ಜಾಯಿಂಟ್ ವ್ಹೀಲ್‌ನಲ್ಲಿ ಆಡುವ ಮುನ್ನ ಹುಷಾರು.. – ಚಕ್ರದಲ್ಲಿ ಸಿಲುಕಿಕೊಂಡ ಬಾಲಕಿಯ ಕೂದಲು!

ಜಾಯಿಂಟ್ ವ್ಹೀಲ್‌ನಲ್ಲಿ ಆಡುವ ಮುನ್ನ ಹುಷಾರು.. – ಚಕ್ರದಲ್ಲಿ ಸಿಲುಕಿಕೊಂಡ ಬಾಲಕಿಯ ಕೂದಲು!

ಜಾಯಿಂಟ್ ವ್ಹೀಲ್‌ನಲ್ಲಿ ಕುಳಿತು ಆಟವಾಡುವ ಮುನ್ನ ಎಚ್ಚರ. ಸ್ವಲ್ಪ ಯಾಮಾರಿದ್ರೂ ಜೀವಕ್ಕೆ ಕಂಟಕ ಎದುರಾಗೋ ಸಾಧ್ಯತೆ ಹೆಚ್ಚಾಗಿರುತ್ತೆ. ಇದಕ್ಕೆ ನಿದರ್ಶನವೆಂಬಂತೆ ಗುಜರಾತ್‌ನ ಹಳ್ಳಿಯೊಂದರ ಜಾತ್ರೆಯಲ್ಲಿ ನಡೆದ ಘಟನೆ. ಜಾಯಿಂಟ್ ವ್ಹೀಲ್‌ನಲ್ಲಿ ಕುಳಿತು ಆಟವಾಡಲು ಮುಂದಾದ ಹುಡುಗಿಯೊಬ್ಬಳ ತಲೆ ಕೂದಲು ಜಾಯಿಂಟ್ ವ್ಹೀಲ್‌ನ ಚಕ್ರಕ್ಕೆ ಸಿಲುಕಿಕೊಂಡಿದೆ. ಈ ಆಘಾತಕಾರಿ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಆಟೋಮೇಟೆಡ್ ಈ  ಮನೋರಂಜನಾ ಯಂತ್ರಗಳು ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸುತ್ತಿದೆ.

ದೇವಭೂಮಿ ದ್ವಾರಕಾದ ಖಂಭಲಿಯಾ ನಗರದಲ್ಲಿ ಈ ಘಟನೆ ನಡೆದಿದೆ.  ಗಣೇಶ ಹಬ್ಬದ ಅಂಗವಾಗಿ ಸ್ಥಳೀಯವಾಗಿ ಆಯೋಜಿಸಿದ್ದ ದೊಡ್ಡ ಸಮಾರಂಭದಲ್ಲಿ ಜನರಿಗೆ ಮನೋರಂಜನೆಗಾಗಿ ಈ ಜಾಯಿಂಟ್ ವ್ಹೀಲ್ ಬಂದಿತ್ತು. ಎಂಜಾಯ್ ಮಾಡುವುದಕ್ಕಾಗಿ ಈ ಜಾಯಿಂಟ್ ವ್ಹೀಲ್ ಏರಿದ ಹುಡುಗಿಯೊಬ್ಬಳು ಕೂದಲನ್ನು ಕಟ್ಟದೇ ಹಾಗೆ ಬಿಟ್ಟಿದ್ದಳು. ಈ ಕೂದಲು  ಜಾಯಿಂಟ್ ವ್ಹೀಲ್‌ನ ಚಕ್ರಕ್ಕೆ ಸಿಲುಕಿದ್ದು, ಕೂಡಲೇ ಹುಡುಗಿ ಜೋರಾಗಿ ಬೊಬ್ಬೆ ಹೊಡೆಯಲು ಶುರು ಮಾಡಿದ್ದಾಳೆ. ಹುಡುಗಿಯ ಬೊಬ್ಬೆ ಕೇಳಿ ಕೂಡಲೇ ಎರಡು ಸುತ್ತಿನ ನಂತರ ಜಾಯಿಂಟ್ ವ್ಹೀಲ್ ನಿಂತಿದೆ. ಕೂಡಲೇ ಜಾಯಿಂಟ್ ವ್ಹೀಲ್‌ನಲ್ಲಿದ್ದ ಇತರರನ್ನು ಕೆಳಗೆ ಇಳಿಸಿದ್ದಾರೆ. ಈ ಘಟನೆಯ ದೃಶ್ಯ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ್ರೆ ಸ್ಥಳದಲ್ಲೇ ಬೀಳುತ್ತೆ ದಂಡ! – ರಾಜ್ಯದ 6 ಹೆದ್ದಾರಿಗಳಲ್ಲಿ ಕ್ಯಾಮೆರಾ ಕಣ್ಗಾವಲು

