ಹಿಂದೂ ಹುಲಿಯನ್ನು ಕಟ್ಟಿ ಹಾಕುತ್ತಾ ಹೈಕಮಾಂಡ್? – ಸಿದ್ದರಾಮಯ್ಯರೇ ಸಿಎಂ ಎಂದಿದ್ದೇಕೆ ಯತ್ನಾಳ್!
ಬಸನಗೌಡ ಪಾಟೀಲ್ ಯತ್ನಾಳ್.. ಬಿಜೆಪಿ ತನ್ನ ಮನೆಯೊಳಗಿಟ್ಟುಕೊಂಡಿರೋ ಬಿಸಿ ಬಿಸಿ ಕೆಂಡ. ಈ ಹಿಂದೆ ಆಡಳಿತದಲ್ಲಿರೋವಾಗಲೇ ಯತ್ನಾಳ್ ರಾಜ್ಯ ಬಿಜೆಪಿ ನಾಯಕರಿಗೆ ಬಿಸಿ ತುಪ್ಪವಾಗಿ ಬಿಟ್ಟಿದ್ರು. ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದ್ದಾಗಂತೂ ಕೇಳೋದೇ ಬೇಕಾಗಿರಲಿಲ್ಲ. ನೇರಾನೇರ ಬೈದಾಡುತ್ತಲೇ ಇದ್ರು. ಬಿಎಸ್ವೈ ಆಡಳಿತವನ್ನೇ ಟೀಕಿಸುತ್ತಲೇ ಇದ್ರು. ಜೈಲಿಗೆ ಹೋದವರು, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವವರು ಅನ್ನುತ್ತಾ ವಾಗ್ದಾಳಿ ನಡೆಸ್ತಾನೆ ಇದ್ರು. ಸಿಎಂ ಪಟ್ಟದಿಂದ ಬಿಎಸ್ವೈಯನ್ನ ಕೆಳಗಿಳಿಸಬೇಕು ಅಂತಾ ಓಪನ್ ಆಗಿಯೇ ಧ್ವನಿಯೆತ್ತಿದ್ರು. ಪ್ರತಿಪಕ್ಷ ನಾಯಕರು ನೀಡಬೇಕಿದ್ದ ಹೇಳಿಕೆಗಳನ್ನ ಖುದ್ದು ಯತ್ನಾಳ್ರೇ ನೀಡ್ತಾ ಇದ್ರು. ಅಂದು ಬಿಎಸ್ವೈ ಮತ್ತು ಬೊಮ್ಮಾಯಿ ಸಿಎಂ ಆಗಿದ್ದಾಗ ಯತ್ನಾಳ್ಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಮಂತ್ರಿಯಾಗೋಕೆ ಆಗಿರಲಿಲ್ಲ..ಆ ಸಿಟ್ಟಲ್ಲೇ ಯತ್ನಾಳ್ ರೊಚ್ಚಿಗೇಳ್ತಿದ್ರು. ಚುನಾವಣೆ ಆಯ್ತು..ಪಕ್ಷ ಸೋಲ್ತು.. ಪ್ರತಿಪಕ್ಷ ಸ್ಥಾನದಲ್ಲಿ ಕೂರಬೇಕಾಯ್ತು. ಈಗ ಕಾಂಗ್ರೆಸ್ ಸರ್ಕಾರದ ವಿರುದ್ಧ ಧ್ವನಿಯೇರಿಸಬೇಕಿರೋ ಯತ್ನಾಳ್ ಮತ್ತೆ ತಮ್ಮ ಪಕ್ಷದ ವಿರುದ್ಧವೇ ಸಮರ ಮುಂದುವರೆಸಿದ್ದಾರೆ. ಆ್ಯಂಗ್ರಿ ಯತ್ನಾಳ್ 2.O ವರ್ಷನ್ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ಜನವರಿ 5 ರಿಂದ 9 ರವರೆಗೆ ‘ಅವರೆ ಬೇಳೆ ಮೇಳ’ – ಸಿಲಿಕಾನ್ ಸಿಟಿಯಲ್ಲಿ ಅವರೆ ಪ್ರಿಯರಿಗೆ ಒಂದೊಳ್ಳೇ ಅವಕಾಶ
ಬಿಜೆಪಿ ಫೈರ್ಬ್ರ್ಯಾಂಡ್.. ಹಿಂದುತ್ವದ ಬೆಂಕಿ ಚೆಂಡು ಬಸನಗೌಡ ಯತ್ನಾಳ್ಗೆ ಸ್ವಪಕ್ಷದಲ್ಲೇ ಭಾರಿ ಹಿನ್ನಡೆಯಾಗ್ತಿದೆ. ಚುನಾವಣೆ ಸೋತ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ರೇಸ್ನಲ್ಲಿ ಯತ್ನಾಳ್ ಕೂಡ ಇದ್ರು. ರಾಜ್ಯಾಧ್ಯಕ್ಷನಾಗಬೇಕೆಂಬ ಮಹದಾಸೆ ಯತ್ನಾಳ್ಗೆ ಮೂಗಿನ ತುದಿಯಲ್ಲೇ ಇತ್ತು. ರಾಜ್ಯಾಧ್ಯಕ್ಷನಾಗದಿದ್ರೂ ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನವಾದ್ರೂ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಂತೂ ಇದ್ರು. ಅದ್ರೆ, ಬಿಜೆಪಿ ಹೈಕಮಾಂಡ್ ಕೇಸರಿ ಕಲಿಗೆ ಅಕ್ಷರಶ: ಶಾಕ್ ಕೊಟ್ಟಿತ್ತು. ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಬಿವೈ ವಿಜಯೇಂದ್ರರನ್ನ ನೇಮಕ ಮಾಡಿತ್ತು. ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಆರ್.ಅಶೋಕ್ ಹೆಸರು ಘೋಷಿಸಿತ್ತು. ಯಾವಾಗ ತಾವು ನಿರೀಕ್ಷಿಸಿದ್ದ ಸ್ಥಾನ ಸಿಗಲಿಲ್ಲವೋ ಯತ್ನಾಳ್ಗೆ ಪಿತ್ತ ನೆತ್ತಿಗೇರಿಬಿಡ್ತು. ಅದ್ರಲ್ಲೂ ತಾವು ವಿರೋಧಿಸುತ್ತಲೇ ಬಂದಿರೋ ಬಿಎಸ್ವೈ ಪುತ್ರ ವಿಜಯೇಂದ್ರ ರಾಜ್ಯಾಧ್ಯಕ್ಷ ಪಟ್ಟಕ್ಕೇರಿದ್ರೋ ಯತ್ನಾಳ್ಗಂತೂ ಸಹಿಸಿಕೊಳ್ಳೋಕೆ ಆಗ್ತಿಲ್ಲ. ಹೀಗಾಗಿ ಯತ್ನಾಳ್ ಮತ್ತೆ ಹಳೇ ಡೈಲಾಗ್ಗಳನ್ನೇ ಹೊಡೆಯೋಕೆ ಶುರು ಮಾಡಿದ್ದಾರೆ. ಬಿಎಸ್ವೈ ಕುಟುಂಬವನ್ನ ಟಾರ್ಗೆಟ್ ಮಾಡಿ ಭ್ರಷ್ಟಾಚಾರದ ಮಾತುಗಳನ್ನಾಡ್ತಿದ್ದಾರೆ. ಅಷ್ಟೇ ಅಲ್ಲ, ಸ್ವಪಕ್ಷದ ಮುಂದೆಯೇ ಮತ್ತೊಂದು ಹಂತದ ಹೋರಾಟ ಶುರುಮಾಡಿದ್ದಾರೆ. ರಾಜ್ಯದ ಕೆಲ ಬಿಜೆಪಿ ನಾಯಕರ ವಿರುದ್ಧವಂತೂ ಸಮರವನ್ನೇ ಸಾರಿದ್ದಾರೆ. ಯತ್ನಾಳ್ ಮತ್ತೊಮ್ಮೆ ಬಿಜೆಪಿಗೆ ಕಬ್ಬಿಣದ ಕಡೆಲೆಯಾಗಿದ್ದಾರೆ.
