ದೇಶದಲ್ಲಿ ಕೊರೊನಾ ಕರಿನೆರಳು – ಕರ್ನಾಟಕದಲ್ಲಿ ಹೈಅಲರ್ಟ್, KSRTC, BMTC ಬಸ್‌ಗಳಲ್ಲಿ ಮಾಸ್ಕ್ ಕಡ್ಡಾಯ!
ದೇಶದಲ್ಲಿ ಕೊರೊನಾ ಸೊಂಕು ವೇಗವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹೈಲರ್ಟ್ ಆಗಿದೆ. ಕೊರೊನಾ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ದೇಶದಲ್ಲಿ ಕೋವಿಡ್ -19 ಪ್ರಕರಣಗಳ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಕೋವಿಡ್ ರೋಗಿಗಳಿಗೆ ವಿಶೇಷ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲು ಆಸ್ಪತ್ರೆಗಳಿಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಹೆಚ್ಚಾಗುತ್ತಿದೆ ಕೊರೊನಾ ಆರ್ಭಟ – 9 ದಿನಗಳಲ್ಲಿ ಕೋವಿಡ್ ಪ್ರಕರಣ ದ್ವಿಗುಣ
ದೇಶದಲ್ಲಿನ ಕೊರೊನಾವೈರಸ್ ಪರಿಸ್ಥಿತಿಯನ್ನು ಪರಿಶೀಲಿಸಲು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ ಮನ್ಸುಖ್ ಮಾಂಡವಿಯಾ, ಜನರು ಜಾಗರೂಕರಾಗಿರಬೇಕು, ಆದರೆ ಭಯಪಡುವ ಅಗತ್ಯವಿಲ್ಲ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಚಳಿಗಾಲದ ಅವಧಿಯಲ್ಲಿ ಮತ್ತು ಮುಂಬರುವ ಹಬ್ಬದ ಋತುವಿನಲ್ಲಿ ಶೀತ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ತಡೆಗಟ್ಟುವ ಕ್ರಮಗಳನ್ನು ಖಚಿತಪಡಿಸಿಕೊಳ್ಳಲು ಸೂಚಿಸಿದರು.
ದೇಶದಲ್ಲಿ ಸುಮಾರು 2,300 ಕೊವಿಡ್ ಸಕ್ರಿಯ ಪ್ರಕರಣಗಳಿವೆ. ಕೊವಿಡ್ ರೂಪಾಂತರ ಜೆಎನ್.1ನಿಂದ ಸೋಂಕು ಏರಿಕೆಯಾಗಿದೆ ಸೋಂಕಿನ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಹೇಳಿದ್ದಾರೆ. ಕೇರಳ, ತಮಿಳುನಾಡು, ಗೋವಾ, ಕರ್ನಾಟಕದಲ್ಲಿ ಕೊವಿಡ್ ಪ್ರಕರಣಗಳಿವೆ. ದೇಶದ ವಿವಿಧೆಡೆ 2 ವಾರಗಳಲ್ಲಿ 16 ಜನ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕದಲ್ಲಿ ಕೋವಿಡ್‌ಗೆ ವ್ಯಕ್ತಿ ಬಲಿ!
ಕೊರೊನಾ ವೈರಸ್ನ ಜೆಎನ್ 1 ಕರ್ನಾಟಕದಲ್ಲೂ ಪತ್ತೆಯಾಗಿದೆ. ಕೋವಿಡ್ ಸೋಂಕಿನಿಂದಾಗಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಚಾಮರಾಜಪೇಟೆಯ 64 ವರ್ಷದ ನಿವಾಸಿಗೆ ಕೊರೊನಾ ಜೊತೆ ಅನ್ಯ ಕಾಯಿಲೆಗಳು ಕೂಡ ಇದ್ದವು. ಟಿಬಿ, ಬಿಪಿ ಸೇರಿದಂತೆ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ನಡುವೆ ಕೊರೊನಾ ಪಾಸಿಟಿವ್ ಕೂಡ ಆಗಿತ್ತು. ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು 5 ದಿನಗಳ ಹಿಂದೆಯಷ್ಟೇ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
ಇನ್ಮುಂದೆ KSRTC, BMTC ಬಸ್ಗಳಲ್ಲಿ ಮಾಸ್ಕ್ ಕಡ್ಡಾಯ
ರಾಜ್ಯದಲ್ಲಿ ಕೋವಿಡ್ ಭೀತಿ ಹಿನ್ನೆಲೆ ಸರ್ಕಾರದ ಮಾರ್ಗಸೂಚಿಯಂತೆ ಬಸ್‌ಗಳಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಕೇರಳದಿಂದ ಬರುವ ಹಾಗೂ ಹೋಗುವ ಬಸ್ಸುಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಸ್ಯಾನಿಟೈಸರ್ ಸಿಂಪಡಿಸಬೇಕು ಅಂತಾ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.