ಬೆಳಗಾವಿಯ ಜೈನಮುನಿ ನಾಪತ್ತೆ ಕೇಸ್ ಗೆ ಬಿಗ್ ಟ್ವಿಸ್ಟ್ – ಹಣ ವಾಪಸ್ ಕೇಳಿದ್ದಕ್ಕೆ ಆಪ್ತರಿಂದಲೇ ಮರ್ಡರ್
ಜೈನಮುನಿಗಳಿಂದಲೇ ಲಕ್ಷಾಂತರ ರೂಪಾಯಿ ಹಣ ಪಡೆದು ಕೊನೆಗೆ ಅವರನ್ನೇ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿ ನಡೆದಿದೆ. ನಂದಿಪರ್ವತ ಆಶ್ರಮದ ಜೈನಮುನಿಗಳಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರನ್ನ ಹತ್ಯೆ ಮಾಡಲಾಗಿದೆ. ಆಶ್ರಮದಲ್ಲೇ ಜೈನಮುನಿಯವರನ್ನ ಕೊಲೆ ಮಾಡಿ, ಸಂಬಂಧಿಕರ ಗದ್ದೆಯಲ್ಲಿ ಶವ ಎಸೆದಿದ್ದಾರೆ.
ಇದನ್ನೂ ಓದಿ : ಅತ್ತೆ ಮನೆಯವರ ಕಿರುಕುಳ – ಆತ್ಮಹತ್ಯೆ ಮಾಡಿಕೊಂಡ ಅಳಿಯ!
ನಿತ್ಯ ಭಕ್ತರಿಂದ ತುಂಬಿರುತ್ತಿದ್ದ ಆಶ್ರಮ ಅವರ ಸಾವಿನ ಸುದ್ದಿಯಿಂದ ನೀರವ ಮೌನ ಆವರಿಸಿದೆ. ಭಕ್ತರು (Devotees) ಸ್ವಾಮೀಜಿಯನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಜುಲೈ 6ರಂದು ಹೀರೆಕುಡಿಯ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ನಂದಿ ಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದರು. ನಾಪತ್ತೆಯಾದ ಹಿನ್ನೆಲೆ ಭಕ್ತರು ಆಶ್ರಮದ ಸುತ್ತಮುತ್ತ ಸ್ವಾಮೀಜಿಗಾಗಿ ಹುಡುಕಾಡಿದ್ದು, ಎಲ್ಲಿಯೂ ಪತ್ತೆಯಾಗದ ಹಿನ್ನೆಲೆ ಚಿಕ್ಕೋಡಿ (Chikkodi) ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರು ಅನುಮಾನದ ಮೇಲೆ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.
ಮೂಲತಃ ಖಟಕಬಾವಿ ಗ್ರಾಮದವನೇ ಆಗಿದ್ದ ಪ್ರಮುಖ ಆರೋಪಿ, ಜೈನಮುನಿ ಜೊತೆ ಉತ್ತಮ ಒಡನಾಟ ಹೊಂದಿದ್ದು, ಜೈನಮುನಿಗಳ ವಿಶ್ವಾಸಗಳಿಸಿ ಹಿರೇಕೋಡಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದನಂತೆ. ಬಳಿಕ ಇದನ್ನೇ ಲಾಭ ಮಾಡಿಕೊಂಡು ಅವರ ಬಳಿ ಲಕ್ಷಾಂತರ ರೂಪಾಯಿ ಹಣವನ್ನ ಪಡೆದಿದ್ದಾನೆ. ಇದೇ ಹಣವನ್ನ ವಾಪಸ್ ಕೇಳಿದ್ದಕ್ಕೆ ಇದೀಗ ಜೈನಮುನಿಯನ್ನು ಕೊಲೆ ಮಾಡಿದ್ದಾನೆ. ಕೊಟ್ಟ ಹಣವನ್ನ ವಾಪಾಸ್ ಕೇಳಿದ ಕಾರಣಕ್ಕೆ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುವ ಪ್ರಮುಖ ಆರೋಪಿ, ಈ ಕೃತ್ಯಕ್ಕೆ ಚಿಕ್ಕೋಡಿ ಮೂಲದ ಯುವಕನ ಸಹಾಯವನ್ನ ಪಡೆದಿದ್ದನಂತೆ. ಆಶ್ರಮದಲ್ಲೇ ಜೈನಮುನಿಯವರನ್ನ ಕೊಂದು, ಸಂಬಂಧಿಕರ ಗದ್ದೆಯ ಕೊಳವೆಬಾವಿಯಲ್ಲಿ ಎಸೆದಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ. ಸದ್ಯ ಸ್ವಾಮೀಜಿಗಳ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.