ಈಗ ಯತ್ನಾಳ್ರ ಹೋರಾಟದ ವನ್ ಪಾಯಿಂಟ್ ಅಜೆಂಡಾ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ. ಅರ್ಥಾತ್ ಬಿಎಸ್ವೈ ಪುತ್ರ ವಿಜಯೇಂದ್ರರನ್ನ ಅಧ್ಯಕ್ಷ ಪಟ್ಟದಿಂದ ಕೆಳಗಿಳಿಸಬೇಕು. ಉತ್ತರ ಕರ್ನಾಟಕದವರಿಗೆ ಸ್ಥಾನಮಾನ ಕೊಡಬೇಕು. ಅಂದ್ರೆ ಇಲ್ಲಿ ನನ್ನನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಅಂತಾ ಯತ್ನಾಳ್ ಈಗ ಬಾಯಿ ಬಿಟ್ಟು ಹೇಳ್ತಿಲ್ಲ ಅಷ್ಟೇ. ಬಿಜೆಪಿಯಲ್ಲಿ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡಿಲ್ಲ. ನಾವು ದಕ್ಷಿಣ ಕರ್ನಾಟಕದವರ ಗುಲಾಮರಲ್ಲ. ಭಾರಿ ಅನುಕೂಲ ಇದ್ದವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ದಾರೆ ಅಂತಾ ಬಿವೈ ವಿಜಯೇಂದ್ರಗೆ ಟಾಂಗ್ ಕೊಟ್ಟಿದ್ದಾರೆ. ಜೊತೆಗೆ ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡೋವರೆಗೂ ಬಿಜೆಪಿ ಶಾಸಕಾಂಗ ಸಭೆ ಹೋಗಲ್ಲ ಅಂತಾ ಯತ್ನಾಳ್ ಹಠ ಹಿಡಿದಿದ್ದಾರೆ.
ಇಲ್ಲಿ ಯತ್ನಾಳ್ ಇನ್ನೊಂದು ಮಾತನ್ನ ಕೂಡ ಹೇಳಿದ್ದಾರೆ. ಮುಖ್ಯಮಂತ್ರಿ ಹಳೇ ಮೈಸೂರು ಭಾಗದವರು. ಉಪಮುಖ್ಯಮಂತ್ರಿಯೂ ಹಳೇ ಮೈಸೂರು ಭಾಗದವರು. ವಿರೋಧ ಪಕ್ಷದ ನಾಯಕ ಕೂಡ ಹಳೇ ಮೈಸೂರು ಭಾಗದವರೇ. ಬಿಜೆಪಿ ರಾಜ್ಯಾಧ್ಯಕ್ಷರು ಕೂಡ ಹಳೇ ಮೈಸೂರಿನವರೇ. ಹಾಗಿದ್ರೆ ಉತ್ತರ ಕರ್ನಾಟಕದವರದ ನಾವೇನು ಗಂಟೆ ಹೊಡೀಬೇಕಾ ಅಂತಾ ಯತ್ನಾಳ್ ಪ್ರಶ್ನಿಸಿದ್ದಾರೆ. ಅಸಲಿಗೆ ಈ ವಿಚಾರದಲ್ಲಿ ಯತ್ನಾಳ್ ಎತ್ತಿರೋ ಪಾಯಿಂಟ್ ಸರಿಯಾಗಿಯೇ ಇದೆ. ಆಡಳಿತ ಮತ್ತು ಪ್ರತಿಪಕ್ಷದಲ್ಲಿ ಪ್ರಮುಖ ನಾಲ್ಕು ಹುದ್ದೆಯಲ್ಲಿ ಕೂತಿರೋರು ಎಲ್ಲರೂ ಒಂದೇ ಭಾಗದವರಾಗಿದ್ದು, ಸಹಜವಾಗಿಯೇ ಇತರೆ ಭಾಗಗಳ ನಾಯಕರು ಮತ್ತು ಜನರ ಅಸಮಾಧಾನಕ್ಕೆ ಕಾರಣವಾಗುತ್ತೆ. ಅದ್ರಲ್ಲೂ ಈಗ ಬೆಳಗಾವಿಯಲ್ಲಿ ಅಧಿವೇಶನ ನಡೀತಿದ್ದು, ಕಲಾಪದಲ್ಲೂ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಮಾಡ್ರಪ್ಪಾ ಅನ್ನೋ ಮಾತುಗಳು ಕೇಳಿ ಬರ್ತಿವೆ.
