1983ರಲ್ಲಿ ಬಿಸಿಸಿಐ ಖಜಾನೆ ಖಾಲಿ ಖಾಲಿ – ಮಾನ ಕಾಪಾಡಿದ ಲತಾಮಂಗೇಶ್ಕರ್ ಹಾಡು
ಗಾನಕೋಗಿಲೆ ಸಹಾಯ ಮರೆತಿಲ್ಲ BCCI

1983ರಲ್ಲಿ ಬಿಸಿಸಿಐ ಖಜಾನೆ ಖಾಲಿ ಖಾಲಿ – ಮಾನ ಕಾಪಾಡಿದ ಲತಾಮಂಗೇಶ್ಕರ್ ಹಾಡುಗಾನಕೋಗಿಲೆ ಸಹಾಯ ಮರೆತಿಲ್ಲ BCCI

17 ವರ್ಷಗಳ ಬಳಿಕ ಟೀಂ ಇಂಡಿಯಾ ಟಿ20 ವಿಶ್ವಕಪ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.. ಕಪ್ ಗೆದ್ದು ತವರಿಗೆ ಆಗಮಿಸಿದ ಟೀಮ್ ಇಂಡಿಯಾಗೆ ಬಿಸಿಸಿಐ ಭರ್ಜರಿ ಸ್ವಾಗತ ನೀಡಿದೆ. ಬಳಿಕ ವಿನ್ನಿಂಗ್ ಪರೇಡ್ ಮಾಡಿ, ವಾಂಖೆಡೆ ಸ್ಟೇಡಿಯಂನಲ್ಲಿ ಸನ್ಮಾನ ಕಾರ್ಯಕ್ರಮ, ಅದಾದ್ಮೇಲೆ  125 ಕೋಟಿಯ ಚೆಕ್ಅನ್ನು ಆಟಗಾರರಿಗೆ ಬಿಸಿಸಿಐ ನೀಡಿದೆ.. ನಿಮ್ಗೊಂದು ವಿಚಾರ ಗೊತ್ತಾ? ನಿನ್ನೆ ಇಷ್ಟೊಂದು ಅದ್ದೂರಿ ಕಾರ್ಯಕ್ರಮ ಮಾಡಿ, ಕೋಟ್ಯಂತರ ರೂಪಾಯಿ ಚೆಕ್ ನೀಡಿದ್ದ ಬಿಸಿಸಿಐ ಬಳಿ ಒಂದು ಕಾಲದಲ್ಲಿ ದುಡ್ಡೇ ಇರ್ಲಿಲ್ಲ.. ಹೌದು, ಮೊದಲ ಬಾರಿಗೆ ಅಂದ್ರೆ 1983 ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದಾಗ ಆಟಗಾರರಿಗೆ ಗೆಲುವಿನ ಗಿಫ್ಟ್ ನೀಡಿಲು ಬಿಸಿಸಿಐ ಹತ್ರ ಹಣವೇ ಇರ್ಲಿಲ್ಲ.. ಆಗ ಬಿಸಿಸಿಐ ನೆರವಿಗೆ ಬಂದಿದ್ದೇ ಖ್ಯಾತ ಗಾಯಕಿ ಲತಾ ಮಂಗೇಶ್ಕರ್.. ಅಷ್ಟಕ್ಕೂ ಲತಾ ಮಂಗೇಶ್ಕರ್ ಗೆ ಬಿಸಿಸಿಐ ನಂಟೇನು? ಗಾಯಕಿ ಬಿಸಿಸಿಐಗೆ ನೆರವಾಗಿದ್ದು ಹೇಗೆ? ಅಂದು ಬಡವಾಗಿದ್ದ ಬಿಸಿಸಿಐ ಕ್ರಿಕೆಟ್ ಜಗತ್ತಿನ ಬಿಗ್ ಬಾಸ್ ಆಗಿದ್ದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಸಾವಿನ ಹೊಸ್ತಿಲಲ್ಲಿ ಲಕ್ಷ್ಮೀ, ಸಂಭ್ರಮದಲ್ಲಿ ಭಾಗ್ಯ! – ಲಡ್ಡು ಬಗ್ಗೆ ಯೋಚನೆಯೇ ಇಲ್ವಾ?

ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ 17ವರ್ಷಗಳ ಬಳಿಕ ಟಿ20 ವಿಶ್ವಕಪ್ ಟ್ರೋಫಿ ತನ್ನದಾಗಿಸಿಕೊಂಡಿದೆ.. ಟ್ರೋಫ್ರಿಯೊಂದಿಗೆ ತವರಿಗೆ ಆಗಮಿಸಿದ ಟೀಂ ಇಂಡಿಯಾಗೆ ಭರ್ಜರಿ ಸ್ವಾಗತ ಮಾಡಲಾಯಿತು.. ಭಾರತ ತಂಡ ಮುಂಬೈನಲ್ಲಿ ತೆರೆದ ಬಸ್​ನಲ್ಲಿ ರೋಡ್ ಶೋ ನಡೆಸಿತು. ವಾಂಖೆಡೆ ಮೈದಾದವರೆಗೂ ಬಸ್‌ ಏರಿ ಬಂದ ಕ್ರಿಕೆಟರ್ಸ್ ಗೆ ಬಿಸಿಸಿಐ 125 ಕೋಟಿ ರೂಪಾಯಿ ಬಹುಮಾನ ನೀಡಿದೆ.. ಆದ್ರೆ ಭಾರತವು ಮೊತ್ತ ಮೊದಲ ಬಾರಿಗೆ ವಿಶ್ವಕಪ್ ಗೆದ್ದಾಗ, ಅಂದರೆ 1983ರಲ್ಲಿ ಚಾಂಪಿಯನ್ ಆಟಗಾರರಿಗೆ ಹಣ ನೀಡಲೂ ಬಿಸಿಸಿಐ ಬಳಿ ಶಕ್ತಿ ಇರಲಿಲ್ಲ.

ಹೌದು, 1983ರಲ್ಲಿ ಅಂದ್ರೆ ಸುಮಾರು 41 ವರ್ಷಗಳ‌‌ಹಿಂದೆ ಯಾರೂ ಊಹಿಸದ ರೀತಿಯಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ತಂಡ  ಮೊತ್ತ ಮೊದಲ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಗೆಲುವು ಸಾಧಿಸಿದ್ದರು. ಕ್ರಿಕೆಟ್ ವಿಶ್ವಕ್ಕೆ ಅಚ್ಚರಿ ನೀಡಿದ್ದ ಕಪಿಲ್ ದೇವ್ ಬಳಗವು ಲಾರ್ಡ್ಸ್ ಮೈದಾನದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ವಿರುದ್ದ ಗೆಲುವು ಸಾಧಿಸಿ ಮೊದಲ ಬಾರಿಗೆ ಕ್ರಿಕೆಟ್ ಭೂಪಟದಲ್ಲಿ ಭಾರತದ ಧ್ವಜವನ್ನು ಅಧಿಕಾರಯುತವಾಗಿ ನೆಟ್ಟಿತ್ತು. ಟ್ರೋಫಿ ‌ಗೆಲ್ತಿದ್ದಂತೆ ಭಾರತೀಯ ಕ್ರಿಕೆಟ್ ಪ್ರೇಮಿಗಳ ಖುಷಿಗೆ ಪಾರವೇ ಇರ್ಲಿಲ್ಲ..

ಕಪಿಲ್ ದೇವ್ ಅವರು ಲಾರ್ಡ್ಸ್ ಬಾಲ್ಕನಿಯಲ್ಲಿ ಟ್ರೋಫಿ ಎತ್ತುತ್ತಿದ್ದಂತೆ ಇಡೀ ಭಾರತ ಕುಣಿದಾಡಿತ್ತು, ಆದರೆ ಆಗಿನ ಬಿಸಿಸಿಐ ಅಧ್ಯಕ್ಷ, ಇಂದಿರಾ ಗಾಂಧಿ ಕ್ಯಾಬಿನೆಟ್ ನ ಪವರ್ ಫುಲ್ ಮಿನಿಸ್ಟರ್ ಎನ್.ಕೆ.ಪಿ ಸಾಳ್ವೆ ಅವರಿಗೆ ಚಿಂತೆ ಕಾಡುತ್ತಿತ್ತು. ಆಗ ಭಾರತದಲ್ಲಿನ್ನೂ ಆರ್ಥಿಕ ಉದಾರೀಕರಣ ಆಗಿರಲಿಲ್ಲ. ಕ್ರಿಕೆಟ್ ಉದ್ಯಮವೂ ಆಗಿರಲಿಲ್ಲ. ಭಾರತ ತಂಡದ ಮಹಾನ್ ಸಾಧನೆಯನ್ನು ಸಂಭ್ರಮಾಚರಣೆಗೆ ಬಿಸಿಸಿಐ ಬಳಿ ಹಣವೇ ಇರಲಿಲ್ಲ!

ಆದ್ರೆ ಈಗ ಟಿವಿ ರೈಟ್ಸ್ ಮೂಲಕ 5 ಬಿಲಿಯನ್ ಡಾಲರ್ ಹಣ ಪಡೆಯುತ್ತಿರುವ ಬಿಸಿಸಿಐ ಬಳಿ ಆಗ ತನ್ನ ಕ್ರಿಕೆಟಿಗರಿಗೆ ಒಂದು ದಿನದ ಭತ್ಯೆ ಕೇವಲ 260 ರೂಪಾಯಿ  ಪಾವತಿಸಲೂ ಆಗುತ್ತಿರಲಿಲ್ಲ!

ಆಗ ಸಾಳ್ವೆ ಅವರಿಗೆ ನೆನಪಾಗಿದ್ದು ಭಾರತೀಯ ಕ್ರಿಕೆಟ್ ನ ‘one stop Encyclopedia’ ಎಂದೇ ಕರೆಯುತ್ತಿದ್ದ ರಾಜ್ ಸಿಂಗ್ ದುಂಗಾರ್ ಪುರ್ ಅವರು. ಕ್ರಿಕೆಟ್ ವಲಯದಲ್ಲಿ ‘ರಾಜ್ ಭಾಯ್’ ಎಂದೇ ಕರೆಯಲ್ಪಡುತ್ತಿದ್ದ ದುಂಗಾರ್ ಪುರ್ ಅವರು ಸಾಳ್ವೆ ಅವರನ್ನು ಸಮಾಧಾನ ಪಡಿಸಿ ಆ ಒಂದು ಹೆಸರು ಹೇಳಿದ್ದರು. ಅವರೇ ಭಾರತದ ಗಾನಕೋಗಿಲೆ ಎಂದೇ ಹೆಸರಾದ ಸೂಪರ್ ಸ್ಟಾರ್ ಸಿಂಗರ್ ಲತಾ ಮಂಗೇಶ್ಕರ್.

ಹೌದು, ಅಂದು ಬಿಸಿಸಿಐ ತನ್ನ ಮಾನ ಉಳಿಸಿಕೊಳ್ಳಲು ಲತಾ ಮಂಗೇಶ್ಕರ್ ಅವರ ಸಹಾಯ ಕೋರಿತ್ತು. ಲತಾ ಮಂಗೇಶ್ಕರ್ ಅವರಿಂದ ಗಾಯನ ಕಾರ್ಯಕ್ರಮ ನಡೆಸಿ ಅದರಿಂದ ಬರುವ ಹಣವನ್ನು ಆಟಗಾರರಿಗೆ ನೀಡುವ ಯೋಜನೆ ಸಾಳ್ವೆ ಮತ್ತು ರಾಜ್ ಭಾಯ್ ಅವರದ್ದು. ಸ್ವತಃ ದೊಡ್ಡ ಕ್ರಿಕೆಟ್ ಅಭಿಮಾನಿಯಾಗಿದ್ದ ಲತಾ ಅವರು ಈ ವಿಷಯವನ್ನು ತಿಳಿದ ಕೂಡಲೇ ಕಾರ್ಯಕ್ರಮ ನೀಡಲು ಒಪ್ಪಿಗೆ ನೀಡಿದ್ದರು.

