ಯತ್ನಾಳ್ ಅಡ್ಡಕ್ಕೆ ವಿಜಯೇಂದ್ರ! – ರೆಬೆಲ್ ನಾಯಕನ ಉಚ್ಚಾಟನೆ ಫಿಕ್ಸ್? 

ಯತ್ನಾಳ್ ಅಡ್ಡಕ್ಕೆ ವಿಜಯೇಂದ್ರ! – ರೆಬೆಲ್ ನಾಯಕನ ಉಚ್ಚಾಟನೆ ಫಿಕ್ಸ್? 

ಬಿಜೆಪಿ ನಾಯಕರ ಪಾಲಿಗೆ ದುಸ್ವಪ್ನವಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡುವಂತೆ ಒತ್ತಾಯ ಹೆಚ್ಚಾಗುತ್ತಿದೆ. ಪಕ್ಷದ ಶಿಸ್ತು ಉಲ್ಲಂಘಿಸುತ್ತಿರುವ ಯತ್ನಾಳ್ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಹೈಕಮಾಂಡ್​ಗೆ ಒತ್ತಾಯಿಸಲು ಬಿಜೆಪಿ ಮುಖಂಡರು ನಿರ್ಧರಿಸಿದ್ದಾರೆ. ಶಾಸಕ ಬಸನಗೌಡ ಯತ್ನಾಳ್ ಆಗಿಂದಾಗ್ಗೆ ನೀಡುತ್ತಿರುವ ಬಹಿರಂಗ ಹೇಳಿಕೆಗಳು ಪಕ್ಷಕ್ಕೆ ಮುಜುಗರ ತರುತ್ತಿರುವುದು ಅಷ್ಟೆ ಅಲ್ಲ, ಸಂಘಟನೆಗೆ ಹಿನ್ನೆಡೆಯಾಗುತ್ತಿದೆ. ಈ ಬಗ್ಗೆ ತುರ್ತು ಕ್ರಮ ಆಗಲೇಬೇಕು ಎಂದು ಒತ್ತಾಯಿಸಿದ್ದಾರೆ. ಯತ್ನಾಳ್ ವಿಷಯಕ್ಕೆ ಎಲ್ಲ ಸಭೆಯಲ್ಲಿ ಆದ್ಯತೆ ನೀಡಿದರೆ ಅವರಿಗೆ ದೊಡ್ಡ ಮನ್ನಣೆ ದೊರೆಯುತ್ತದೆ. ಈ ಬಗ್ಗೆ ಚರ್ಚೆ ಮಾಡುವುದು ಬೇಡ ಎನ್ನುವ ಅಭಿಪ್ರಾಯವೂ ಕೇಳಿಬಂದಿದೆ.

ಇದನ್ನೂ ಓದಿ: 500 ರೂಪಾಯಿಗೆ ಸಿಗುತ್ತಾ ಗ್ಯಾಸ್ ಸಿಲಿಂಡರ್? – ಇ-ಕೆವೈಸಿ ಮಾಡಿಸದಿದ್ರೆ ಏನಾಗುತ್ತೆ?

ಯತ್ನಾಳ್ ಉಚ್ಚಾಟನೆಗೆ ಒತ್ತಾಯ?

