ಜನಾರ್ದನ ರೆಡ್ಡಿ ಮೇಲೆ ಗುಂಡು ಹಾರಿತು, ಪ್ಲ್ಯಾನ್ ಮಾಡಿ ಜಗಳ ಮಾಡಿದ್ದಾರೆ – ಮಾಜಿ ಸಚಿವ ಶ್ರೀರಾಮುಲು

ಜನಾರ್ದನ ರೆಡ್ಡಿ ಮೇಲೆ ಗುಂಡು ಹಾರಿತು, ಪ್ಲ್ಯಾನ್ ಮಾಡಿ ಜಗಳ ಮಾಡಿದ್ದಾರೆ – ಮಾಜಿ ಸಚಿವ ಶ್ರೀರಾಮುಲು

ರಾಜ್ಯದಲ್ಲಿ ಬಳ್ಳಾರಿಯಲ್ಲಿ ನಡೆದ ವಾಲ್ಮೀಕಿ ಬ್ಯಾನರ್ ಗಲಾಟೆ ದೊಡ್ಡ ಚರ್ಚೆಯನ್ನ ಹುಟ್ಟು ಹಾಕಿದ್ದು, ಈ ಬಗ್ಗೆ ಮಾಜಿ ಸಚಿವ ಬಿ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ.  ನಿನ್ನೆ ಆದ ಘಟನೆ ನಮ್ಮೆಲ್ಲರಿಗೂ ನೋವು ತರಿಸಿದೆ. ಏನು ನಡೆಯಬಾರದಿತ್ತೋ ಅದೆಲ್ಲಾ ನಡೆದು ಹೋಗಿದೆ. ಅಮಾಯಕ ರಾಜಶೇಖರ್ ಅನ್ನೋ ಯುವಕನ ಸಾವಾಗಿದೆ. ಮಗನ ಬಗ್ಗೆ ತಾಯಿ ಕನಸು ಕಟ್ಟಿಕೊಂಡಿದ್ದಳು. ಆ ಯುವಕ ಯಾವುದೇ ಪಾರ್ಟಿಗೆ ಸೇರಿರಲಿ. ಬಿಜೆಪಿ ಆಗಲಿ, ಕಾಂಗ್ರೆಸ್ ಆಗಲಿ. ಫೈರಿಂಗ್‌ನಲ್ಲಿ ರಾಜಶೇಖರ್ ಸಾವಾಗಿದೆ. ರಾಜಶೇಖರ್ ರೆಡ್ಡಿಗೆ ಸಂತಾಪ ಸೂಚಿಸುತ್ತೇನೆ. ಆ ಕುಟುಂಬಕ್ಕೆ ನೋವು ತಡೆಯುವ ಶಕ್ತಿ ಕೊಡಲೆಂದು ದೇವರಲ್ಲಿ ಪ್ರಾರ್ಥನೆ ಮಾಡ್ತೇನೆ ಎಂದು ಬೇಸರ ಹೊರಹಾಕಿದರು.

ಬ್ಯಾನರ್ ಕಟ್ಟೋದು ಬೇಡ ಅಂತ ಹೇಳಿಲ್ಲ. ಕಾರು ಹೋಗೋದಕ್ಕೆ ಜಾಗ ಬಿಟ್ಟು ಕಟ್ಟಲು ಹೇಳಲಾಗಿತ್ತು. ಜಗಳ ಮಾಡಲೇಬೇಕು ಎಂದು ಪ್ಲಾನ್ ಮಾಡಿಕೊಂಡು ಬಂದಿದ್ದಾರೆ. ಜನಾರ್ದನ ರೆಡ್ಡಿ ಬರುವಾಗ ಏಕಾಏಕಿ ಜಗಳ ಆಯ್ತು. ನಾನೂ ಬಂದೆ. ಜನಾರ್ದನ ರೆಡ್ಡಿ ಮೇಲೆ ಗುಂಡು ಹಾರಿತು. ಅಷ್ಟರೊಳಗೆ ಪೊಲೀಸರು ಬಂದು, ಚದುರಿಸಿದರು. ಆಗ ಗುಂಪು ಜಾಸ್ತಿ ಆಗಿ ಘೋಷಣೆಗಳು ಜಾಸ್ತಿ ಆದ್ವು. ಅದಕ್ಕೂ ಮೊದಲು ಸತೀಶ್ ರೆಡ್ಡಿ ಬಾಡಿಗಾರ್ಡ್‌ಗಳು ಸಿನಿಮಾದಲ್ಲಿ ಹೊಡೆದಂತೆ ಬುಲೆಟ್ ಫೈರ್ ಮಾಡಿದರು. ಬಳ್ಳಾರಿಯಲ್ಲಿ 1982ರಲ್ಲಿ ಮಾತ್ರ ಒಂದು ಘಟನೆ ನಡೆದಿತ್ತು. ಆ ರೀತಿಯ ಘಟನೆ ಮತ್ತೆ ಇದೀಗ ನಡೆದಿದೆ. ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಬ್ಯಾನರ್ ಕಟ್ಟಿ ಗಲಾಟೆ ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಫೈರಿಂಗ್ ಮಾಡಿದ್ದಾರೆ. ಫೈರಿಂಗ್ ಮಾಡೋದಕ್ಕೆ ಅವಕಾಶ ಯಾರು ಕೊಟ್ಟರು? ಮೇಲ್ನೋಟಕ್ಕೆ ಅವರಿಂದಲೇ ಫೈರಿಂಗ್ ಆಗಿರೋದು ಗೊತ್ತಾಗ್ತಿದೆ ಎಂದು ತಿಳಿಸಿದರು. ಮಳೆ ಸುರಿಸಿದಂತೆ ಕಲ್ಲು ಸುರಿಸಿದ್ದಾರೆ. ನಮ್ಮ ಕಾರ್ಯಕರ್ತರು, ಮುಖಂಡರು ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಪಿಜಿ, ಹಾಸ್ಟೆಲ್‌ಗಳ ವಿಚಾರದಲ್ಲಿ ಪಾಲಿಕೆ ಅಲರ್ಟ್ – ಮಾರ್ಗಸೂಚಿ ಪಾಲಿಸದಿದ್ದರೆ ಬೀಗ ಗ್ಯಾರಂಟಿ