ಅದರಂತೆ ಹೊಸದಿಲ್ಲಿಯ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ಲತಾ ಮಂಗೇಶ್ಕರ್ ಅವರ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ಸ್ಟೇಡಿಯಂನಲ್ಲಿ ತುಂಬಿ ತುಳುಕಿದ್ದ ಪ್ರೇಕ್ಷಕರ ಎದುರು ಲತಾ ಅವರು ಎರಡು ಗಂಟೆಗಳ ಕಾರ್ಯಕ್ರಮ ನೀಡಿದ್ದರು. ಅಲ್ಲಿ ಅಂದು ಭಾರತೀಯ ಕ್ರಿಕೆಟಿಗರು ಸೇರಿದ್ದರು. ಲತಾ ಅವರ ಸಹೋದರ ಪಂಡಿತ್ ಹೃದ್ಯಾಂತ್ ಮಂಗೇಶ್ಕರ್ ಅವರು ಸಂಯೋಜನೆ ಮಾಡಿದ ಭಾರತ ವಿಶ್ವ ವಿಜೇತ ಎಂಬ ವಿಶೇಷ ಹಾಡನ್ನು ಅಂದು ಲತಾ ಮಂಗೇಶ್ಕರ್ ಹಾಡಿದ್ದರು.

ಅಂದಿನ ಕಾರ್ಯಕ್ರಮದಲ್ಲಿ ಸುಮಾರು 20 ಲಕ್ಷ ರೂ ಗಳು ಒಟ್ಟಾಗಿತ್ತು. ಈ‌‌‌ ಹಣದಿಂದ ಟೀಂ ಇಂಡಿಯಾದ ಆಟಗಾರರಿಗೆ ತಲಾ ಒಂದು ಲಕ್ಷ ರೂ ನೀಡಲಾಗಿತ್ತು. ವಿಶೇಷ ಏನೆಂದರೆ ಭಾರತೀಯ ಕ್ರಿಕೆಟ್ ಮಂಡಳಿಗೆ ಇಷ್ಟೆಲ್ಲಾ ಮಾಡಿದ ಲತಾ ಮಂಗೇಶ್ಕರ್ ಅವರು ಸಂಭಾವನೆಯಾಗಿ ಒಂದೇ ಒಂದು ರೂಪಾಯಿ ಕೂಡಾ ಪಡೆಯಲಿಲ್ಲ. ಅಂದು ಅವಮಾನದಿಂದ ತನ್ನನ್ನು ಪಾರು ಮಾಡಿದ ಲತಾ ಅವರ ಉಪಕಾರವನ್ನು ಬಿಸಿಸಿಐ ಮರೆಯಲಿಲ್ಲ. ಅಂದಿನಿಂದ ಲತಾ ಮಂಗೇಶ್ಕರ್ ಅವರು ನಿಧನರಾಗುವವರೆಗೂ ಭಾರತದ ಎಲ್ಲಾ ಸ್ಟೇಡಿಯಂಗಳಲ್ಲಿ ಎರಡು ವಿಐಪಿ ಸೀಟ್ ಗಳನ್ನು ಅವರಿಗೆ ಮೀಸಲಿಡಲಾಗುತ್ತಿತ್ತು.

