಹೇಳಿಕೊಂಡಿದ್ದಾರೆ. ಹಾಗೇ ಅಣ್ಣಾವ್ರ ಮನೆಯ ನಂಟಿನ ಬಗ್ಗೆಯೂ ಮನಬಿಚ್ಚಿ ಮಾತನಾಡಿದ್ದಾರೆ. ಅಂಬರೀಷ್, ಶಿವಣ್ಣ, ಪುನೀತ್ ರಾಜ್ ಕುಮಾರ್ ಹೀಗೆ ಅನೇಕ ಸೆಲೆಬ್ರಿಟಿಗಳಿಗೆ ಚಂದ್ರು ಅವ್ರೇ ಅಡುಗೆ ಮಾಡಿಕೊಡ್ತಿದ್ರು. ನಂತರ ಅಡುಗೆ ವಿಚಾರಕ್ಕೆ ಸಖತ್ ಫೇಮಸ್ ಆದ ಅವರು ಸಿನಿಮಾ ಕೆಲಸ ಸಾಕು ಎನಿಸಿ, ಹೋಟೆಲ್ ಆರಂಭಿಸಿದರು. ಮೊದಲು ಶಿವಾನಂದ ಸರ್ಕಲ್ ಬಳಿಯ ಫುಟ್‌ಪಾತ್‌ನಲ್ಲಿ ಪುಟ್ಟದಾಗಿ ಒಂದು ಹೋಟೆಲ್ ಶುರು ಮಾಡಿದರು. ಅದೇ ಸರ್ಕಲ್‌ನಲ್ಲಿ ಈಗ ದೊಡ್ಡ ಫ್ಯಾಮಿಲಿ ರೆಸ್ಟೋರೆಂಟ್ ಕೂಡ ಆರಂಭಿಸಿದ್ದಾರೆ.
ಅಂದಹಾಗೆ, ಚಂದ್ರು ಮಾಡುವ ನಾನ್ ವೆಜ್ ಊಟವನ್ನು ಪುನೀತ್ ರಾಜ್‌ಕುಮಾರ್ ಅವರು ತುಂಬ ಇಷ್ಟಪಟ್ಟು ತಿಂತಿದ್ರು. ಒಮ್ಮೆ ಕಾಶ್ಮೀರದಲ್ಲಿ ಶೂಟಿಂಗ್‌ಗೆ ಹೋದಾಗ, ಅಲ್ಲಿ ಅಡುಗೆ ಮಾಡುವುದಕ್ಕೆ ಚಂದ್ರುಗೆ ಫೋನ್ ಮಾಡಿ, ರೆಸಿಪಿ ಕೇಳಿಕೊಂಡಿದ್ದರಂತೆ ಪುನೀತ್. ಆ ಆಡಿಯೋ ಕ್ಲಿಪ್ ಕೂಡ ಸಖತ್ ವೈರಲ್ ಆಗಿತ್ತು. ಒಟ್ನಲ್ಲಿ ಈಗಂತೂ ಬೆಳ್ಳುಳ್ಳಿ ಕಬಾಬ್, ರಾವುಲ್ಲಾ ಅಲ್ಲಾಡ್ಸಪ್ಪ ಡೈಲಾಗ್ ಸಿಕ್ಕಾಪಟ್ಟೆ ಟ್ರೆಂಡಿಂಗ್ನಲ್ಲಿವೆ. ಎಷ್ಟೋ ಜನ ಈ ರೆಸಿಪಿ ನೋಡಿದ ಮೇಲೆ ಮನೆಯಲ್ಲೂ ಬೆಳ್ಳುಳ್ಳಿ ಕಬಾಬ್ ಮಾಡಿಕೊಂಡು ಬಾಯಿ ಚಪ್ಪರಿಸ್ತಿದ್ದಾರೆ. ಇನ್ನೂ ಕೆಲವ್ರು ಬೆಳ್ಳುಳ್ಳಿ ಬೆಲೆ ಕೆಜಿಗೆ 500 ರೂಪಾಯಿ ಇದೆ. ಕಡಿಮೆ ಆದ್ಮೇಲೆ ಮಾಡೋಣ ಅಂತಾ ರೆಸಿಪಿನ ಪೋಸ್ಟ್ ಪೋನ್ ಮಾಡಿದ್ದಾರೆ.