ವೈರಲ್‌ ಆದ ವಿಡಿಯೋದಲ್ಲಿ, ಯುವಕರು ಜಾಯಿಂಟ್ ವ್ಹೀಲ್ ಮೇಲೇರಿ ಹುಡುಗಿಯ ಕೂದಲನ್ನು ಕತ್ತರಿಸುವ ಮೂಲಕ ಆಕೆಯನ್ನು ಅನಾಹುತದಿಂದ ಪಾರು ಮಾಡಿದ್ದಾರೆ. ಒಬ್ಬ ಯುವಕ ಹುಡುಗಿಯ ತಲೆ ಹಿಡಿದುಕೊಂಡಿದ್ದರೆ, ಮತ್ತೊರ್ವ ಚಾಕುವಿನಿಂದ ಕೂದಲನ್ನು ಕತ್ತರಿಸುವುದನ್ನು ಕಾಣಬಹುದು. ಈ ವೀಡಿಯೋ ನೋಡಿದ ಅನೇಕರು ಆಘಾತಗೊಂಡಿದ್ದು, ಇಂತಹ ಮನೋರಂಜನಾ ಉಪಕರಣಗಳಲ್ಲಿ ಕೂರುವ ಮೊದಲು ಜಾಗರೂಕರಾಗಿರಬೇಕು ಎಂದು ಹಲವರು ಸಲಹೆ ನೀಡಿದ್ದಾರೆ.

ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡಿದ್ದಾರೆ. ಇದು ತಮಾಷೆಯಂತೂ ಅಲ್ಲ, ಇದು ಯಾರ ಜೀವವನ್ನಾದರು ತೆಗೆಯಬಹುದು . ನಾನು ಕೂಡ ಕೆಲ ತಿಂಗಳ ಹಿಂದೆ ಇದೇ ಸ್ಥಿತಿಯಲ್ಲಿದ್ದೆ. ಈ ಜಾಲಿರೈಡ್ ತುಂಬಾ ಅಪಾಯಕಾರಿಯಾಗಿದ್ದು, ನನ್ನ ಕೂದಲು ಕೂಡ ಹೀಗೆ ಸಿಲುಕಿತ್ತು. ನಂತರ ಕೂದಲು ಕತ್ತರಿಸಿ ಅಲ್ಲಿಂದ ಬಿಡಿಸಲಾಯ್ತು ಎಂದು ಒಬ್ಬರು ತಮ್ಮ ಅನುಭವ ಹೇಳಿಕೊಂಡಿದ್ದಾರೆ.

ಇಂತಹ ರೈಡ್‌ಗಳು ಎಷ್ಟು ಸುರಕ್ಷಿತ ಎಂದು ಕೆಲವರು ಪ್ರಶ್ನೆ ಮಾಡಿದ್ದು,  ಕೂದಲನ್ನು ಕಟ್ಟದೇ ಬಿಟ್ಟು ಇಂತಹ ಮನೋರಂಜನಾ ಯಂತ್ರಗಳಲ್ಲಿ ಕುಳಿತುಕೊಳ್ಳಬಾರದು, ಅದು ಬಲು ಅಪಾಯಕಾರಿ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಹುಡುಗಿಯರು ಒಪನ್ ಹೇರ್ ಬಿಟ್ಟು ಶೋಕಿ ಮಾಡಲು ಹೋಗಿ ಅನಾಹುತವನ್ನು ಮೈಗೆ ಎಳೆದುಕೊಳ್ಳುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಇಂತಹ ಮನೋರಂಜನಾ ಆಟಗಳು ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸುತ್ತಿವೆ.

Shwetha M