ಈಗಾಗಲೇ ನಮ್ಮವರನ್ನ ಡಿಸ್ಚಾರ್ಜ್ ಮಾಡಿದ್ದಾರೆ. ಅವರು ಕಲ್ಲು ತೂರಾಟ ಮಾಡಿದಾಗ, ನಮ್ಮವರೂ ಕಲ್ಲು ತೂರಿದ್ದಾರೆ. ಅವರ ಗನ್‌ಮ್ಯಾನ್‌ಗಳೇ ಗುಂಡು ಹಾರಿಸಿದ್ದಾರೆ. ಸತೀಶ್ ರೆಡ್ಡಿ ಹಾಲಿ, ಮಾಜಿ ಶಾಸಕನೂ ಅಲ್ಲ. ಬಿಹಾರ ಮಾದರಿಯಲ್ಲಿ ಸತೀಶ್ ರೆಡ್ಡಿ ಗನ್ ಇಟ್ಕೊಂಡಿದ್ದಾನೆ. ಎಷ್ಟು ದೌರ್ಜನ್ಯ ಇವರದ್ದು? ಆ ರೀತಿ ಫೈರ್ ಮಾಡುತ್ತಾ ಹೋದ್ರೆ ಏನ್ ಮಾಡೋದಕ್ಕೆ ಆಗ್ತದೆ? ಹಾಗಾಗಿ ಕಾರ್ಯಕರ್ತರೆಲ್ಲರೂ ಒಂದೆಡೆ ಸೇರಿದ್ದಾರೆ. ಆದ್ರೂ ನಾವು ಶಾಂತಿ, ಕಾನೂನು ಸುವ್ಯವಸ್ಥೆ ಹಾಳಾಗಬಾರದು ಎಂದು ಹೇಳಿದ್ದೇವೆ. ಸತ್ಯವನ್ನು ಯಾರೂ ಮುಚ್ಚಿಡಲು ಆಗಲ್ಲ. ಕೆಟ್ಟ ಕೆಲಸ ಮಾಡಿದ ದಿನ ರಾಜಕಾರಣದಲ್ಲಿ ಇರೋದಿಲ್ಲ.

ಶಾಂತವಾಗಿರುವ ಊರಲ್ಲಿ ಈ ರೀತಿ ದೌರ್ಜನ್ಯ ಮಾಡಿ, ಫೈರಿಂಗ್ ಮಾಡೋದು ಅಂದ್ರೆ ಏನು? ಇದು ಪೋಲಿಸರಿಂದ ಆಗಿರೋ ಫೈರಿಂಗ್ ಅಲ್ಲ. ಖಾಸಗಿ ವ್ಯಕ್ತಿಯಿಂದ ಆಗಿರೋದು. ನಮ್ಮ ತಾಯಿ-ತಂದೆ ಅದನ್ನ ಕಲಿಸಿಲ್ಲ. ಧರ್ಮದ ಪರವಾಗಿ ನಾವಿರುವವರು. ಯಾರ ಗನ್‌ನಿಂದ ಯಾರು ಹಾರಿಸಿದ್ದಾರೆ ಅದನ್ನ ಪತ್ತೆ ಹಚ್ಚಲು ಹೇಳಿದ್ದೇನೆ. ನಮ್ಮ ಗನ್‌ಮ್ಯಾನ್ ಬಳಿಯ ಬುಲೆಟ್‌ಗಳನ್ನೂ ಲೆಕ್ಕ ಮಾಡಲಿ. ಕೂಡಲೇ ಎಫ್‌ಎಸ್‌ಎಲ್ ಕೊಡಿ ಎಂದು ಮನವಿ ಮಾಡಿದರು.

Kishor KV