ಮೊನ್ನೆ ಅಧಿಕಾರ ಸ್ವೀಕಾರ, ನಿನ್ನೆ ತಲೆದಂಡ, ಇಂದು ಆತ್ಮಹತ್ಯೆಗೆ ಯತ್ನ! – ಅಮಾನತು ಬೆನ್ನಲ್ಲೇ ಎಸ್ಪಿ ಪವನ್ ದುಡುಕಿನ ನಿರ್ಧಾರ

ಮೊನ್ನೆ ಅಧಿಕಾರ ಸ್ವೀಕಾರ, ನಿನ್ನೆ ತಲೆದಂಡ, ಇಂದು ಆತ್ಮಹತ್ಯೆಗೆ ಯತ್ನ! – ಅಮಾನತು ಬೆನ್ನಲ್ಲೇ ಎಸ್ಪಿ ಪವನ್ ದುಡುಕಿನ ನಿರ್ಧಾರ

ಬಳ್ಳಾರಿಯ ಬ್ಯಾನರ್‌ ಗಲಾಟೆ ರಾಜ್ಯದಾದ್ಯಂತ ಭಾರಿ ಸದ್ದು ಮಾಡಿದೆ. ಈ ಹಿಂಸಾಚಾರದ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದಡಿ ಎಸ್‌ಪಿ ಪವನ್‌ ನಿಜ್ಜೂರು ಅವರನ್ನ ಅಮಾನತು ಮಾಡಲಾಗಿತ್ತು. ಇದ್ರ ಬೆನ್ನಲ್ಲೇ ಎಸ್‌ಪಿ ಪವನ್‌ ನಿಜ್ಜೂರು ಅವರು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವಿಚಾರ ಬಯಲಾಗಿದೆ.

ಇದನ್ನೂ ಓದಿ:ಈ ಟೈಮ್‌ನಲ್ಲಿ ಇಂಥಾ ಮಾತು ಬೇಕಿತ್ತಾ? – ಅಶ್ವಿನಿ ಕೆಣಕಿದ ಗಿಲ್ಲಿಗೆ ಕಿಚ್ಚನ ಕ್ಲಾಸ್‌!

ವಾಲ್ಮೀಕಿ ಮಹರ್ಷಿ ಪ್ರತಿಮೆ ಪ್ರತಿಷ್ಠಾಪನೆ ವೇಳೆ ಎಸ್‌ಪಿ ವೃತ್ತದ ಬಳಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ರಾಜಕೀಯ ಬಣಗಳ ನಡುವೆ ಭೀಕರ ಸಂಘರ್ಷ ಏರ್ಪಟ್ಟಿತ್ತು. ಈ ವೇಳೆ ನಡೆದ ಕಲ್ಲು ತೂರಾಟ ಹಾಗೂ ಹಿಂಸಾಚಾರದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿತ್ತು. ಈ ಸಂದರ್ಭದಲ್ಲಿ ಗುಂಡಿನ ದಾಳಿಯೂ ನಡೆದಿತ್ತು. ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಗಲಭೆಯನ್ನು ಹತೋಟಿಗೆ ತರುವಲ್ಲಿ ಜಿಲ್ಲಾ ಪೊಲೀಸ್ ಆಡಳಿತ ವಿಫಲವಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಬೆನ್ನಲ್ಲೇ  ಕರ್ತವ್ಯ ಲೋಪದ ಆರೋಪದ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರು (IPS-2016) ಅವರನ್ನ ಅಮಾನತು ಮಾಡಲಾಗಿತ್ತು. ಸರ್ಕಾರದ ದಿಢೀರ್ ಕ್ರಮದಿಂದ ತೀವ್ರ ಮನನೊಂದಿದ್ದ ಪವನ್ ತುಮಕೂರಿನ ತಮ್ಮ ನಿವಾಸದಲ್ಲಿ ಅತಿಯಾದ ಮಾತ್ರೆಗಳನ್ನು ಸೇವಿಸಿ ಆತ್ಮ*ಹತ್ಯೆಗೆ ಯತ್ನಿಸಿದ್ದು, ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ .

ದಾ ದಕ್ಷತೆಯಿಂದ ಕೆಲಸ ಮಾಡುತ್ತಿದ್ದ ಪವನ್ ನೆಜ್ಜೂರು ಅವರಿಗೆ ಸರ್ಕಾರದ ಈ ಅಮಾನತು ಆದೇಶ ದೊಡ್ಡ ಆಘಾತ ನೀಡಿತ್ತು ಎನ್ನಲಾಗಿದೆ. ಅಮಾನತು ಬೆನ್ನಲ್ಲೇ ತೀವ್ರ ಖಿನ್ನತೆಗೆ ಒಳಗಾಗಿದ್ದ ಅವರು, ಇಂದು ತುಮಕೂರು ನಿವಾಸದಲ್ಲಿದ್ದಾಗ ವಿಷಕಾರಿ ಮಾತ್ರೆಗಳನ್ನು ಸೇವಿಸಿದ್ದಾರೆ. ವಿಷಯ ತಿಳಿದ ತಕ್ಷಣ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಜನಾರ್ದನ ರೆಡ್ಡಿ ಅವರ ಮನೆ ಬಳಿ ನಡೆದ ಗುಂಡಿನ ದಾಳಿ ಪ್ರಕರಣದ ಬೆನ್ನಲ್ಲೇ ಎಸ್ಪಿಯ ಈ ನಡೆ ಪೊಲೀಸ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

Shwetha M