ಮೋದಿ ಸೋಲಿಸುವ ಮುನ್ನ ತಮ್ಮೊಳಗಿನ ಅಸಮಾಧಾನ ಗೆಲ್ಲಬೇಕು – ಇಂಡಿಯಾ ಒಕ್ಕೂಟದ ಪಕ್ಷಗಳಲ್ಲಿ ಹಲವು ಸವಾಲು

ಮೋದಿ ಸೋಲಿಸುವ ಮುನ್ನ ತಮ್ಮೊಳಗಿನ ಅಸಮಾಧಾನ ಗೆಲ್ಲಬೇಕು – ಇಂಡಿಯಾ ಒಕ್ಕೂಟದ ಪಕ್ಷಗಳಲ್ಲಿ ಹಲವು ಸವಾಲು

ಲೋಕಸಭೆ ಗೆಲ್ಲಲು ಇಂಡಿಯಾ ಒಕ್ಕೂಟದ ಪಕ್ಷಗಳಿಗೆ ಹಲವು ಕ್ಷೇತ್ರಗಳನ್ನ ಬಿಟ್ಟುಕೊಡಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಕಾಂಗ್ರೆಸ್ ಏನೋ ಹೆಚ್ಚು ಸ್ಥಾನಗಳನ್ನ ಮೈತ್ರಿಕೂಟದ ಪಕ್ಷಗಳಿಗೇ ಬಿಟ್ಟುಕೊಡಲು ಮುಂದಾಗಿದೆ. ಆದ್ರೆ ಕ್ಷೇತ್ರ ಗೆಲ್ಲೋದು ಅಷ್ಟು ಸುಲಭವಾಗಿಲ್ಲ. ಯಾಕಂದ್ರೆ ದೊಡ್ಡ ದೊಡ್ಡ ನಾಯಕರು ತಾವೆಲ್ಲಾ ಒಂದೇ ಎಂದು ಹೇಳಿಕೊಂಡ್ರೂ ಅಂತಿಮವಾಗಿ ಪಕ್ಷ ಮತ್ತು ಅಭ್ಯರ್ಥಿ ಕೈ ಹಿಡಿಯೋದು ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು. ಸ್ಥಳೀಯ ಚುನಾವಣೆಗಳಲ್ಲಿ ಹಾವು ಮುಂಗುಸಿತಂತೆ ಇರುವ ಕಾರ್ಯಕರ್ತರು ಮೈತ್ರಿ ವಿಚಾರದಲ್ಲಿ ಒಗ್ಗಟ್ಟಾಗಿ ಕೆಲಸ ಮಾಡೋದು ಕಷ್ಟವಿದೆ. ಹಾಗೂ ರಾಷ್ಟ್ರ ಮಟ್ಟದ ನಾಯಕರಲ್ಲೂ ಹಲವು ಸವಾಲುಗಳಿವೆ.

