ನಿಷೇಧದ ವೇಳೆ ಪ್ರವಾಸಿ ತಾಣಗಳಿಗೆ ತೆರಳಿದರೆ ಹುಷಾರ್ – ನಿಮ್ಮ ವಿರುದ್ದ ದಾಖಲಾಗುತ್ತೆ ಕೇಸ್!
ಉಡುಪಿ: ಮಳೆಗಾಲದ ಹಿನ್ನೆಲೆ ರಾಜ್ಯದ ಹಲವು ಪ್ರವಾಸಿ ತಾಣಗಳಿಗೆ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಆದರೂ ಕೂಡ ಪ್ರವಾಸಿಗರು ಜಲಪಾತ ಬೀಚ್ ಪ್ರದೇಶಗಳಿಗೆ ತೆರಳಿ ಹುಚ್ಚಾಟ ಮೆರೆಯುತ್ತಿದ್ದಾರೆ. ಉಡುಪಿ ಜಿಲ್ಲೆಯ ಮಲ್ಪೆ ಕಡಲತೀರ ಸಹಿತ ಪ್ರವಾಸಿ ತಾಣ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ನಿರ್ಬಂಧ ಹೇರಲಾಗಿದ್ದರೂ ಈ ಭಾಗಕ್ಕೆ ಅನ್ಯಜಿಲ್ಲೆಯ ಪ್ರವಾಸಿಗರು ಬರುತ್ತಿದ್ದಾರೆ. ಹೀಗೆ ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸುವ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸುತ್ತಿದೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಜೋಡುಕೆರೆ ಕಂಬಳ! – ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಅರಮನೆ ಮೈದಾನ
ಕೊಲ್ಲೂರಿನಲ್ಲಿ ರೀಲ್ಸ್ ಮಾಡಲು ಹೋಗಿ ಯುವಕನೊಬ್ಬ ನೀರುಪಾಲಾದ ಘಟನೆ ಮಾಸುವ ಮುನ್ನವೇ ಮಲ್ಪೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಸಮುದ್ರದ ಅಲೆಗೆ ಸಿಲುಕಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಮಳೆಗಾಲ ಆದ ಕಾರಣ ಸೆಪ್ಟಂಬರ್ ವರೆಗೆ ಜಿಲ್ಲಾಡಳಿತ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಿದ್ದರೂ ಯಾರ ಗಮನಕ್ಕೂ ಬಾರದೆ ಒಳನುಸುಳಿ ಅವಾಂತರ ಮಾಡಿಕೊಳ್ಳುವಂತಹ ಘಟನೆಗಳು ನಡೆಯುತ್ತಿವೆ. ಈ ಹಿನ್ನೆಲೆ ಜಿಲ್ಲಾಡಳಿತ ಪ್ರಕರಣ ದಾಖಲಿಸುವ ನಿರ್ಧಾರಕ್ಕೆ ಬಂದಿದೆ.
ಪ್ರವಾಸಿ ತಾಣವಾದ ಮಲ್ಪೆಯಲ್ಲಿ ಐವರು ಲೈಫ್‌ಗಾರ್ಡ್ ಗಳಿದ್ದು, ಅನ್ಯ ಜಿಲ್ಲೆಯಿಂದ ಆಗಮಿಸುವವರಿಗೆ ಎಷ್ಟೇ ಸೂಚನೆ, ಎಚ್ಚರಿಕೆ ನೀಡಿದರೂ ನಿರ್ಲಕ್ಷಿಸಿ ಅಪಾಯ ತಂದುಕೊಳ್ಳುತ್ತಾರೆ. ಎಚ್ಚರಿಕೆ ಮಾತಿಗೆ ಸ್ಪಂದಿಸದಿರುವುದೇ ಅನಾಹುತಗಳಿಗೆ ಕಾರಣ ಎನ್ನಲಾಗುತ್ತಿದೆ. ಈ ಬೀಚ್ ನಿರ್ವಹಣೆ ಸಮಿತಿಯಿಂದ ಜಿಲ್ಲಾಡಳಿತಕ್ಕೆ ವಾರ್ಷಿಕ ಕೋಟ್ಯಂತರ ರೂ. ಆದಾಯವಿದ್ದರೂ ಮತ್ತಷ್ಟು ಭದ್ರತೆಗೆ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ.
ಪ್ರಸ್ತುತ ಮಲ್ಪೆ ಬೀಚ್‌ನಲ್ಲಿ ಐವರು ಜೀವರಕ್ಷಕರಿದ್ದಾರೆ. ಸಮುದ್ರದ ಆಳ, ಅಪಾಯಕಾರಿ ಸ್ಥಳ, ಅಪಾಯಕ್ಕೆ ಸಿಲುಕಿದವರನ್ನು ರಕ್ಷಿಸುವ ತಂತ್ರಗಾರಿಕೆ ಅವರಲ್ಲಿದ್ದರೂ ಅತ್ಯಾಧುನಿಕ ರಕ್ಷಣ ಸೌಕರ್ಯಗಳ ಕೊರತೆ ಇದೆ. ಪ್ರಸ್ತುತ ಅವರಲ್ಲಿರುವುದು ರೋಪ್, ಜಾಕೆಟ್ ಮತ್ತು ರಿಂಗ್ ಮಾತ್ರ. ಬೆಳಗ್ಗೆ 9ರಿಂದ ರಾತ್ರಿ 7ರ ವರೆಗೆ ಕಾರ್ಯ ನಿರ್ವಹಿಸುತ್ತಾರೆ. 4 ವರ್ಷಗಳಲ್ಲಿ ಮಲ್ಪೆ ಬೀಚ್‌ನಲ್ಲಿ ಸಮುದ್ರ ಪಾಲಾಗುತ್ತಿದ್ದ 180 ಮಂದಿ, ಸೈಂಟ್‌ಮೇರಿಸ್ ದ್ವೀಪದಲ್ಲಿ 65 ಮಂದಿ ಪ್ರವಾಸಿಗರನ್ನು ರಕ್ಷಿಸಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. .