ಬಸನಗೌಡ ಪಾಟೀಲ್ ಯತ್ನಾಳ್ ಕೇವಲ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರನ್ನ ಮಾತ್ರ ಟಾರ್ಗೆಟ್ ಮಾಡ್ತಿಲ್ಲ. ಜೊತೆಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧವೂ ರೊಚ್ಚಿಗೆದ್ದಿದ್ದಾರೆ. ವಿರೋಧ ಪಕ್ಷದ ನಾಯಕನ ಆಯ್ಕೆ ಸಂಬಂಧ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಆಗಮಿಸಿದ್ದ ಯತ್ನಾಳ್ ಸಭೆ ಆರಂಭಕ್ಕೂ ಮುನ್ನವೇ ಹೊರ ನಡೆದಿದ್ರು. ಹೊಂದಾಣಿಕೆ ರಾಜಕಾರಣ ಮಾಡುವವರಿಗೆ ಮಣೆ ಹಾಕಲಾಗುತ್ತಿದೆ ಅಂತಾ ಆರೋಪಿಸಿದ್ರು. ಬೆಳಗಾವಿ ಅಧಿವೇಶನದ ಮೊದಲ ದಿನವೇ ಪ್ರತಿಪಕ್ಷ ನಾಯಕ ಆರ್.ಅಶೋಕ್ಗೆ ಯತ್ನಾಳ್ ಮುಜುಗರವಾಗೋ ಹಾಗೆ ಮಾಡಿದ್ರು. ವಿರೋಧ ಪಕ್ಷದ ನಾಯಕರಿಗೆ ಶುಭಕೋರಿ ಮಾತನಾಡಿ ಅಂತಾ ಸ್ಪೀಕರ್ ಕೇಳಿಕೊಂಡಾಗ, ಕೈಯಲ್ಲೇ ಸಿಗ್ನಲ್ ಮಾಡಿ ಮಾತನಾಡಲ್ಲ ಅಂದುಬಿಟ್ರು. ಅಂತಾ ಯತ್ನಾಳ್ ಅಕ್ಷರಶ: ಬಿಜೆಪಿ ನಾಯಕರನ್ನ ಅಡಕತ್ತರಿಗೆ ಸಿಲುಕಿಸಿಬಿಟ್ಟಿದ್ದಾರೆ. ಚುನಾವಣೆಗೂ ಮುನ್ನ ಯತ್ನಾಳ್ ತಮ್ಮ ಪಕ್ಷದ ನಾಯಕರ ವಿರುದ್ಧ ನೀಡಿದ ಹೇಳಿಕೆಗಳು ಸುಲಭವಾಗಿ ಕಾಂಗ್ರೆಸ್ಗೆ ಆಹಾರವಾಗಿತ್ತು. ಖುದ್ದು ತಾವಾಗಿಯೇ ಕಾಂಗ್ರೆಸ್ ಕೈಗೆ ಅಸ್ತ್ರ ಕೊಟ್ಟಿದ್ರು. ಎಲೆಕ್ಷನ್ನಲ್ಲಿ ಯಾವ ರೀತಿ ಎಫೆಕ್ಟ್ ಆಗಬಹುದು ಅನ್ನೋ ಬಗ್ಗೆ ಕ್ಯಾರೇ ಮಾಡದೆ ರಾಜ್ಯ ಬಿಜೆಪಿಯೊಳಗಿನ ಹುಳುಕುಗಳನ್ನ ತಮ್ಮ ಬಾಯಲ್ಲೇ ಹೊರ ಹಾಕಿದ್ರು. ನೋ ಡೌಟ್..