BCCI ಹಣ ಬೇಡ ಎಂದ ದ್ರಾವಿಡ್ – ಕನ್ನಡಿಗನ ನಿರ್ಧಾರಕ್ಕೆ ಜಗತ್ತೇ ಬೆರಗು
ರಾಹುಲ್​ಗೆ ರೋಹಿತ್ ಭಾವುಕ ಸಂದೇಶ   

BCCI ಹಣ ಬೇಡ ಎಂದ ದ್ರಾವಿಡ್ – ಕನ್ನಡಿಗನ ನಿರ್ಧಾರಕ್ಕೆ ಜಗತ್ತೇ ಬೆರಗುರಾಹುಲ್​ಗೆ ರೋಹಿತ್ ಭಾವುಕ ಸಂದೇಶ   

ರಾಹುಲ್ ದ್ರಾವಿಡ್. ಟೀಂ ಇಂಡಿಯಾ ಕಂಡ ಒಬ್ಬ ಶ್ರೇಷ್ಠ ಆಟಗಾರ. ಅದು ಆಟದಲ್ಲೇ ಆಗಲಿ, ವೈಯಕ್ತಿಕ ಜೀವನವೇ ಇರಲಿ. ಎಲ್ಲೂ ಕೂಡ ಒಂದೇ ಒಂದು ಸಣ್ಣ ಕಪ್ಪು ಚುಕ್ಕೆಯೂ ಇಲ್ಲದ ಲೆಜೆಂಡರಿ ಕ್ರಿಕೆಟರ್. ಯಾರೊಬ್ಬರ ಮೇಲೂ ಕೂಗಾಡಿದ್ದನ್ನ ಕಂಡಿಲ್ಲ. ದುರಹಂಕಾರದಿಂದ ವರ್ತಿಸಿದ್ದನ್ನ ಕಂಡಿಲ್ಲ. ಬಹುಶಃ ಇತ್ತೀಚೆಗೆ ಭಾರತ ಟಿ-20 ವಿಶ್ವಕಪ್ ಗೆದ್ದಾಗ ಕೈಮುಷ್ಠಿ ಮೇಲೆ ಮಾಡಿ ವಿಕ್ಟರಿ ಸೆಲೆಬ್ರೇಟ್ ಮಾಡಿದ್ದೇ ಅವ್ರ ಅಗ್ರೆಶನ್ ಅನ್ಸುತ್ತೆ. ಯಾಕಂದ್ರೆ ದ್ರಾವಿಡ್ ಅಷ್ಟೊಂದು ಸರಳ, ಸಜ್ಜನಿಕೆಯ ವ್ಯಕ್ತಿತ್ವ ಉಳ್ಳವರು. ಇದೇ ಕಾರಣಕ್ಕೆ ಭಾರತದಂತಹ ಬಲಿಷ್ಠ ತಂಡಕ್ಕೆ ಹೆಡ್​ಕೋಚ್ ಆಗಿ ನಾಲ್ಕು ವರ್ಷ ಕಳೆದ್ರೂ ಒಂದೇ ಒಂದು ಕಾಂಟ್ರವರ್ಸಿ ಮಾಡಿಕೊಳ್ಳಲಿಲ್ಲ. ನಿಜ ಹೇಳಬೇಕಂದ್ರೆ ಆಟಗಾರರನ್ನ ಯಾವತ್ತೂ ಅವ್ರು ಆಟಗಾರರ ಥರ ನೋಡ್ಲೇ ಇಲ್ಲ. ವೀ ಆರ್ ಈಕ್ವಲ್ ಎನ್ನುವಂತೆ ಸ್ನೇಹಿತರಂತೆಯೇ ಕಂಡಿದ್ರು. ಅದೇ ಪ್ರೀತಿ ಇಂದು ದ್ರಾವಿಡ್​​ರನ್ನ ದ್ರೋಣಾಚಾರ್ಯರ ಸ್ಥಾನಕ್ಕೆ ಕೊಂಡೊಯ್ದಿದೆ. ಅದೇನೋ ಹೇಳ್ತಾರಲ್ಲ ಇರೋ ಒಂದು ಹಾರ್ಟ್​ನ ಎಷ್ಟು ಸಲ ಅಂತಾ ಗೆಲ್ತೀಯಪ್ಪ ಅಂತಾ. ಈಗ ದ್ರಾವಿಡ್ ಅಂತಾದ್ದೇ ಮತ್ತೊಂದು ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಕೋಚ್ ಗಂಭೀರ್​ಗೆ 3 ಸವಾಲು – ದ್ರಾವಿಡ್​ ರೀತಿ ಪ್ಲೇಯರ್ಸ್ ಮನ ಗೆಲ್ತಾರಾ?

ಜನಮನ ಗೆದ್ದ ದ್ರಾವಿಡ್!

ಭಾರತ ಟಿ-20 ವಿಶ್ವಚಾಂಪಿಯನ್ ಆದ ಖುಷಿಯಲ್ಲಿ ಇಡೀ ಭಾರತವೇ ತೇಲಾಡಿದೆ. ಅದ್ರಲ್ಲೂ ಬಿಸಿಸಿಐ ಅದೇ ಜೋಶ್​ನಲ್ಲೇ ತಂಡಕ್ಕೆ ಭರ್ಜರಿ 125 ಕೋಟಿ ರೂಪಾಯಿ ಬಹುಮಾನ ಕೂಡ ಘೋಷಣೆ ಮಾಡಿತ್ತು.  ಅದ್ರಂತೆ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ ಮತ್ತು ತಂಡದ ಆಟಗಾರರಿಗೆ ತಲಾ 5 ಕೋಟಿ ರೂಪಾಯಿ ವಿತರಿಸಲು ಬಿಸಿಸಿಐ ಸಿದ್ಧವಾಗಿತ್ತು. ಹಾಗೇ ಸಹಾಯಕ ಕೋಚ್​ಗಳಿಗೆ ತಲಾ 2.5ಕೋಟಿ ರೂಪಾಯಿ ಘೋಷಣೆ ಮಾಡಿತ್ತು. ಆದರೆ ಇದೀಗ ಬಹುಮಾನದಲ್ಲೂ ಸಮಾನತೆಗೆ ಮುಂದಾಗಿರುವ ತಂಡದ ಪ್ರಧಾನಕೋಚ್ ರಾಹುಲ್ ದ್ರಾವಿಡ್ ತಮಗೆ 5 ಕೋಟಿ ರೂಪಾಯಿ ಬೇಡ.. ಸಹಾಯಕ ಕೋಚ್ ಗಳಿಗೆ ನೀಡಿದಂತೆ 2.5 ಕೋಟಿ ರೂ ಮಾತ್ರ ನೀಡಿ ಎಂದು ಹೇಳಿದ್ದಾರೆ. ಆ ಮೂಲಕ ಮತ್ತೊಮ್ಮೆ ರಾಹುಲ್ ದ್ರಾವಿಡ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.   ದ್ರಾವಿಡ್​ ಮನವಿಯನ್ನು ಪುರಸ್ಕರಿಸಿದ ಬಿಸಿಸಿಐ, ಅವರ ಅಭಿಪ್ರಾಯವನ್ನು ಗೌರವಿಸುವುದಾಗಿ ಹೇಳಿದೆ. ಅಷ್ಟಕ್ಕೂ ರಾಹುಲ್ ದ್ರಾವಿಡ್ ಸಮಬಾಳು, ಸಮಪಾಲು ಎಂಬ ನುಡಿಯನ್ನ ತಮ್ಮ ಬದುಕಲ್ಲಿ ಅಳವಡಿಸಿಕೊಂಡವರು.  ಕೋಚ್​ ಆಗಿ ಟೀಂ ಇಂಡಿಯಾ ಸೇರಿದ ದಿನದಿಂದ ದ್ರಾವಿಡ್​​, ಭಾರತದ ತಂಡದ ಪ್ರತಿ ಸಿಬ್ಬಂದಿಯನ್ನೂ ಸಮನಾಗಿ ಕಂಡಿದ್ದಾರೆ. ಯಾರಿಗೂ ತಾರತಮ್ಯ ಮಾಡದೇ, ಇಲ್ಲರನ್ನೂ ಒಂದೇ ರೀತಿ ಕಂಡು ಮೆಚ್ಚುಗೆ ಗಳಿಸಿದವರು. ದ್ರಾವಿಡ್​ ಅವರು ಹೀಗೆ ಮಾಡಿದ್ದು ಇದೇ ಮೊದಲಲ್ಲ. 2018ರಲ್ಲಿ ನಡೆದ ಅಂಡರ್-19 ವಿಶ್ವಕಪ್​​ನಲ್ಲಿ ಭಾರತ ತಂಡ ವಿಶ್ವಕಪ್​​ಗೆ ಮುತ್ತಿಟ್ಟಿತ್ತು. ಈ ವೇಳೆ ಹೆಡ್​ ಮಾಸ್ಟರ್​​ ದ್ರಾವಿಡ್​ಗೆ ಬಿಸಿಸಿಐ 50 ಲಕ್ಷ ರೂಪಾಯಿ ಬಹುಮಾನ ನೀಡೋದಾಗಿ ಹೇಳಿತ್ತು. ಜೊತೆಗೆ ಇತರೆ ಕೋಚ್​​ಗಳಿಗೆ 25 ಲಕ್ಷ ರೂಪಾಯಿ ಬಹುಮಾನ ನೀಡೋದಾಗಿ ಹೇಳಿತ್ತು. ಬಿಸಿಸಿಐ ಈ ನಿಲುವನ್ನು ದ್ರಾವಿಡ್ ಅಂದು ಕೂಡ ವಿರೋಧಿಸಿದ್ದರು. ದ್ರಾವಿಡ್ ಒತ್ತಾಯಕ್ಕೆ ಮಣಿದಿದ್ದ ಬಿಸಿಸಿಐ, ಇತರೆ ಕೋಚ್ ಸಿಬ್ಬಂದಿಗೆ ನೀಡಿದಂತೆ 25 ಲಕ್ಷ ರೂಪಾಯಿ ಹಣವನ್ನು ದ್ರಾವಿಡ್​ಗೆ ಬಿಸಿಸಿಐ ನೀಡಿತ್ತು.

