ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲ್‌ಗಳಿಗೆ ಬಿಬಿಎಂಪಿಯಿಂದ ಖಡಕ್ ಎಚ್ಚರಿಕೆ – ನೋಟಿಸ್ ನೀಡಿ ಬೀಗ ಹಾಕಲು ಚಿಂತನೆ!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮಾಲ್‌ಗಳ ವಿರುದ್ಧ ಸಮರ ಸಾರಲು ಬಿಬಿಎಂಪಿ ಮುಂದಾಗಿದೆ. ಮಾಲ್‌ಗಳು ಆಡಳಿತ ಮಂಡಳಿ ಬಾಕಿ ಉಳಿಸಿಕೊಂಡಿರುವ ತೆರಿಗೆ ಕಟ್ಟದಿದ್ರೆ ಮಾಲ್‌ಗೆ ಬೀಗ ಹಾಕುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ.
ಹೌದು, ಕಳೆದ ವಾರ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ ಅಂತಾ ಮಂತ್ರಿಮಾಲ್‍ಗೆ ಬಿಬಿಎಂಪಿ ಬೀಗ ಹಾಕಿತ್ತು. ಬರೋಬ್ಬರಿ 50 ಕೋಟಿ ಬಾಕಿ ಇದೆ ಅಂತಾ ಮಾಲ್‌ನ ಎಲ್ಲಾ ಚಟುವಟಿಕೆಗೆ ಬ್ರೇಕ್ ಹಾಕಿತ್ತು. ಈಗ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರೋ ಬೇರೆ ಮಾಲ್‍ಗಳಿಗೂ ಬಿಬಿಎಂಪಿ ಎಚ್ಚರಿಕೆ ನೀಡಿದೆ. ಬಿಬಿಎಂಪಿ ಅಧಿಕಾರಿಗಳು ಖುದ್ದಾಗಿ ಮಾಲ್ ಗಳಿಗೆ ಭೇಟಿ ನೀಡಿ ಆಸ್ತಿ ತೆರಿಗೆ ವಸೂಲಿಗೆ ನೋಟಿಸ್ ನೀಡಲಿದ್ದಾರೆ. ಒಂದು ವೇಳೆ ನೋಟಿಸ್‍ಗೆ ಉತ್ತರ ಕೊಡದಿದ್ದರೆ ಚರಾಸ್ತಿ ವಶಪಡಿಸಿಕೊಳ್ಳುತ್ತೇವೆ. ಇಲ್ಲದೇ ಇದ್ದರೆ ಬೀಗ ಹಾಕುವುದಾಗಿ ಬಿಬಿಎಂಪಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಮೂರು ನಗರಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ – ಎಲ್ಲೆಲ್ಲಿ ಎಷ್ಟೆಷ್ಟು ಬೆಲೆ ಗೊತ್ತಾ?
ಮಾಲ್ ಅಷ್ಟೇ ಅಲ್ಲ ಯಾರ್ಯಾರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆಯೋ ಅವರ ತೆರಿಗೆಯನ್ನೂ ವಸೂಲಿ ಮಾಡಲಾಗುತ್ತದೆ. ನೂರಾರೂ ಕೋಟಿ ಮಾಲ್ ಗಳಿಂದ ಆಸ್ತಿ ತೆರಿಗೆ ವಸೂಲಿ ಆಗಬೇಕಿದೆ. ಕೆಲ ಮಾಲ್ ಗಳು ಬಿಬಿಎಂಪಿ ಬೀಗ ಹಾಕುತ್ತೆ ಅಂತಾ ಕೋರ್ಟಿಗೆ ಹೋಗಿ ಸ್ಟೇ ತರುತ್ತಾ ಇದ್ದಾರೆ ಎಂಬ ಹೇಳಲಾಗುತ್ತಿದೆ.
ಈ ವರ್ಷ ಎರಡೂವರೆ ಸಾವಿರ ಕೋಟಿ ಆಸ್ತಿತೆರಿಗೆ ವಸೂಲಿ ಮಾಡುವ ಗುರಿಯನ್ನ ಬಿಬಿಎಂಪಿ ಹೊಂದಿದೆ. ಅದರ ಭಾಗವಾಗಿ ಬರೋಬ್ಬರಿ 50 ಸಾವಿರ ನೋಟಿಸ್ ಗಳನ್ನ ನೇರವಾಗಿ ಮನೆಗಳಿಗೆ ತೆರಳಿ ಬಿಬಿಎಂಪಿ ನೀಡುತ್ತಿದೆ. ಇದರ ಜೊತೆಗೆ ಎಸ್ ಎಂಎಸ್ ಮೂಲಕ ಬರೋಬ್ಬರಿ 6 ಲಕ್ಷ ಜನರಿಗೆ ಆಸ್ತಿ ತೆರಿಗೆ ಕಟ್ಟುವಂತೆ ನೋಟಿಸ್ ನೀಡಲಾಗಿದೆಯಂತೆ. ಯಾರನ್ನು ಬಿಡಲ್ಲ ವಸೂಲಿ ಮಾಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.