ಹೋಟೆಲ್ ಮಾಲೀಕರಿಗೆ ಶಾಕ್ ನೀಡಿದ ಬಿಬಿಎಂಪಿ! – ಮತದಾನದಂದು ಫ್ರೀ ಊಟ, ತಿಂಡಿ ವಿತರಣೆಗೆ ನಿಷೇಧ!
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಕೆಲವು ಹೋಟೆಲ್, ರೆಸ್ಟೋರೆಂಟ್ ಮಾಲೀಕರು ವಿಶೇಷ ಆಫರ್ ಗಳನ್ನು ಘೋಷಿಸಿದ್ದಾರೆ. ಇದೀಗ ಹೋಟೆಲ್ ಮಾಲೀಕರಿಗೆ ಶಾಕಿಂಗ್ ಸುದ್ದಿಯೊಂದನ್ನು ಬಿಬಿಎಂಪಿ ನೀಡಿದೆ.
ಇದನ್ನೂ ಓದಿ: ಮತದಾನಕ್ಕೂ ಮುನ್ನಾ ದಿನ ಬಿಜೆಪಿ ನಾಯಕರ ಭಜರಂಗಿ ಜಪ – ಆಂಜನೇಯನಿಗೆ ಡಿಕೆಶಿ ನಮನ!
ಕೇಂದ್ರ ಚುನಾವಣಾ ಆಯೋಗದಿಂದ ಬೆಂಗಳೂರಿನಲ್ಲಿ ಮತದಾನ ಪ್ರಮಾಣ ಹೆಚ್ಚಳ ಮಾಡುವುದಕ್ಕೆ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಭರ್ಜರಿ ಮತದಾನ ಜಾಗೃತಿ ಮೂಡಿಸಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ಸಾಥ್ ನೀಡಲು ಹೋಟೆಲ್ ಮಾಲೀಕರ ಸಂಘವೂ ನಿರ್ಧರಿಸಿತ್ತು. ಹೀಗಾಗಿ ಹಲವು ರೆಸ್ಟೋರೆಂಟ್, ಹೋಟೆಲ್ ಮಾಲೀಕರು ಮತದಾನ ಮಾಡಿ ಬಂದವರಿಗೆ ಉಚಿತ ಊಟ, ತಿಂಡಿ ನೀಡಲಾಗುವುದು ಎಂದು ಘೋಷಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಕೂಡ ಮಾಡಿಕೊಂಡಿದ್ದರು. ಆದರೆ ಕೊನೇ ಕ್ಷಣದಲ್ಲಿ ಬಿಬಿಎಂಪಿ ಯಾವುದೇ ಹೋಟೆಲ್‌ಗಳಲ್ಲಿ ಉಚಿತ ಊಟ ಅಥವಾ ತಿಂಡಿ ನೀಡುವಂತಿಲ್ಲ ಎಂದು ಆದೇಶ ಹೊರಡಿಸಿದೆ.
ವಿಧಾನಸಭಾ ಚುನಾವಣೆ ಹಿನ್ನಲೆ ರಾಜ್ಯದಲ್ಲಿ ಮಾರ್ಚ್ 29 ರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ, ಕೆಲವು ಹೋಟೆಲ್‌ಗಳ ಮುಂದೆ ಮತದಾನ ಮಾಡಿ ಬಂದವರಿಗೆ ಉಚಿತ ಅಥವಾ ರಿಯಾಯಿತಿ ದರದಲ್ಲಿ ಊಟ, ತಿಂಡಿ ನೀಡಲಾಗುವುದು ಎಂದು ಫಲಕ ಮತ್ತು ಪೋಸ್ಟರ್ ಅಳವಡಿಕೆ ಮಾಡಿರುವುದು ಕಂಡುಬಂದಿದೆ. ಆದರೆ, ಇದು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆಗಲಿದ್ದು, ಈ ರೀತಿಯ ಪ್ರಕಟಣೆಗಳಿಗೆ ಸಂಬಂಧಿದಂತೆ ಹೋಟೆಲ್ ಮಾಲೀಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಉಚಿತ ಊಟ, ತಿಂಡಿ ನೀಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಮೇ 10 ರಂದು ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನ ಮತ್ತು ಮೃಗಾಲಯ ಹಾಗೂ ಚಿಕ್ಕಬಳ್ಳಾಪುರದ ನಂದಿ ಬೆಟ್ಟ ಸೇರಿ ರಾಜ್ಯದ ಹಲವು ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ.