ವಿಧಾನ ಪರಿಷತ್ ಸಭಾಪತಿಯಾಗಿ ಬಸವರಾಜ್ ಹೊರಟ್ಟಿ ಅವಿರೋಧವಾಗಿ ಆಯ್ಕೆ

ವಿಧಾನ ಪರಿಷತ್ ಸಭಾಪತಿಯಾಗಿ ಬಸವರಾಜ್ ಹೊರಟ್ಟಿ ಅವಿರೋಧವಾಗಿ ಆಯ್ಕೆ

ಬೆಳಗಾವಿ: ಎಂಟು ಬಾರಿ ವಿಧಾನಪರಿಷತ್ ಸದಸ್ಯರಾಗಿರುವ ಬಸವರಾಜ ಹೊರಟ್ಟಿ ಅವರು ಪರಿಷತ್ತಿನ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಬಸವರಾಜ ಹೊರಟ್ಟಿಯವರ ವಿರುದ್ಧ ಅಭ್ಯರ್ಥಿಗಳನ್ನು ನಿಲ್ಲಿಸಿರಲಿಲ್ಲ. ಹೀಗಾಗಿ ಸುಮಾರು ಮೂರು ದಶಕಗಳ ನಂತರ ಬಸವರಾಜ ಹೊರಟ್ಟಿ ವಿಧಾನ ಪರಿಷತ್ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ :  ವಿಧಾನಸಭೆ ಸಭಾಂಗಣದಲ್ಲಿ ಭಾವಚಿತ್ರ ಅನಾವರಣ- ಕಾರ್ಯಕ್ರಮ ಬಹಿಷ್ಕರಿಸಿದ ಕಾಂಗ್ರೆಸ್

ಬಸವರಾಜ ಹೊರಟ್ಟಿ ಅವರು ಜೆಡಿಎಸ್‌ನಿಂದ ಹೊರಬಂದಾಗ ಬಿಜೆಪಿ ಅವರಿಗೆ ಸಭಾಪತಿ ಸ್ಥಾನದ ಭರವಸೆ ನೀಡಿತ್ತು. ಜನತಾ ಪರಿವಾರದಿಂದ ಏಳು ಬಾರಿ ಗೆದ್ದಿರುವ ಅವರು ಅಕ್ಟೋಬರ್ 2022 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ. 43 ವರ್ಷಗಳಿಂದ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಎಂಎಲ್ಸಿಯಾಗಿ ಆಯ್ಕೆಯಾಗಿರುವ ಹೊರಟ್ಟಿ ಮಂಗಳವಾರ ಬೆಳಗ್ಗೆ ನಾಮಪತ್ರ ಸಲ್ಲಿಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿಂದತೆ ಸಚಿವರು ಈ ವೇಳೆ ಉಪಸ್ಥಿತರಿದ್ದರು.

ಸಭಾಪತಿ ಸ್ಥಾನಕ್ಕೆ ಡಿಸೆಂಬರ್ 21ರಂದು ಚುನಾವಣೆ ನಿಗದಿಯಾಗಿತ್ತು. ಪರಿಷತ್‌ನಲ್ಲಿ ಗೆಲುವಿಗೆ ಅಗತ್ಯದಷ್ಟು ಸಂಖ್ಯಾಬಲ ಹೊಂದಿರುವ ಬಿಜೆಪಿ ಸೋಮವಾರವಷ್ಟೆ ಹೊರಟ್ಟಿ ಅವರನ್ನು ತನ್ನ ಅಭ್ಯರ್ಥಿಯಾಗಿ ಅಂತಿಮಗೊಳಿಸಿತ್ತು. ಪ್ರತಿಪಕ್ಷ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಮಪತ್ರ ಸಲ್ಲಿಕೆಯ ಗಡುವಾದ ಮಂಗಳವಾರ ಮಧ್ಯಾಹ್ನ 12 ಗಂಟೆಯಾದರೂ ತಮ್ಮ ಪಕ್ಷಗಳಿಂದ ಯಾವುದೇ ಸದಸ್ಯರಿಂದ ಅರ್ಜಿ ಸಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೊರಟ್ಟಿ ಆಯ್ಕೆ ಖಚಿತವಾಗಿತ್ತು. ಸಂಖ್ಯಾಬಲ ಇಲ್ಲದ ಕಾರಣ ಉಳಿದ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲಿಲ್ಲ.

suddiyaana