ಭಾರತ ಚೊಚ್ಚಲ ವಿಶ್ವಕಪ್ ಗೆದ್ದಾಗ ಹಣವಿಲ್ಲದೆ ಬರಿದಾಗಿದ್ದ ಬಿಸಿಸಿಐ ಖಜಾನೆಯಲ್ಲಿ ಇಂದು ಕೋಟಿ ಕೋಟಿ ಹಣವಿದೆ.  70, 80ರ ದಶಕದಲ್ಲಿ ಭಾರತೀಯ ಕ್ರಿಕೆಟ್ಗೆ ಇಷ್ಟು ಶಕ್ತಿಯೇ ಇರಲಿಲ್ಲ. 1980 ರ ಸಂದರ್ಭ, ಉನ್ನತ ತಂಡಗಳನ್ನು ಭಾರತಕ್ಕೆ ಕರೆಸಬೇಕು ಎಂದರೆ ದೊಡ್ಡ ಮೊತ್ತದ ಹಣವನ್ನು ಪಾವತಿಸಬೇಕಾಗಿತ್ತು. ಆದರೆ, 1997 ರಲ್ಲಿ ಜಗಮೋಹನ್ ದಾಲ್ಮಿಯಾ ನೇತೃತ್ವದಲ್ಲಿ ಭಾರತೀಯ ಕ್ರಿಕೆಟ್ ರಂಗದಲ್ಲಿ ಬದಲಾವಣೆ ಪ್ರಾರಂಭವಾಯಿತು. ಕ್ರಮೇಣ ಬಿಸಿಸಿಐ ಐಸಿಸಿಯ ಆರ್ಥಿಕ ಮೂಲಗಳ ಮೇಲೆ ಪ್ರಭಾವ ಬೀರುವ ಮಟ್ಟಕ್ಕೆ ಬೆಳೆಯಿತು. ಇಂದು ಇತರೆ ಯಾವುದೇ ದೇಶಗಳಲ್ಲಿ ಇಲ್ಲದಷ್ಟು ಕ್ರಿಕೆಟ್ ಅಭಿಮಾನಿಗಳು ಭಾರತದಲ್ಲಿದ್ದಾರೆ. ದೇಶದಲ್ಲಿ ಬಹುಪಾಲು ಜನರು ಕ್ರಿಕೆಟ್ ನೋಡುತ್ತಾರೆ. ಮೊಬೈಲ್ ಮತ್ತು ಟಿವಿಗಳಲ್ಲಿ ಪಂದ್ಯಗಳ ವೀಕ್ಷಕರ ಸಂಖ್ಯೆ ದೊಡ್ಡದಾಗಿದೆ. ಈ ಜನಪ್ರಿಯತೆಯೇ ಬಿಸಿಸಿಐ ಪ್ರಮುಖ ಮಾರುಕಟ್ಟೆಯನ್ನಾಗಿ ಮಾಡಿದೆ. ಈಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇಡೀ ವಿಶ್ವದಲ್ಲಿ ಎಲ್ಲ ಕ್ರೀಡಾ ಮಂಡಳಿಗಳ ಪೈಕಿ ಅತ್ಯಂತ ಶ್ರೀಮಂತ ಮಂಡಳಿ‌ಯಾಗಿದೆ.

ಕ್ರಿಕೆಟ್ ದುನಿಯಾಕ್ಕೆ ಬಿಗ್ ಬಾಸ್ ಎನಿಸಿಕೊಂಡಿರೋ ಐಸಿಸಿಗೂ ಸಹ ಸವಾಲು ಹಾಕುವ ಮಂಡಳಿ ಬಿಸಿಸಿಐ. 2023-2024ರ ಹಣಕಾಸು ವರ್ಷದಲ್ಲಿ, ಬಿಸಿಸಿಐ 16,875 ಕೋಟಿ ರೂಪಾಯಿ ಗಳಿಸಿದೆ. 2022-23 ಹಣಕಾಸು ವರ್ಷದಲ್ಲಿ  4,000 ಕೋಟಿ ರೂಪಾಯಿ ತೆರಿಗೆಯನ್ನು ಪಾವತಿಸಿದೆ. ವರ್ಷದಿಂದ ವರ್ಷಕ್ಕೆ ಬಿಸಿಸಿಐಯ ವಾರ್ಷಿಕ ಆದಾಯ ಏರಿಕೆಯಾಗುತ್ತಲೇ ಇದೆ.

Shwetha M

Leave a Reply

Your email address will not be published. Required fields are marked *