ಮಳೆ ಅವಾಂತರ ತಡೆಗೆ ಸಜ್ಜಾದ ಅಧಿಕಾರಿಗಳು – 200 ಪ್ರವಾಹ ಪ್ರದೇಶಗಳನ್ನು ಗರುತಿಸಿದ ಬಿಬಿಎಂಪಿ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂಗಾರು ಪೂರ್ವ ಮಳೆಗೆ ಸಾಕಷ್ಟು ಅವಾಂತರ ಸೃಷ್ಟಿಯಾಗಿತ್ತು. ನಗರದ ಹಲವು ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು. ಈ ಸಂಬಂಧ ಎಚ್ಚೆತ್ತುಕೊಂಡ ಬಿಬಿಎಂಪಿ ಅಧಿಕಾರಿಗಳು 200 ಪ್ರವಾಹ ಪ್ರದೇಶಗಳನ್ನು ಗುರುತಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಮಳೆಗಾಲದಲ್ಲಿ ಭಾರಿ ಪ್ರಮಾಣದಲ್ಲಿ ಜಲಾವೃತವಾಗುವ ಸೂಕ್ಷ್ಮ ಪ್ರದೇಶಗಳ ಮೇಲೆ ಹೆಚ್ಚು ಗಮನ ಇಡಬೇಕು. ಈ ಸಂಬಂಧ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಜೊತೆಗೆ ಸೂಕ್ಷ್ಮ ಪ್ರದೇಶಗಳ ಮೇಲೆ ಗಮನಹರಿಸುವ ವಿಚಾರವಾಗಿ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ನಗರದಲ್ಲಿ 200 ಸೂಕ್ಷ್ಮ ಪ್ರದೇಶಗಳ ಪಟ್ಟಿಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರಕ್ಕೆ ನೀಡಿದ್ದು, ಆ 200 ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಎಷ್ಟಿದೆ ಎಂಬುದರ ಮಾಹಿತಿ ಮುಂಚಿತವಾಗಿಯೇ ಲಭ್ಯವಾಗಲಿದೆ. ಈ ಪೈಕಿ ಸೂಕ್ಷ್ಮ ಪ್ರದೇಶಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಪರಿಶೀಲನಾ ಸಭೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗಾಯದ ಮೇಲೆ ಬರೆ ಎಳೆದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ – ಮೈ-ಬೆಂ ದಶಪಥದಲ್ಲಿ ಟೋಲ್ ದರ ಹೆಚ್ಚಳ!
ರಾಜಕಾಲುವೆ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಬೆಸ್ಕಾಂ, ಜಲಮಂಡಳಿ ಸೇರಿದಂತೆ ಎಲ್ಲಾ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ, ಏಪ್ರಿಲ್ ಅಂತ್ಯದೊಳಗೆ ಈಗಾಗಲೇ ಕಾಂಕ್ರೀಟ್ ತಡೆಗೋಡೆ ನಿರ್ಮಾಣಗೊಂಡ 450 ಕಿಮೀ ಪ್ರಾಥಮಿಕ ಹಾಗೂ 670 ಕಿ.ಮೀ ಎರಡನೇ ದರ್ಜೆಯ ರಾಜಕಾಲುವೆಯಲ್ಲಿ ಹೂಳು ತೆಗೆಯುವ ಮೊದಲ ಹಂತ ಕಾರ್ಯ ಪೂರ್ಣಗೊಳಿಸಲಾಗುವುದು. ಎರಡನೇ ಹಂತದ ಹೂಳು ತೆಗೆಯುವ ಕೆಲಸವನ್ನು ಮೇ ಯಿಂದ ಜುಲೈ ಅಂತ್ಯದವರೆಗೆ ನಡೆಸಲಾಗುವುದು ಎಂದು ಹೇಳಿದರು.
ಕಾಂಕ್ರೀಟ್ ತಡೆಗೋಡೆ ಇರದ ರಾಜಕಾಲುವೆಯಲ್ಲಿ ರೂ.2 ಸಾವಿರ ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಗುತ್ತಿಗೆದಾರರು ರಾಜಕಾಲುವೆ ಸ್ವಚ್ಛಗೊಳಿಸಿದ್ದಾರೆ. 107 ಕಿಮೀ ಕಾಂಕ್ರೀಟ್ ತಡೆಗೋಡೆ ಇಲ್ಲದ ರಾಜಕಾಲುವೆಗೆ ಸ್ವಚ್ಛತೆಗೆ ಕ್ರಮ ಕೈಗೊಳ್ಳಾಗುವುದು. ವಾರ್ಡ್ ರಸ್ತೆ, ಮುಖ್ಯರಸ್ತೆ, ಅಕ್ಕಪಕ್ಕದ ಚರಂಡಿಗಳ ಸ್ವಚ್ಛತೆ ವಾರ್ಷಿಕ ನಿರ್ವಹಣೆಯಡಿ ಸಂಸ್ಥೆಗಳನ್ನು ನಿಯೋಜನೆ ಮಾಡಲಾಗಿದೆ ಅಂತಾ ಹೇಳಿದ್ದಾರೆ.
ಮಂಗಳವಾರ ಸುರಿದ ಮಳೆಗೆ ಸಣ್ಣಪುಟ್ಟ ಘಟನೆಗಳು ವರದಿಯಾಗಿವೆ. ಆದರೆ, ನೀರು ಬೇಗನೆ ಇಳಿಮುಖವಾಗಿದೆ. ಭಾರೀ ಮಳೆಯ ಸಮಯದಲ್ಲಿ ದುರ್ಬಲ ಪ್ರದೇಶಗಳಲ್ಲಿ ಅಗತ್ಯ ಕ್ರಮಗಳ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಮುಂಬರುವ ಮಳೆಗಾಲಕ್ಕೆ ಸಂಬಂಧಿಸಿದಂತೆ ಆಯಾ ವಲಯ ವ್ಯಾಪ್ತಿಯಲ್ಲಿ ನಿಯಂತ್ರಣ ಕೊಠಡಿಗಳಿದ್ದು, ಎಲ್ಲಾ ನಿಯಂತ್ರಣ ಕೊಠಡಿಗಳಲ್ಲಿ ದಿನದ 24 ಗಂಟೆಯೂ ಇಂಜಿಯರ್ ಗಳು ಕಾರ್ಯನಿರ್ವಹಿಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಮಳೆಗಾಲದ ವೇಳೆ ಅಗತ್ಯವಿರುವ ಗ್ಯಾಂಗ್ಸ್ ಗಳನ್ನು ಸಿದ್ದವಾಗಿಟ್ಟುಕೊಳ್ಳಬೇಕು. ಜೊತೆಗೆ ಪಾಲಿಕೆ, ಜಲಮಂಡಳಿ ಹಾಗೂ ಬೆಸ್ಕಾಂ ಅಧಿಕಾರಿಗಳನ್ನು ಕೂಡಾ ನಿಯೋಜಿಸಲಾಗಿದೆ ಅಂತಾ ಹೇಳಿದ್ದಾರೆ.