ವಿಧಾನಸೌಧದ ಮುಂಭಾಗದಲ್ಲಿ ಬಸವಣ್ಣ, ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

ವಿಧಾನಸೌಧದ ಮುಂಭಾಗದಲ್ಲಿ ಬಸವಣ್ಣ, ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಬೆಂಗಳೂರು: ವಿಧಾನಸೌಧದ ಮುಂಭಾಗದಲ್ಲಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡ ಪ್ರತಿಮೆ ಇನ್ನೆರೆಡು ತಿಂಗಳಲ್ಲೇ ತಲೆಎತ್ತಲಿದೆ. ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಬಸವಣ್ಣ ಹಾಗೂ ನಾಡಪ್ರಭು ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿತು. ವಿಧಾನಸೌಧ ಮುಂಭಾಗದಲ್ಲಿರುವ ಜವಹರಲಾಲ್ ನೆಹರು ಹಾಗೂ ಬಿ.ಆರ್ ಅಂಬೇಡ್ಕರ್ ಪ್ರತಿಮೆಗಳ ನಡುವೆ ಬಸವಣ್ಣ ಹಾಗೂ ಕೆಂಪೇಗೌಡ ಪ್ರತಿಮೆ ನಿರ್ಮಾಣ ಆಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸುತ್ತೂರು ದೇಶಿಕೇಂದ್ರ ಸ್ವಾಮೀಜಿಗಳು, ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ:  ನಾಲ್ಕನೇ ಡೋಸ್ ಪಡೆಯುವ ಅಗತ್ಯವಿಲ್ಲ – ಗೊಂದಲಕ್ಕೆ ತೆರೆ ಎಳೆದ ಎಸ್‌ಜೆಐಸಿಎಸ್ಆರ್

ಗುದ್ದಲಿ ಪೂಜೆ ಕಾರ್ಯಕ್ರಮದ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ‘ಜನರ ಶಕ್ತಿ ಕೇಂದ್ರ ವಾಗಿರುವ ವಿಧಾನಸೌದ ಮುಂದೆ ಕನ್ನಡ ನಾಡಿನಲ್ಲಿ ಹುಟ್ಟಿ ಕ್ರಾಂತಿ ಮಾಡಿದ ಇಬ್ಬರು ಮಹಾನ್ ನಾಯಕ ಪ್ರತಿಮೆಗೆ ಶಂಕುಸ್ಥಾಪನೆ ಮಾಡಲಾಗಿದೆ. ಮಹಾನ್ ಪುರುಷರಾದ ಬಸವಣ್ಣ, ಮಹಾನ್ ನಾಡು ಕಟ್ಟಿರುವ ಮಹಾಪ್ರಭು ಕೆಂಪೇಗೌಡ ಮೂರ್ತಿಗಳನ್ನು ವಿಧಾನಸೌಧದ ಮುಂಭಾಗದಲ್ಲಿ ಪ್ರತಿಷ್ಟಾಪನೆ ಮಾಡಲು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿತ್ತು. ಒಂದೂವರೆ, ಎರಡು ತಿಂಗಳಲ್ಲಿ ಈ ಪ್ರತಿಮೆಗಳ ನಿರ್ಮಣ ಮಾಡಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಎಲ್ಲಾ ಪರಮಪೂಜ್ಯರ ಸಾನಿಧ್ಯದಲ್ಲಿ ಶಂಕುಸ್ಥಾಪನೆ ಮಾಡಿದ್ದೇವೆ. ಈ ಮಹಾನ್ ವ್ಯಕ್ತಿಗಳ ಆಡಳಿತ ಆಧ್ಯಾತ್ಮಿಕ ಚಿಂತನೆ ನಮ್ಮ ನಾಡಿನಲ್ಲಿ ಬರಬೇಕು ಎಂಬ ಸಲುವಾಗಿ ಈ ಪ್ರತಿಮೆಗಳನ್ನ ಮಾಡಿದ್ದೇವೆ. ನನಗೆ ವಿಶ್ವಾಸ ವಿದೆ, ಈ ಮಹಾತ್ಮರ ಪ್ರೇರಣೆ ಜನತೆಗೆ ಒಳ್ಳೆದಾಗುತ್ತೆ’ ಎಂದರು.

suddiyaana