ಯತ್ನಾಳ್ ಮಾತುಗಳು ಪಕ್ಷಕ್ಕೆ ಡ್ಯಾಮೇಜ್ ಆಗಿರೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಅಷ್ಟಾದ್ರೂ ಹೈಕಮಾಂಡ್ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳೋ ಧೈರ್ಯ ಮಾಡಿರಲಿಲ್ಲ. ಕೇವಲ ನೋಟಿಸ್ ಕೊಟ್ಟು ಸುಮ್ಮನಾಗಿಬಿಟ್ಟಿತ್ತು. ಯಾಕಂದ್ರೆ ಉತ್ತರಕರ್ನಾಟಕ ಭಾಗದಲ್ಲಿ ಯತ್ನಾಳ್ ಎಷ್ಟು ಪ್ರಭಾವಿ ಅನ್ನೋದು ಎಲ್ಲರಿಗೂ ಗೊತ್ತಿರೋದು. ಯತ್ನಾಳ್ರನ್ನ ದೂರ ಮಾಡಿದೆ ಪಕ್ಷಕ್ಕೆ ಹೊಡೆತ ಬೀಳೋದು ಗ್ಯಾರಂಟಿ. ಹಿಂದುತ್ವದ ಅಜೆಂಡಾಗೆ ಹಿನ್ನೆಡೆಯಾಗೋದ್ರಲ್ಲಿ ಅನುಮಾನವೇ ಇಲ್ಲ. ಯಾವ ಪಕ್ಷದಿಂದ ನಿಂತ್ರೂ, ಇಲ್ಲಾ ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದ್ರೂ ವಿಜಯಪುರದಲ್ಲಿ ಗೆಲ್ಲೋ ಸಾಮರ್ಥ್ಯ ಯತ್ನಾಳ್ಗೆ ಇದೆ. ಇನ್ನು ಯತ್ನಾಳ್ರ ಸಿಟ್ಟು, ಆಕ್ರೋಶ ಏನಿದ್ರೂ ಕೆಲ ರಾಜ್ಯ ನಾಯಕರ ವಿರುದ್ಧವಷ್ಟೇ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಬಗ್ಗೆ ಯತ್ನಾಳ್ ಭಾರಿ ಗೌರವ ಇಟ್ಟುಕೊಂಡಿದ್ದಾರೆ. ಮೋದಿ, ಅಮಿತ್ ಶಾರನ್ನ ಸಮರ್ಥಿಸಿ, ಗುಣಗಾನ ಮಾಡಿಕೊಂಡೇ ಇಲ್ಲಿ ರಾಜ್ಯ ನಾಯಕರ ರೊಚ್ಚಿಗೇಳ್ತಿದ್ದಾರೆ. ಹೀಗಾಗಿ ತಮ್ಮ ವಿರುದ್ಧ ಹೈಕಮಾಂಡ್ ಕಠಿಣ ಕ್ರಮ ಕೈಗೊಳ್ಳೋದಿಲ್ಲ ಅನ್ನೋದು ಯತ್ನಾಳ್ಗೂ ಚೆನ್ನಾಗಿಯೇ ಗೊತ್ತಿದೆ. ಹೀಗಾಗಿಯೇ ರಾಜ್ಯದಲ್ಲಿ ಇಷ್ಟೆಲ್ಲಾ ಹಲ್ಚಲ್ ಎಬ್ಬಿಸ್ತಾ ಇದ್ದಾರೆ.