ದ್ರಾವಿಡ್​ರ ಈ ಸರಳ ವ್ಯಕ್ತಿತ್ವ ಆಟಗಾರರ ಮೇಲೆ ಅದೆಷ್ಟು ಪರಿಣಾಮ ಬೀರಿದೆ ಅಂದ್ರೆ ನಾಯಕ ರೋಹಿತ್ ಶರ್ಮಾ ತಮ್ಮ ಗುರು ಬಗ್ಗೆ ಭಾವನಾತ್ಮದ ಪೋಸ್ಟ್ ಹಾಕಿದ್ದಾರೆ. ನಾವು ಒಟ್ಟಿಗೇ ವಿಶ್ವಕಪ್ ಗೆದ್ದಿದ್ದು ನನ್ನ ಅದೃಷ್ಟ ಎಂದು ಬಣ್ಣಿಸಿದ್ದಾರೆ. ಪ್ರೀತಿಯ ದ್ರಾವಿಡ್, ನಾನು ಎಲ್ಲರಂತೆ ನಿಮ್ಮ ಕ್ರಿಕೆಟ್ ನೋಡುತ್ತಲೇ ಬೆಳೆದಿದ್ದೇನೆ. ನಿಮ್ಮೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ, ನೀವು ಅಪಾರ ಸಾಧನೆ ಮಾಡಿದ್ದೀರಿ. ಆದರೆ ಅದೆಲ್ಲವನ್ನೂ ಪಕ್ಕಕ್ಕಿಟ್ಟು ನಮ್ಮೊಂದಿಗೆ ಕೋಚ್ ಆಗಿ ಕೆಲಸ ಮಾಡಲು ಬಂದಿದ್ದೀರಿ. ಅದು ನಮಗೆ ಸಿಕ್ಕ ದೊಡ್ಡ ಕೊಡುಗೆ. ನೀವು ನನ್ನ ಕೆಲಸದ ವೈಫ್ ಎಂದು ನನ್ನ ಹೆಂಡತಿ ಕಾಲೆಳೆಯುತ್ತಾಳೆ. ಹಾಗೆ ಕರೆಸಿಕೊಳ್ಳುವುದಲ್ಲಿ ನನಗೆ ಸಂತೋಷವಿದೆ’ ಎಂದಿದ್ದಾರೆ. ಸದ್ಯ ಭಾರತ ಕ್ರಿಕೆಟ್ ತಂಡವು 2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಟ್ರೋಫಿ ಜಯಿಸಿತ್ತು. ಭರ್ಜರಿ 11 ವರ್ಷಗಳ ಬಳಿಕ ಟ್ರೋಫಿ ಬರವನ್ನ ನೀಗಿಸಿಕೊಂಡಿದೆ. ಇದರ ಕ್ರೆಡಿಟ್ ರಾಹುಲ್ ದ್ರಾವಿಡ್​ ಅವ್ರಿಗೂ ಸಲ್ಲುತ್ತದೆ. ಏನೇ ಹೇಳಿ. ಈಗಿನ ಕಾಲದಲ್ಲಿ ಮತ್ತೊಬ್ಬರು ಬೆಳೆದ್ರೆ ಹೊಟ್ಟೆಕಿಚ್ಚು ಪಡುವಂಥ ಸ್ವಾರ್ಥಿಗಳಿದ್ದಾರೆ. ಬೇರೆಯವ್ರಿಗೆ ಕೊಡುವ ಹಣವನ್ನ ನನಗೇ ಕೊಡಿ ಅನ್ನೋ ಜನರಿದ್ದಾರೆ. ಆದ್ರೆ ನಮ್ಮ ಕನ್ನಡಿಗ ಮಾತ್ರ ಇದಕ್ಕೆ ಡೆಡ್​ ಆಪೋಸಿಟ್. ಇದೇ ಕಾರಣಕ್ಕೆ ರಾಹುಲ್ ದ್ರಾವಿಡ್ ಬರೀ ವಿಶ್ವಕಪ್ ಅಷ್ಟೇ ಗೆಲ್ಲಲಿಲ್ಲ. ಕೋಟ್ಯಂತರ ಭಾರತೀಯರ ಮನಸ್ಸನ್ನೂ ಗೆದ್ದಿದ್ದಾರೆ.

Shwetha M

Leave a Reply

Your email address will not be published. Required fields are marked *