ಚುನಾವಣೆಗೂ ಮೊದಲಿನಿಂದಲೂ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯ ಹಲವು ನಾಯಕರ ವಿರುದ್ಧ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಾ ಬರುತ್ತಿದ್ದಾರೆ. ಬಿಎಸ್​ವೈ ಪುತ್ರ ವಿಜಯೇಂದ್ರರಿಗೆ ಶಿಕಾರಿಪುರ ಟಿಕೆಟ್ ನೀಡಿದಾಗಲೂ ನಾನು ಕುಟುಂಬ ರಾಜಕಾರಣ ಮಾಡಲ್ಲ ಎಂದು ಟಾಂಟ್ ಕೊಟ್ಟಿದ್ದರು. ಹಾಗೇ ಸಿಎಂ ಕುರ್ಚಿ ಸಿಗಬೇಕಂದ್ರೆ ಹೈಕಮಾಂಡ್​ಗೆ 2,500 ಕೋಟಿ ಕೊಡ್ಬೇಕು. ನಾನೆಲ್ಲಿಂದ ಅಷ್ಟು ದುಡ್ಡು ತಂದು ಕೊಡಲಿ ಎಂದಿದ್ದರು. ಹೀಗಾಗಿ ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಅಥವಾ ಪಕ್ಷದಿಂದಲೇ ಉಚ್ಚಾಟನೆ ಮಾಡುವಂತೆ ಬಿಜೆಪಿ ನಾಯಕರು ಹೈಕಮಾಂಡ್ ಮುಂದೆ ಹೋಗಲು ನಿರ್ಧರಿಸಿದ್ದಾರೆ. ಯತ್ನಾಳ್ ಎಲ್ಲೆಲ್ಲಿ ಏನೇನು ಮಾತನಾಡಿದ್ದಾರೆ ಎನ್ನುವುದನ್ನು ಆಡಿಯೋ, ವಿಡಿಯೋ ಕ್ಲಿಪ್ಪಿಂಗ್ ಸಹಿತ ಹೈಕಮಾಂಡ್​ಗೆ ಕಳುಹಿಸಿ ಕ್ರಮಕ್ಕೆ ಒತ್ತಾಯಿಸಲು ಹಿರಿಯ ನಾಯಕರು ನಿರ್ಧರಿಸಿದ್ದಾರೆ. ಯತ್ನಾಳ್ ಮೇಲೆ ಕೇಂದ್ರದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗೋಣ ಎಂದು ನಿರ್ಧರಿಸಲಾಗಿದೆ.

ಯತ್ನಾಳ್ ಬಿಜೆಪಿ ವಿರುದ್ಧ ಮಾತಾಡೋದು ಇದೇ ಮೊದಲೇನಲ್ಲ. ಆದ್ರೆ ರಾಜ್ಯ ಬಿಜೆಪಿಯ ಚುಕ್ಕಾಣಿಯನ್ನ ಬಿಎಸ್​ವೈ ಪುತ್ರ ಬಿ.ವೈ ವಿಜಯೇಂದ್ರ ಹಿಡಿದ ಮೇಲೆ ಯತ್ನಾಳ್ ಫುಲ್ ರೆಬೆಲ್ ಆಗಿದ್ದಾರೆ. ವಿಜಯೇಂದ್ರ ವಿರುದ್ಧ ಸಿಡಿದು ನಿಂತಿರುವ ಬಸವನಗೌಡ ಪಾಟೀಲ್ ಯತ್ನಾಳ್ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಈ ಆರೋಪ ಆಡಳಿತ ಪಕ್ಷಕ್ಕೆ ದೊಡ್ಡ ಅಸ್ತ್ರವಾಗಿ ಸಿಕ್ಕಿತ್ತು. ಈ ಅಂತರ್ ಯುದ್ಧದ ಮಧ್ಯೆ ವಿಜಯೇಂದ್ರ ಅವರು ಯತ್ನಾಳ್ ಅಡ್ಡಕ್ಕೆ ಲಗ್ಗೆ ಇಡುತ್ತಿದ್ದಾರೆ. ವಿಜಯೇಂದ್ರರ ವಿಜಯಪುರ ಭೇಟಿ ಭಾರೀ ಕುತೂಹಲ ಮೂಡಿಸಿದೆ.

ಯತ್ನಾಳ್ ಅಖಾಡಕ್ಕೆ ವಿಜಯೇಂದ್ರ!

