ಇಶಾನ್ ಕಿಶನ್ ಪಂದ್ಯವಾಡಬಾರದು – ಬಿಸಿಸಿಐ ಕಟ್ಟಪ್ಪಣೆ ಹೊರಡಿಸಿದ್ದು ಯಾಕೆ?

ಇಶಾನ್ ಕಿಶನ್ ಪಂದ್ಯವಾಡಬಾರದು – ಬಿಸಿಸಿಐ ಕಟ್ಟಪ್ಪಣೆ ಹೊರಡಿಸಿದ್ದು ಯಾಕೆ?

ಟೀಮ್ ಇಂಡಿಯಾ ಆಟಗಾರ ಇಶಾನ್ ಕಿಶನ್‌ಗೆ ಕೊನೆಗೂ ನ್ಯೂಝಿಲೆಂಡ್ ಸರಣಿಯಲ್ಲಿ ಆಡುವ ಭಾಗ್ಯ ಸಿಕ್ಕಿದೆ. ನ್ಯೂಝಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಹಾಗೂ ಮುಂಬರುವ ಟಿ20 ವಿಶ್ವಕಪ್​ಗೆ ಇಶಾನ್ ಕಿಶನ್ ಸ್ಥಾನ ಪಡೆದಿದ್ದಾರೆ. ಆದರೆ ಇದೀಗ ದೇಶೀಯ ಅಂಗಳದಲ್ಲಿ ಆಡಬಾರದು ಎಂದು ಬಿಸಿಸಿಐ ಸೂಚನೆ ನೀಡಿದೆ.

ಇದನ್ನೂ ಓದಿ:ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡದ ಕಮಾಲ್ – ಹ್ಯಾಟ್ರಿಕ್‌ ಗೆಲುವು

ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲೇ ಕೇವಲ 33 ಎಸೆತಗಳಲ್ಲಿ ಶತಕ ಸಿಡಿಸಿದ್ದ ಜಾರ್ಖಂಡ್ ತಂಡದ ನಾಯಕ ಇಶಾನ್ ಕಿಶನ್​ ಇನ್ನುಳಿದ ಪಂದ್ಯಗಳನ್ನು ಆಡುತ್ತಿಲ್ಲ. ಇದಕ್ಕೆ ಕಾರಣ ಬಿಸಿಸಿಐ ಹೊರಡಿಸಿದ ಕಟ್ಟಪ್ಪಣೆ. ಇಶಾನ್ ಕಿಶನ್​ಗೆ ಎಲ್ಲಾ ಪಂದ್ಯಗಳನ್ನು ಆಡದಂತೆ ಬಿಸಿಸಿಐ ಆಯ್ಕೆ ಸಮಿತಿ ಸೂಚಿಸಿದ್ದಾರೆ. ಹೀಗಾಗಿಯೇ ರಾಜಸ್ಥಾನ್ ಹಾಗೂ ಪುದುಚೇರಿ ವಿರುದ್ಧದ ಪಂದ್ಯಗಳಿಂದ ಇಶಾನ್ ಕಿಶನ್ ಹೊರಗುಳಿದಿದ್ದಾರೆ. ತಮಿಳುನಾಡು ವಿರುದ್ಧದ ಪಂದ್ಯದಿಂದಲೂ ಹೊರಗುಳಿದಿದ್ದಾರೆ.

ಬಿಸಿಸಿಐ ಆಡದಂತೆ ಇಶಾನ್ ಕಿಶನ್‌ಗೆ ಸೂಚನೆ ನೀಡಲು ಕಾರಣವೂ ಇದೆ. ಇಶಾನ್ ಕಿಶನ್ ಮುಂಬರುವ ಟಿ20 ವಿಶ್ವಕಪ್​ಗೆ ಆಯ್ಕೆಯಾಗಿದ್ದಾರೆ. 15 ಸದಸ್ಯರುಗಳ ತಂಡದಲ್ಲಿ ಹೆಚ್ಚುವರಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಯ್ಕೆಯಾಗಿರುವ ಕಿಶನ್ ಭರ್ಜರಿ ಫಾರ್ಮ್​ನಲ್ಲಿದ್ದಾರೆ. ಇಶಾನ್, ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಿಂದ ಸತತ ಪಂದ್ಯವಾಡುತ್ತಿದ್ದಾರೆ. ಹೀಗೆ ಸತತ ಪಂದ್ಯಗಳನ್ನಾಡುತ್ತಿರುವುದರಿಂದ ಫಿಟ್​ನೆಸ್ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಈ ಮುನ್ನಚ್ಚರಿಕೆಯ ಸಲುವಾಗಿ ಎಲ್ಲಾ ಪಂದ್ಯಗಳನ್ನಾಡದಂತೆ ಸೂಚಿಸಲಾಗಿದೆ. ಹೀಗಾಗಿಯೇ ಕರ್ನಾಟಕ ವಿರುದ್ಧದ ಪಂದ್ಯದ ಬಳಿಕ ಇಶಾನ್ ಕಿಶನ್ ಮನೆಗೆ ತೆರಳಿದ್ದಾರೆ. ಅಲ್ಲದೆ ಜನವರಿ 3 ರಂದು ನಡೆಯಲಿರುವ ಕೇರಳ ವಿರುದ್ಧದ ಪಂದ್ಯಕ್ಕೂ ಮುನ್ನ ಅವರು ಜಾರ್ಖಂಡ್ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಇಶಾನ್ ಕಿಶನ್ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಆಯ್ಕೆಯಾಗುವ ಸಾಧ್ಯತೆಯಿದೆ. ಆಯ್ಕೆ ಸಮಿತಿಯು ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಬದಲಿಗೆ ಇಶಾನ್ ಕಿಶನ್ ಅವರನ್ನು ಎರಡನೇ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಗಿ ಆಯ್ಕೆ ಮಾಡಲು ಆಸಕ್ತಿ ಹೊಂದಿದೆ ಎಂದು ವರದಿಯಾಗಿದೆ. ಹೀಗಾಗಿ ಮುಂಬರುವ ನ್ಯೂಝಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಇಶಾನ್ ಕಿಶನ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

Sulekha