ಇವೆಲ್ಲದ್ರ ಮಧ್ಯೆ ಯತ್ನಾಳ್ ಇಬ್ಬರು ರಾಷ್ಟ್ರೀಯ ನಾಯಕರ ವಿರುದ್ಧವೂ ಸಿಟ್ಟಾಗಿದ್ದಾರೆ. ಇಬ್ಬರು ಸಿಂಗ್ಗಳಿಂದಾಗಿ ರಾಜ್ಯ ಹಾಳಾಗಿದೆ ಅನ್ನೋ ಮಾತನ್ನ ಹೇಳಿದ್ದಾರೆ. ಆದ್ರೆ ಆ ಸಿಂಗ್ಗಳು ಯಾರು ಅನ್ನೋದನ್ನ ಯತ್ನಾಳ್ ಬಹಿರಂಗವಾಗಿ ಹೇಳಿಲ್ಲ. ಈ ಹಿಂದೆ ಚುನಾವಣೆಗೂ ಮುನ್ನ ರಾಜ್ಯ ಬಿಜೆಪಿ ಉಸ್ತುವಾರಿಯಾಗಿದ್ದ ಅರುಣ್ ಸಿಂಗ್ ವಿರುದ್ಧ ಹಲವು ಬಾರಿ ಆಕ್ರೋಶ ಹೊರ ಹಾಕಿದ್ರು. ಈಗಲೂ ಅಷ್ಟೇ, ಯತ್ನಾಳ್ ಪ್ರಸ್ತಾಪಿಸಿರೋ ಸಿಂಗ್ ಪೈಕಿ ಒಬ್ಬರು ಅರುಣ್ ಸಿಂಗ್ ಅನ್ನೋದ್ರಲ್ಲಿ ಯಾವುದೇ ಅನುಮಾನ ಬೇಡ. ಹೀಗಾಗಿ ಯತ್ನಾಳ್ ಈಗ ದೆಹಲಿಗೆ ಹೋಗಿ ಹೈಕಮಾಂಡ್ ಕದ ತಟ್ಟೋಕೆ ತೀರ್ಮಾನಿಸಿದ್ದಾರೆ. ವರಿಷ್ಠರ ಮುಂದೆಯೇ ನಿಂತು ಹೋರಾಟವನ್ನ ಮತ್ತೊಂದು ಹಂತಕ್ಕೇರಿಸೋಕೆ ಮುಂದಾಗಿದ್ದಾರೆ. ದೆಹಲಿಗೆ ಹೋಗಿ, ಅಮಿತ್ ಶಾ ಮತ್ತು ಜೆಪಿ ನಡ್ಡಾರನ್ನ ಭೇಟಿಯಾಗಿ ಕರ್ನಾಟಕ ಬಿಜೆಪಿಯಲ್ಲಿ ಏನೆಲ್ಲಾ ನಡೀತಿದೆ ಅನ್ನೋದನ್ನ ಹೇಳ್ತೀನಿ. ಇಬ್ಬರು ಮಹಾನುಭಾವರಿಂದ ರಾಜ್ಯ ಹಾಳಾಗಿದೆ. ಒಬ್ಬ ದೆಹಲಿಯವನು..ಇನ್ನೊಬ್ಬ ಕರ್ನಾಟಕದವನು. ಎಲ್ಲವನ್ನೂ ವರಿಷ್ಠರಿಗೆ ತಿಳಿಸ್ತೀನಿ ಅಂತಾ ಯತ್ನಾಳ್ ಸ್ವಪಕ್ಷದವರ ವಿರುದ್ಧವೇ ತೋಳು ತಟ್ಟಿದ್ದಾರೆ. ಕೇವಲ ಯತ್ನಾಳ್ ಅಷ್ಟೇ ಅಲ್ಲ, ರಾಜ್ಯಾಧ್ಯಕ್ಷ ಸ್ಥಾನ ಕೈತಪ್ಪಿದ್ದಕ್ಕೆ ಮಾಜಿ ಸಚಿವ ವಿ.ಸೋಮಣ್ಣ ಕೂಡ ದೆಹಲಿಗೆ ತೆರಳೋಕೆ ನಿರ್ಧರಿಸಿದ್ದಾರೆ. ಹಾಗೆಯೇ ರಮೇಶ್ ಜಾರಕಿಹೊಳಿ, ಅರವಿಂದ್ ಬೆಲ್ಲದ್ ಕೂಡ ಹೈಕಮಾಂಡ್ ಭೇಟಿಯಾಗೋ ಯೋಚನೆಯಲ್ಲಿದ್ದಾರೆ.