ರಾಜ್ಯ ಬಿಜೆಪಿ ಚುಕ್ಕಾಣಿ ಹಿಡಿದ ಮೇಲೆ ಪ್ರಥಮ ಬಾರಿಗೆ ವಿಜಯಪುರ ನಗರಕ್ಕೆ ವಿಜಯೇಂದ್ರ ಪಾದಾರ್ಪಣೆ ಮಾಡುತ್ತಿದ್ದಾರೆ. ಶನಿವಾರ ವಿಜಯಪುರ ನಗರಕ್ಕೆ ವಿಜಯೇಂದ್ರ ಆಗಮಿಸುತ್ತಿದ್ದು, ನಗರದ ಜಿಲ್ಲಾ ಬಿಜೆಪಿ ಕಛೇರಿಗೆ ಭೇಟಿ ನೀಡಲಿದ್ದಾರೆ. ಬಿಜೆಪಿ ನಾಯಕರ ಸಭೆ ನಡೆಸಿ ಜಿಲ್ಲಾ ಬಿಜೆಪಿಯ ಸಂಘಟನೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ನಂತರ ನಗರದ ಆಶ್ರಮದಲ್ಲಿರುವ ಶ್ರೀ ಸಿದ್ದೇಶ್ವರ ಆಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ಲಿಂಗೈಕ್ಯದ ಹಿನ್ನೆಲೆ ನಡೆಯುತ್ತಿರುವ ಗುರುನಮನ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಸಹಜವಾಗಿಯೇ ಬಿಜೆಪಿ ರಾಜ್ಯಧ್ಯಕ್ಷರ ವಿಜಯಪುರ ಭೇಟಿಯಿಂದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿದ್ರೆ, ಇನ್ನೊಂದೆಡೆ ಯತ್ನಾಳ್ ವಿರೋಧಿಗಳಲ್ಲಿ ಕುತೂಹಲ ಕೂಡ ಮೂಡಿದೆ. ಯಡಿಯೂರಪ್ಪ ವಿರುದ್ಧ ಗಂಭೀರ ಆರೋಪ ಮಾಡಿರುವ ಯತ್ನಾಳ್ ವಿರುದ್ಧ ಕ್ರಮದ ಬಗ್ಗೆ ವಿಜಯೇಂದ್ರ ಘೋಷಿಸಿಸುತ್ತಾರಾ ಎಂಬ ಚರ್ಚೆ ಶುರುವಾಗಿದೆ.

ಆದ್ರೆ ಯಾವುದಕ್ಕೂ ಕೇರ್ ಮಾಡದ ಯತ್ನಾಳ್ ಮಾತ್ರ ತಮ್ಮ ಬಾಯಿಗೆ ಲಗಾಮು ಹಾಕ್ತಿಲ್ಲ. ತಮ್ಮ ಹೇಳಿಕೆಗಳ ಪರಿಣಾಮ ಏನಾಗಬಹುದೆಂದು ಅರಿತಿರುವ ಯತ್ನಾಳ್ ಪಕ್ಷದಿಂದ ಉಚ್ಛಾಟನೆ ಮಾಡಿದರೆ ಮಾಡಲಿ ಎಂಬ ನಿರ್ಧಾರಕ್ಕೆ ಬಂದಂತಿದೆ. ಶಾಸನಾತ್ಮಕವಾಗಿ ಈ ಪ್ರಕ್ರಿಯೆಗೆ ಯಾವುದೇ ಮಾನ್ಯತೆಗಳಿಲ್ಲ, ಶಾಸಕತ್ವಕ್ಕೂ ಧಕ್ಕೆ ಆಗುವುದಿಲ್ಲ. ಯಡಿಯೂರಪ್ಪ ವಿರುದ್ಧ ಮತ್ತಷ್ಟು ದಾಳಿಗೆ ಪರವಾನಗಿ ಸಿಕ್ಕಂತಾಗುತ್ತದೆ. ಹೀಗಾಗಿ ಯತ್ನಾಳ್ ತಮ್ಮ ರೆಬೆಲ್ ವರಸೆಯನ್ನ ಮುಂದುವರಿಸಿದ್ದಾರೆ.

Shwetha M