ದೇಶದ ಉದ್ದಗಲಕ್ಕೂ ಇರುವ ಬಿಜೆಪಿ ವಿರೋಧಿ ಪ್ರಾದೇಶಿಕ ಪಕ್ಷಗಳ ನಾಯಕರು ತಮ್ಮ ತಮ್ಮ ರಾಜ್ಯಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಇದೀಗ ಕಾಂಗ್ರೆಸ್​ ಜೊತೆ ಸೇರಿದ್ರೂ ಒಗ್ಗಟ್ಟಾಗಿ ಮುನ್ನಡೆಯೋ ಸವಾಲು ಇದೆ. ಸೈದ್ಧಾಂತಿಕವಾಗಿ ಕೂಡಾ ಭಿನ್ನ ನಿಲುವುಗಳನ್ನು ಹೊಂದಿರುವ ಈ ಪಕ್ಷಗಳ ನಾಯಕರು ಈ ಹಿಂದೆ ಪರಸ್ಪರ ಕಚ್ಚಾಟದಿಂದ ಕೂಡಾ ದೇಶದ ಗಮನ ಸೆಳೆದಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಪ್ರಧಾನಿ ಮೋದಿ ವಿರುದ್ಧ ಮುಖಾಮುಖಿ ಆಗಬಲ್ಲ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಯಾರು ಅನ್ನೋದು ಇನ್ನೂ ನಿರ್ಧಾರವಾಗಿಲ್ಲ. ವಿಪಕ್ಷ ಒಕ್ಕೂಟದ ಏಕರೂಪ ಹೋರಾಟ ತಂತ್ರ, ಪ್ರಣಾಳಿಕೆ ರೂಪಿಸುವ ಹೊತ್ತಲ್ಲಿ ಪ್ರಸ್ತಾಪವಾಗುವ ವಿಚಾರಗಳಲ್ಲಿ ಒಮ್ಮತ ಮೂಡೋದು ಸುಲಭದ ಕೆಲಸವಲ್ಲ. ಅಂತಿಮವಾಗಿ ಚುನಾವಣೆಯಲ್ಲಿ ಟಿಕೆಟ್ ನೀಡುವಾಗ ಸೀಟ್ ಹಂಚಿಕೆ ಹೇಗೆ ಮಾಡುತ್ತಾರೆ ಅನ್ನೋದು ಅತಿ ದೊಡ್ಡ ಪ್ರಶ್ನೆ. ಏಕೆಂದರೆ, ದೇಶಾದ್ಯಂತ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ವಿರುದ್ಧ ವಿಪಕ್ಷ ಒಕ್ಕೂಟದ ಒಬ್ಬನೇ ಅಭ್ಯರ್ಥಿ ನಿಲ್ಲಿಸೋದು ಸುಲಭದ ನಿರ್ಧಾರವಲ್ಲ. ಅಲ್ಲದೆ ಪ್ರಾದೇಶಿಕವಾಗಿ ಮೈತ್ರಿಕೂಟದ ಪಕ್ಷಗಳ ಕಾರ್ಯಕರ್ತರೇ ತಮ್ಮ ಅಭ್ಯರ್ಥಿ ಪರ ನಿಲ್ಲುತ್ತಾರೆ ಎಂಬ ಯಾವ ನಂಬಿಕೆಯೂ ಇರಲ್ಲ.

ಇದೆಲ್ಲದರ ಹೊರತಾಗಿ ಕಾಂಗ್ರೆಸ್​ ಗೆ ಮೈತ್ರಿ ಕೂಟದಿಂದ ಲಾಭ ಇದೆಯೋ ಇಲ್ವೋ. ಆದ್ರೆ ನಷ್ಟವಂತೂ ಇದ್ದೇ ಇದೆ. ಯಾಕಂದ್ರೆ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಪ್ರಾದೇಶಿಕ ಪಕ್ಷಗಳ ನಾಯಕರನ್ನ ಕಣಕ್ಕಿಳಿಸೋದ್ರಿಂದ ಕಾಂಗ್ರೆಸ್​ನ ನಾಯಕರು ಸೈಡ್​ಲೈನ್ ಆಗ್ತಾರೆ. ಹಾಗೂ ಆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಕುಗ್ಗುತ್ತದೆ. ಜನರಿಗೂ ಕೂಡ ಕನೆಕ್ಟ್ ಆಗೋಕೆ ಸಾಧ್ಯವಾಗಲ್ಲ. ಕೇವಲ ಚುನಾವಣೆಗೆ ಮಾತ್ರವಲ್ಲದೆ ದೀರ್ಘ ಪರಿಣಾಮ ಬೀರುತ್ತದೆ. ಒಂದು ವೇಳೆ ಮೈತ್ರಿ ಅಭ್ಯರ್ಥಿ ಗೆದ್ದರೂ ಕೂಡ ಭಿನ್ನಾಭಿಪ್ರಾಯ ತಪ್ಪಿದ್ದಲ್ಲ. ಹೀಗಾಗಿ ಈ ಎಲ್ಲಾ ಸವಾಲುಗಳನ್ನ ವಿಪಕ್ಷಗಳ ಮೈತ್ರಿಕೂಟ ಹೇಗೆ ಮೆಟ್ಟಿ ನಿಲ್ಲುತ್ತೆ ಅನ್ನೋದೇ ಈಗಿರುವ ಪ್ರಶ್ನೆ.

Shantha Kumari