ಇನ್ನು ತಮ್ಮ ಪಕ್ಷದವರ ವಿರುದ್ಧ ಯತ್ನಾಳ್ ಸಿಟ್ಟು ಎಷ್ಟರ ಮಟ್ಟಿಗೆ ಇದೆ ಅಂದ್ರೆ, ಇದೇ ಸಿಟ್ಟಲ್ಲೇ ಸಿಎಂ ಸಿದ್ದರಾಮಯ್ಯ ಇನ್ನೂ 5 ವರ್ಷ ಮುಖ್ಯಮಂತ್ರಿಯಾಗಿರಲಿ ಎಂದಿದ್ದಾರೆ. ಚುನಾವಣೆ ಮುಗಿದ ಕಾಂಗ್ರೆಸ್ ಅಧಿಕಾರಕ್ಕೇರಿದೆ, ಇನ್ನೊಂದು ವರ್ಷದಲ್ಲಿ ರಾಜ್ಯ ರಾಜಕೀಯದಲ್ಲಿ ಸುಂಟರಗಾಳಿಯೇಳುತ್ತೆ. ಸರ್ಕಾರವೇ ಬದಲಾಗಿಬಿಡುತ್ತೆ ಅಂತೆಲ್ಲಾ ಇದೇ ಯತ್ನಾಳ್ ಡೈಲಾಗ್ ಹೊಡೆದಿದ್ರು. ಆದ್ರೀಗ ನೋಡಿದ್ರೆ, ಸಿದ್ದರಾಮಯ್ಯರೇ 5 ವರ್ಷ ಸಿಎಂ ಆಗಿರಲಿ ಎಂದಿದ್ದಾರೆ. ಅಂತೂ ಬಿಜೆಪಿಗೆ ಮುಜುಗರವಾಗೋಕೆ ಏನೆಲ್ಲಾ ಮಾಡಬೇಕೋ ಅವೆಲ್ಲವನ್ನೂ ಯತ್ನಾಳ್ ಮಾಡ್ತಾ ಇದ್ದಾರೆ. ಒಂದು ವೇಳೆ ಹೈಕಮಾಂಡ್ ನಾಯಕರ ಭೇಟಿಗೆ ಅವಕಾಶ ಸಿಕ್ಕರೆ ಯತ್ನಾಳ್ ಅಲ್ಲಿ ಹೋಗಿ ಅದೇನ್ ಬಾಂಬ್ ಸಿಡಿಸ್ತಾರಾ? ವರಿಷ್ಠರ ಕಿವಿಗೆ ಅದೇನ್ ದೂರು ಕೊಡ್ತಾರೋ? ಯತ್ನಾಳ್ರನ್ನ ಯಾವ ರೀತಿ ಸಮಾಧಾನಪಡಿಸ್ತಾರೋ ಗೊತ್ತಿಲ್ಲ. ಯಾಕಂದ್ರೆ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರರನ್ನ ಕೆಳಕ್ಕಿಳಿಸೋ ಪ್ರಶ್ನೆಯೇ ಬರೋದಿಲ್ಲ. ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನದಲ್ಲೂ ಯಾವುದೇ ಬದಲಾವಣೆಗಳಾಗೋದಿಲ್ಲ. ಹಾಗಂತೂ ಹಿಂದೂ ಹುಲಿ ಯತ್ನಾಳ್ರನ್ನ ಬಿಡೋಕೂ ಗೊತ್ತಿಲ್ಲ. ನುಂಗೋಕೂ ಆಗಲ್ಲ.. ಉಗಿಯೋಕೂ ಆಗಲ್ಲ.. ಹೀಗಾಗಿ ಈಗ ಹೈಕಮಾಂಡ್ ತಲೆಗೆ ಹತ್ತಿರೋ ಯತ್ನಾಳ್ ಕೋಪತಾಪವನ್ನ ಹೇಗೆ ಇಳಿಸ್ತಾರೆ ಅನ್ನೋದೆ ಕುತೂಹಲ ಕೆರಳಿಸಿದೆ.